Allegations of serious irregularities against Sanapura PDO – Demand for a comprehensive inquiryFeedba

Allegations of serious irregularities against Sanapura PDO – Demand for a comprehensive inquiry
ಸಣಾಪುರ ಪಿಡಿಒ ವಿರುದ್ಧ ಗಂಭೀರ ಅಕ್ರಮಗಳ ಆರೋಪ – ಸಮಗ್ರ ತನಿಖೆ ಮತ್ತು ತಕ್ಷಣದ ಕ್ರಮಕ್ಕೆ ಆಗ್ರಹ
ಅನಧಿಕೃತ ಕಟ್ಟಡ ನಿರ್ಮಾಣ, ಇ-ಸ್ವತ್ತು ವಿತರಣೆ ಹಾಗೂ ಸರ್ಕಾರಿ ಅನುದಾನ ದುರುಪಯೋಗದ ಆರೋಪ;
ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತು ಅಥವಾ ವರ್ಗಾವಣೆಗೆ ಮನವಿ
ಗಂಗಾವತಿ: ಸಣಾಪುರ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ವತ್ಸಲಾ ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಭ್ರಷ್ಟಾಚಾರ ಮತ್ತು ಕರ್ತವ್ಯಲೋಪದ ಆರೋಪಗಳ ಬಗ್ಗೆ ವಕೀಲರಾದ ಬೆಟ್ಟಪ್ಪ ಹನುಮಂತಪ್ಪ ಅವರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೆಪ್ಟೆಂಬರ್-29 ರಂದು ದೂರು ಸಲ್ಲಿಸಿದರು.
ದೂರು ಸಲ್ಲಿಸಿ ಮಾತನಾಡಿದ ಅವರು, ಗ್ರಾಮದ 1ನೇ ವಾರ್ಡ್‌ನಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ನಡೆಯುತ್ತಿರುವ ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಕುಮ್ಮಕ್ಕು ನೀಡಿರುವುದು, ಅಲ್ಲದೆ, ಕುಡಿಯುವ ನೀರಿನ ಪೈಪ್‌ಲೈನ್, ಸ್ವಚ್ಛತೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಕುರಿತು ಸಾರ್ವಜನಿಕರ ಲಿಖಿತ ಮನವಿಗಳನ್ನು ನಿರ್ಲಕ್ಷಿಸಿರುವುದು, ಕುಡಿಯುವ ನೀರು ಮತ್ತು ಸ್ವಚ್ಛತೆಯಂತಹ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸದಿರುವುದು ಸೇರಿದಂತೆ ಹಲವು ಆರೋಪಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ಅರಣ್ಯ ಇಲಾಖೆಗೆ ಸಂಬಂಧಿಸಿದ ಭೂಮಿಯಲ್ಲಿ ಸಾರ್ವಜನಿಕ ವಸತಿ ಉದ್ದೇಶಕ್ಕೆ ಇ-ಸ್ವತ್ತು 11/ಬಿ ವಿತರಿಸಿರುವ ಕುರಿತು ದೂರಿನಲ್ಲಿ ಪ್ರಶ್ನೆ ಎತ್ತಲಾಗಿದೆ. ಅರಣ್ಯ ವ್ಯಾಪ್ತಿಗೆ ಸಂಬಂಧಿಸಿದ ಪ್ರದೇಶದಲ್ಲಿ ಇ-ಸ್ವತ್ತು ನೀಡಲು ಯಾವ ದಾಖಲೆ ಹಾಗೂ ಕಾನೂನು ಆಧಾರ ಬಳಸಲಾಗಿದೆ ಎಂಬುದನ್ನು ಪರಿಶೀಲಿಸಬೇಕೆಂದು ಒತ್ತಾಯಿಸಲಾಗಿದೆ. ಅನಧಿಕೃತ ಕಟ್ಟಡ ನಿರ್ಮಾಣದ ಕುರಿತು ದೂರು ನೀಡಿದ ನಾಲ್ಕು ಕುಟುಂಬಗಳಿಗೆ ಕಾನೂನುಬಾಹಿರವಾಗಿ ನೋಟಿಸ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಟ್ಟಡಗಳ ಪರವಾನಗಿ, ಇ-ಸ್ವತ್ತು ದಾಖಲೆಗಳು ಹಾಗೂ ಅರಣ್ಯ ಮತ್ತು ಕಂದಾಯ ಇಲಾಖೆಗಳ ಅನುಮತಿಗಳನ್ನು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.
ಗ್ರಾಮ ಪಂಚಾಯತಿಯ ಸ್ವಂತ ಸಂಪನ್ಮೂಲಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳು, ನರೇಗಾ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಹಣದ ಬಳಕೆಯಲ್ಲಿ ದುರುಪಯೋಗ ನಡೆದಿದೆ. 2021 ರಿಂದ 2026 ರವರೆಗೆ 15ನೇ ಹಣಕಾಸು ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಅಂದಾಜು ಮೊತ್ತ, ಆಡಳಿತಾತ್ಮಕ ಅನುಮೋದನೆ, ವೆಚ್ಚದ ವಿವರ, ಬಿಲ್ ಪಾವತಿ, ಅಳತೆ ಪುಸ್ತಕ ಹಾಗೂ ಕಾಮಗಾರಿಗಳ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಬೇಕೆಂದು ಆಗ್ರಹಿಸಲಾಗಿದೆ.
ಅಲ್ಲದೇ ಸದರಿ ಅಧಿಕಾರಿಗಳು, ಸಾರ್ವಜನಿಕರೊಂದಿಗೆ ಸೂಕ್ತವಾಗಿ ನಡೆದುಕೊಳ್ಳದೆ, “ಇಡೀ ಊರನ್ನೇ ಕಿತ್ತು ಹಾಕಿಸುತ್ತೇನೆ” ಎಂಬರ್ಥದ ಹೇಳಿಕೆ ನೀಡಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಿ, ಸಂಬಂಧಪಟ್ಟ ಸಾರ್ವಜನಿಕರ ಹೇಳಿಕೆಗಳನ್ನು ಪಡೆದು ಸತ್ಯಾಸತ್ಯತೆ ಪರಿಶೀಲಿಸುವಂತೆ ಮನವಿ ಮಾಡಲಾಗಿದೆ. ಇದಲ್ಲದೆ, ಪಿಡಿಒ ಅವರು ಸಣಾಪುರ ಗ್ರಾಮದಲ್ಲಿ ವಾಸಿಸಬೇಕಾದ ನಿಯಮದ ಹಿನ್ನೆಲೆಯಲ್ಲಿ ಹನುಮನಹಳ್ಳಿಯಲ್ಲಿ ವಾಸಿಸುತ್ತಿರುವ ಕುರಿತು ಸರ್ಕಾರಕ್ಕೆ ನೀಡಿರುವ ಮಾಹಿತಿಯ ಸತ್ಯಾಸತ್ಯತೆಯನ್ನೂ ಪರಿಶೀಲಿಸಬೇಕೆಂದು ದೂರಿನಲ್ಲಿ ಕೋರಲಾಗಿದೆ.
50-60 ವರ್ಷಗಳಿಂದ ಇರುವಂತಹ ಮೂಲ ಸಾರ್ವಜನಿಕರಿಗೆ ಸರ್ಕಾರದ ಮೂಲಭೂತ ಸೌಕರ್ಯಗಳನ್ನು ನೀಡಲು ಕೇಳಿದರೇ.. ಅದನ್ನು ಸರಿಪಡಿಸುವುದನ್ನು ಬಿಟ್ಟು ವಿಷಯವನ್ನು ತಿರುಚಿ ಈ ಭಾಗ ಅರಣ್ಯ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಸಾರ್ವಜನಿಕರಿಗೆ ಬೆದರಿಕೆ ಹಾಕಿ ಒಕ್ಕಲೆಬ್ಬಿಸುವ ವಿಚಾರವನ್ನು ಸಂಬಂಧಿಸಿದವರಿಗೆ ತಿಳಿಸಿ ಇಲಾಖೆಗಳಿಗೆ ಮಾಹಿತಿ ನೀಡಿ ದಾರಿ ತಪ್ಪಿಸುವ ಪ್ರಯತ್ನ ನಡೆಸುವ ಜೊತೆಗೆ ಹಣ ನೀಡಿದವರಿಗೆ ಅನಧಿಕೃತವಾಗಿ ಇ ಸ್ವತ್ತು (11/ಬಿ) ಪ್ರಮಾಣ ಪತ್ರವನ್ನು ನೀಡಿದ ಬಗ್ಗೆ ಸಾಕ್ಷ್ಯಗಳು ಲಭ್ಯವಿರುತ್ತವೆ.
ಅನಧಿಕೃತ ಕಟ್ಟಡ ನಿರ್ಮಾಣ, ಪಿಡಿಒ ಅವರ ಕರ್ತವ್ಯ ನಿರ್ವಹಣೆ, ಅರಣ್ಯ ಮತ್ತು ಕಂದಾಯ ಇಲಾಖೆಗಳೊಂದಿಗೆ ನಡೆದ ಪತ್ರ ವ್ಯವಹಾರ, ಇ-ಸ್ವತ್ತು ಪ್ರಮಾಣಪತ್ರಗಳ ವಿತರಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳ ಬಳಕೆ, 15ನೇ ಹಣಕಾಸು ಯೋಜನೆಯ ಕಾಮಗಾರಿಗಳು, ಹಿಂದಿನ ಪಂಚಾಯತಿಗಳಲ್ಲಿನ ಕಾರ್ಯಾವಧಿ ಹಾಗೂ ಕೇಂದ್ರ ಸ್ಥಾನದಲ್ಲಿ ವಾಸಿಸುವ ನಿಯಮ ಸೇರಿದಂತೆ ಎಂಟು ಪ್ರಮುಖ ಅಂಶಗಳ ಕುರಿತು ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿ ಸ್ವತಂತ್ರ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಪಿಡಿಒ ಅವರನ್ನು ಅಮಾನತು ಅಥವಾ ವರ್ಗಾವಣೆ ಮಾಡುವ ಕುರಿತು ನಿಯಮಾನುಸಾರ ಕ್ರಮ ಕೈಗೊಂಡು, ಕಾನೂನು ಹಾಗೂ ಇಲಾಖಾ ನಿಯಮಗಳ ಪ್ರಕಾರ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಲಾಗಿದೆ, ಒಂದುವೇಳೆ ತಾಲೂಕ ಪಂಚಾಯತಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ನಮ್ಮಲ್ಲಿರುವ ಸಾಕ್ಷ್ಯಗಳ ದಾಖಲೆಗಳ ಮೂಲಕ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲು ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.



