Students’ warm rapport with the elderly through ‘Share and Care’
ಶೇರ್ ಅಂಡ್ ಕೇರ್’ ಮೂಲಕ ಹಿರಿಯರೊಂದಿಗೆ ವಿದ್ಯಾರ್ಥಿಗಳ ಆತ್ಮೀಯ ಒಡನಾಟ

ವಿದ್ಯಾರ್ಥಿಗಳಿಗೆ ಮಾನವೀಯತೆ, ಸಹಾನುಭೂತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಪಾಠ
ಬೆಂಗಳೂರು: ಎಂ.ಎಸ್. ರಾಮಯ್ಯ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಗಾಂಧಿ ಸೇವಾಶ್ರಮದಲ್ಲಿ ಒಂದು ದಿನದ ಸಮುದಾಯ ಸಂಪರ್ಕ ಕಾರ್ಯಕ್ರಮ ‘ಶೇರ್ ಅಂಡ್ ಕೇರ್ – ಎ ಡೇ ಆಫ್ ಕೇರ್, ಕಂಪ್ಯಾನಿಯನ್ಶಿಪ್ ಅಂಡ್ ಕನೆಕ್ಷನ್’ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಹಿರಿಯ ನಾಗರಿಕರೊಂದಿಗೆ ಆತ್ಮೀಯವಾಗಿ ಬೆರೆತು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಬಿ.ಕಾಂ ಅಂತಿಮ ವರ್ಷದ ಸುಮಾರು 46 ವಿದ್ಯಾರ್ಥಿಗಳು ಸೇವಾಶ್ರಮದ ಹಿರಿಯ ನಾಗರಿಕರೊಂದಿಗೆ ಸಮಯ ಕಳೆಯುವ ಮೂಲಕ ಅವರೊಂದಿಗೆ ಆತ್ಮೀಯ ಸಂವಾದ ನಡೆಸಿದರು. ಹಿರಿಯರೊಂದಿಗೆ ಮಾತುಕತೆ ನಡೆಸುವುದರ ಜೊತೆಗೆ ಆಟ, ಸಂಗೀತ ಹಾಗೂ ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂತಸದ ಕ್ಷಣಗಳನ್ನು ಹಂಚಿಕೊಂಡರು.

ಹಿರಿಯರಿಗೆ ಕೇವಲ ವಸ್ತು ರೂಪದ ನೆರವು ನೀಡುವುದಕ್ಕಿಂತ, ಅವರೊಂದಿಗೆ ಸಮಯ ಕಳೆಯುವುದು, ಮಾತನಾಡುವುದು ಮತ್ತು ಅವರ ಜೀವನಾನುಭವಗಳನ್ನು ಆಲಿಸುವ ಮೂಲಕ ಆತ್ಮೀಯ ಒಡನಾಟ ಬೆಳೆಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಹಿರಿಯರ ಜೀವನಾನುಭವಗಳನ್ನು ಆಲಿಸಿದ ವಿದ್ಯಾರ್ಥಿಗಳು ಸಹಾನುಭೂತಿ, ಗೌರವ, ಕೃತಜ್ಞತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ಅರಿತುಕೊಂಡರು. ಸಮಾಜದಲ್ಲಿ ಮಾನವೀಯ ಸಂಬಂಧಗಳ ಮಹತ್ವವನ್ನು ಸಾರಿದ ಕಾರ್ಯಕ್ರಮವು, ಸಣ್ಣ ಪ್ರಮಾಣದ ಕಾಳಜಿ ಮತ್ತು ಆತ್ಮೀಯತೆಯೂ ಹಿರಿಯರ ಬದುಕಿನಲ್ಲಿ ದೊಡ್ಡ ಸಂತಸ ಮೂಡಿಸಬಲ್ಲದು ಎಂಬ ಸಂದೇಶವನ್ನು ನೀಡಿತು.
ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಿವಿತಾ ಗೌಡ ಎಂ. ಅವರು ಕಾರ್ಯಕ್ರಮದ ಸಂಯೋಜಕರಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.



