ನಾಲ್ಕು ದಿನಗಳಿಂದ ಬೀದಿ ದೀಪಗಳಿಲ್ಲದೆ ಕತ್ತಲಲ್ಲಿ ಬಸ್ ನಿಲ್ದಾಣ–ಜುಲೈನಗರ ರಸ್ತೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Bus Stand–Julainagar Road in darkness for four days due to lack of streetlights.

ನಾಲ್ಕು ದಿನಗಳಿಂದ ಬೀದಿ ದೀಪಗಳಿಲ್ಲದೆ ಕತ್ತಲಲ್ಲಿ ಬಸ್ ನಿಲ್ದಾಣ–ಜುಲೈನಗರ ರಸ್ತೆ

ಜಾಹೀರಾತು


ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮ್ಯಾಗಳಮನಿ ಆಕ್ರೋಶ; ತಕ್ಷಣ ದುರಸ್ತಿಗೆ ಆಗ್ರಹ


ಗಂಗಾವತಿ, ಅ.10: ನಗರದ ಪ್ರಮುಖ ರಸ್ತೆಯಾದ ಬಸ್ ನಿಲ್ದಾಣದಿಂದ ಜುಲೈನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ, ನೀಲಕಂಠೇಶ್ವರ ದೇವಸ್ಥಾನದಿಂದ ಕನಕದಾಸ ವೃತ್ತದವರೆಗೆ ಕಳೆದ ನಾಲ್ಕು ದಿನಗಳಿಂದ ಬೀದಿ ದೀಪಗಳು ಉರಿಯದೆ ರಸ್ತೆ ಕತ್ತಲಲ್ಲಿ ಮುಳುಗಿದೆ. ಇದರಿಂದ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಆತಂಕ ಮತ್ತು ತೊಂದರೆ ಅನುಭವಿಸುವಂತಾಗಿದೆ.
ಸಂಬಂಧಪಟ್ಟ ಇಲಾಖೆಯಿಂದ ಈ ಮಾರ್ಗದಲ್ಲಿ ‘ತಿರುಪತಿ ಮಾದರಿ’ಯ ಸುಂದರ ವಿದ್ಯುತ್ ಕಂಬಗಳು ಹಾಗೂ ದೀಪಗಳನ್ನು ಅಳವಡಿಸಲಾಗಿದೆ. ಲೈನ್‌ನಲ್ಲಿ ವಿದ್ಯುತ್ ಪ್ರವಾಹವಿದ್ದರೂ ಕಂಬಗಳಲ್ಲಿರುವ ದೀಪಗಳು ಮಾತ್ರ ಬೆಳಗುತ್ತಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಿರುವ ದೀಪಗಳು ಸಾರ್ವಜನಿಕರ ಬಳಕೆಗೆ ಬಾರದಿದ್ದರೆ ಅವು ಕೇವಲ ಅಲಂಕಾರಿಕ ವಸ್ತುಗಳಾಗಿಯೇ ಉಳಿಯುತ್ತವೆ ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಮುಖ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಹಾಗೂ ಸಾವಿರಾರು ಪಾದಚಾರಿಗಳು ಸಂಚರಿಸುತ್ತಾರೆ. ರಾತ್ರಿ ವೇಳೆ ರಸ್ತೆ ಕತ್ತಲಿನಿಂದ ಕೂಡಿರುವುದರಿಂದ ಪಾದಚಾರಿಗಳು ಬಿದ್ದು ಗಾಯಗೊಳ್ಳುವ ಹಾಗೂ ವಾಹನ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಅಲ್ಲದೆ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದಲೂ ಬೀದಿ ದೀಪಗಳ ನಿರಂತರ ಕಾರ್ಯನಿರ್ವಹಣೆ ಅತ್ಯಗತ್ಯವಾಗಿದೆ.
“ನಾಲ್ಕು ದಿನಗಳಿಂದ ಬೀದಿ ದೀಪಗಳು ಉರಿಯದಿದ್ದರೂ ಸಂಬಂಧಪಟ್ಟ ನಗರಸಭೆ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ. ಗಂಗಾವತಿ ನಗರದ ಮೂಲಸೌಕರ್ಯಗಳ ಬಗ್ಗೆ ಇನ್ನಾದರೂ ಹೆಚ್ಚಿನ ಗಮನ ಹರಿಸಬೇಕು,” ಎಂದು ಮ್ಯಾಗಳಮನಿ ಒತ್ತಾಯಿಸಿದ್ದಾರೆ.
ನಗರದ ಪ್ರಮುಖ ರಸ್ತೆಯಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ದೋಷ ಪತ್ತೆಹಚ್ಚಿ ಬೀದಿ ದೀಪಗಳನ್ನು ದುರಸ್ತಿಗೊಳಿಸಿ ರಸ್ತೆಗಾಗಿರುವ ಕತ್ತಲನ್ನು ನಿವಾರಿಸಬೇಕು ಎಂದು ಮ್ಯಾಗಳಮನಿ ಆಗ್ರಹಿಸಿದ್ದಾರೆ.

Total Views: 0
ಜಾಹೀರಾತು
Share This Article