
A Youth Parliament helps in understanding the ideals of democracy.ಪ್ರಜಾಪ್ರಭುತ್ವದ ಆಶಯ ಅರಿಯಲು ಯುವ ಸಂಸತ್ತು ಸಹಕಾರಿ


ಯುವಜನರಲ್ಲಿ ನಾಯಕತ್ವ, ಸಂವಹನ ಕೌಶಲ ಮತ್ತು ಜವಾಬ್ದಾರಿ ಬೆಳೆಸಲು ಕಾರ್ಯಕ್ರಮ ಸಹಕಾರಿ: ಪ್ರೊ. ಅಶೋಕ ಸಂಗಪ್ಪ ಆಲೂರ
ಚಿಕ್ಕಅಳುವಾರ, ಅ. 10: ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯ, ಸಂಸದೀಯ ಕಾರ್ಯವಿಧಾನ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಯನ್ನು ಯುವಜನರು ಅರಿತುಕೊಳ್ಳಲು ಯುವ ಸಂಸತ್ತು ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಪಟ್ಟರು.
ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಹಯೋಗದಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2026ನೇ ಸಾಲಿನ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಸಂಸದೀಯ ಕಲಾಪದ ಮಾದರಿಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಪ್ರಶ್ನೋತ್ತರ, ಚರ್ಚೆ, ವಿಚಾರ ಮಂಡನೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಅರಿತುಕೊಂಡರು.
ಯುವಜನರಲ್ಲಿ ನಾಯಕತ್ವ ಗುಣ, ಸಂವಹನ ಕೌಶಲ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಮತ್ತು ರಾಜಕೀಯ ಜವಾಬ್ದಾರಿಯನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ಮೌಲ್ಯಗಳು, ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪತ್ರಕರ್ತ ಚಂದ್ರಮೋಹನ್, ಪ್ರಾಧ್ಯಾಪಕಿ ಡಾ. ನಿರ್ಮಲ ಹಾಗೂ ವಕೀಲ ಯತೀಶ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳ ವಿಷಯ ಮಂಡನೆ, ಸಂಸದೀಯ ನಡವಳಿಕೆ, ವಿಷಯದ ಅರಿವು, ಭಾಷಾ ಬಳಕೆ, ಸಮಯಪಾಲನೆ ಹಾಗೂ ಚರ್ಚೆಯಲ್ಲಿ ಪಾಲ್ಗೊಂಡ ರೀತಿಯನ್ನು ಆಧರಿಸಿ ಮೌಲ್ಯಮಾಪನ ಮಾಡಲಾಯಿತು.
ಲೋಹಿತ್ಗೆ ಪ್ರಥಮ ಸ್ಥಾನ
ಯುವ ಸಂಸತ್ತಿನಲ್ಲಿ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲೋಹಿತ್ ಪ್ರಥಮ ಸ್ಥಾನ ಪಡೆದರು. ಕೊಡಗು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮೋಹನ್ ಹೆಚ್.ಎಂ. ದ್ವಿತೀಯ ಸ್ಥಾನ ಗಳಿಸಿದರು. ಸೋಮವಾರಪೇಟೆಯ ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನ ಮೋಹನ್ ಹಾಗೂ ಜ್ಞಾನ ಕಾವೇರಿ ಆವರಣದ ಕನ್ನಡ ವಿಭಾಗದ ಪ್ರೀತ ಸಿ. ಅವರು ಜಂಟಿಯಾಗಿ ತೃತೀಯ ಸ್ಥಾನ ಪಡೆದರು.
ಯುವ ಸಂಸತ್ತಿನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮಕ್ಕೂ ಆಯ್ಕೆ ಮಾಡಲಾಯಿತು.
ಬಿಆರ್ಸಿ ಮಂಜೇಶ್ ನಿರೂಪಿಸಿದರು. ಕೊಡಗು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಡಾ. ಜಮೀರ್ ಅಹ್ಮದ್ ಸ್ವಾಗತಿಸಿದರು.
ಕೊಡಗು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಸುರೇಶ್ ಎಂ., ತಾಲೂಕು ಮಟ್ಟದ ಯುವ ಸಂಸತ್ತು ಸಮಿತಿಯ ಸೋಮವಾರಪೇಟೆ ಸಂಚಾಲಕ ಹಾಗೂ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಸಮಿತಿಯ ಕಾರ್ಯದರ್ಶಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಎಂ., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಸಮಿತಿ ಸದಸ್ಯ ಸಿದ್ದೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು, ವಿಶ್ವವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಮಾಧ್ಯಮ ಪ್ರತಿನಿಧಿಗಳು, ಪೋಷಕರು ಹಾಗೂ ಯುವ ಸಂಸತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
“ಯುವಜನರಲ್ಲಿ ನಾಯಕತ್ವದ ಗುಣ, ಸಂವಹನ ಕೌಶಲ, ಆತ್ಮವಿಶ್ವಾಸ, ಸಾಮಾಜಿಕ ಮತ್ತು ರಾಜಕೀಯ ಜವಾಬ್ದಾರಿಯನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ.”




