
Sharada Sharannavaratri Mahotsava at Gangavathi Sri Sringeri Shankara Math from October 11.
ಗಂಗಾವತಿ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಅ.11ರಿಂದ ಶಾರದಾ ಶರನ್ನವರಾತ್ರಿ ಮಹೋತ್ಸವ
ಗಂಗಾವತಿ, ಅ.10: ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಪರಮಾನುಗ್ರಹದೊಂದಿಗೆ ಅ.11ರಿಂದ 21ರವರೆಗೆ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ತಿಳಿಸಿದರು.
ಗಂಗಾವತಿಯ ಶಂಕರ ಮಠದಲ್ಲಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶ್ರೀ ಪರಾಭವ ನಾಮ ಸಂವತ್ಸರದ ಆಶ್ವೀಜ ಶುಕ್ಲ ಪ್ರತಿಪದೆಯಿಂದ ಶುಕ್ಲ ದಶಮಿಯವರೆಗೆ ನಡೆಯಲಿರುವ ಮಹೋತ್ಸವದಲ್ಲಿ ಶ್ರೀ ಶಾರದಾ ಪರಮೇಶ್ವರಿಯ ಆರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.
ಈ ಪುಣ್ಯ ಮಹೋತ್ಸವದಲ್ಲಿ ಸಮಸ್ತ ಆಸ್ತಿಕ ಬಂಧುಗಳು ತನು, ಮನ ಹಾಗೂ ಧನದಿಂದ ಪಾಲ್ಗೊಂಡು ಶ್ರೀ ಶಾರದಾ ಪರಮೇಶ್ವರಿಯ ಹಾಗೂ ಉಭಯ ಜಗದ್ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಶಾರದಾ ಶಂಕರ ಭಕ್ತ ಮಂಡಳಿ ಹಾಗೂ ಶ್ರೀ ದತ್ತ ಭಕ್ತ ಮಂಡಳಿಯ ವತಿಯಿಂದ ಮನವಿ ಮಾಡಲಾಗಿದೆ.
ಆಮಂತ್ರಣ ಪತ್ರಿಕೆ ಖುದ್ದಾಗಿ ತಲುಪದಿದ್ದರೂ, ಇದನ್ನೇ ವೈಯಕ್ತಿಕ ಆಹ್ವಾನವೆಂದು ಭಾವಿಸಿ ಎಲ್ಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಮಠದ ಗೌರವಾನ್ವಿತ ವ್ಯವಸ್ಥಾಪಕರಾದ ನಾರಾಯಣರಾವ್ ವೈದ್ಯ ಹಾಗೂ ಟ್ರಸ್ಟ್ನ ಸದಸ್ಯರು ಮನವಿ ಮಾಡಿದ್ದಾರೆ.




