MLA Hitnal ‘Hare Guddali Veera’: Dr. Basavaraj Kavatkar Levadi | BJP-led massive protest demanding a strong punishment
*ವಿದ್ಯುತ್ ಮತ್ತು ತೀವ್ರ ಬರಪಟ್ಟಿಗೆ ಸೇರಿಸಲು ಹೋರಾಟ : ಕ್ಯಾವಟರ್ ನೇತೃತ್ವದಲ್ಲಿ ಅಳವಂಡಿ ಕೆಇಬಿಗೆ ರೈತರ ಮುತ್ತಿಗೆ*

ಶಾಸಕ ಹಿಟ್ನಾಳ್ ‘ಹಾರೆ ಗುದ್ದಲಿ ವೀರ’: ಡಾ.ಬಸವರಾಜ ಕ್ಯಾವಟರ್ ಲೇವಡಿ | ತೀವ್ರ ಬರ ಘೋಷಣೆಗೆ ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಅಳವಂಡಿ (ಕೊಪ್ಪಳ):ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದ ನಡುವೆಯೂ ರೈತರ ಕೃಷಿ ಪಂಪ್ಸೆಟ್ಗಳಿಗೆ ನೀಡುತ್ತಿದ್ದ 7 ಗಂಟೆ ತ್ರೀಫೇಸ್ ವಿದ್ಯುತ್ ಅನ್ನು 6 ಗಂಟೆಗೆ ಕಡಿತಗೊಳಿಸಿರುವುದನ್ನು ಖಂಡಿಸಿ, ಕೊಪ್ಪಳ ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ಅಳವಂಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮುಖಂಡರಾದ ಡಾ. ಬಸವರಾಜ್ ಕ್ಯಾವಟರ್, ಮಹಾಂತೇಶ್ ಪಾಟೀಲ್ ಹಾಗೂ ವೀರೇಶ್ ಸಜ್ಜನ್ ಅವರ ನೇತೃತ್ವದಲ್ಲಿ ಸಾವಿರಾರು ರೈತರು ಕೆ.ಇ.ಬಿ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿಯೊಳಗೆ ನುಗ್ಗಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೂ ಮುನ್ನ ಅಳವಂಡಿ ಮತ್ತು ಹಿರೇಶಿಂಧೋಗಿ ಭಾಗದ ಸಾವಿರಾರು ರೈತರು ಕೈಯಲ್ಲಿ ಪೋಸ್ಟರ್ಗಳನ್ನು ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿದರು. ರೈತರ ಈ ಹೋರಾಟಕ್ಕೆ ಅಳವಂಡಿಯ ಶ್ರೀ ಸಿದ್ದೇಶ್ವರ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಚಾಲನೆ ನೀಡಿದರು.
ಕಾರ್ಖಾನೆಗಳಿಗೆ ವಿದ್ಯುತ್ ಮಾರಾಟ – ಡಾ. ಕ್ಯಾವಟರ್ ಆರೋಪ:
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ಡಾ. ಬಸವರಾಜ್ ಕ್ಯಾವತರ್, “ರಾಜ್ಯದಲ್ಲಿ ಭೀಕರ ಬರಗಾಲವಿದೆ. ದಿನದ 24 ಗಂಟೆಯಲ್ಲಿ ಕೇವಲ 7 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು ಇದೀಗ ಅದನ್ನೂ ಕಡಿತಗೊಳಿಸಿದರೆ ರೈತರು ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದರು.
“ಕೊಪ್ಪಳಕ್ಕೆ 7 ಸಬ್ ಸ್ಟೇಷನ್ ಮಂಜೂರಾಗಿದೆ ಎಂದು ಶಾಸಕರು ಹೇಳುತ್ತಾರೆ, ಆದರೆ ಒಂದೂ ಕೆಲಸ ಮಾಡುತ್ತಿಲ್ಲ. ಭೀಕರ ಬರದ ನಡುವೆಯೂ ಕೊಪ್ಪಳವನ್ನು ಕೇವಲ ‘ಮಧ್ಯಮ ಬರ ಪ್ರದೇಶ’ ಎಂದು ಘೋಷಿಸಿ ಕಾಂಗ್ರೆಸ್ ಸರ್ಕಾರ ರೈತರಿಗೆ ಘೋರ ಅನ್ಯಾಯ ಮಾಡಿದೆ,” ಎಂದು ಕಿಡಿಕಾರಿದರು.
ಸಿಎಂ ದಾರಿ ತಪ್ಪಿಸಿದ ‘ಹಾರೆ ಗುದ್ದಲಿ ವೀರ’ ಶಾಸಕ!”ಶಾಸಕರು ಹಾಗೂ ತಾಲ್ಲೂಕಿನ ಅಧಿಕಾರಿಗಳು ಒಮ್ಮೆಯೂ ರೈತರ ಜಮೀನುಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಸರ್ಕಾರಕ್ಕೆ ಮನದಟ್ಟು ಮಾಡುವಲ್ಲಿ ವಿಫಲರಾಗಿದ್ದಾರೆ. ಇತ್ತೀಚೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಕೊಪ್ಪಳಕ್ಕೆ ಆಗಮಿಸಿದ್ದರೂ, ಇಲ್ಲಿ ಬರವೀಕ್ಷಣೆ ಮಾಡದೆ ಗದಗ, ಬಾಗಲಕೋಟೆಗೆ ತೆರಳಿದರು. ಬಹುಶಃ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಹೆಲಿಕಾಪ್ಟರ್ನಿಂದಲೇ ತಮ್ಮ ನೀರಾವರಿ ಭೂಮಿಯನ್ನು ತೋರಿಸಿ ಸಿಎಂ ದಾರಿ ತಪ್ಪಿಸಿರಬಹುದು,” ಎಂದು ಲೇವಡಿ ಮಾಡಿದರು.
“ನಾವು ಯಾವುದೇ ಜನಪರ ಹೋರಾಟ ಮಾಡಿದರೂ, ಅದರ ಮರುದಿನವೇ ಶಾಸಕರು ಹಾರೆ, ಗುದ್ದಲಿ, ಪಿಕಾಸಿ ಹಿಡಿದು ‘ಗುದ್ದಲಿ ಪೂಜೆ’ ಮಾಡಿ ಕೋಟಿ ಕೋಟಿ ವೆಚ್ಚದ ಬ್ಯಾನರ್ ಹಾಕುತ್ತಾರೆ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸದಾ ಹಾರೆ-ಗುದ್ದಲಿ ಹಿಡಿದು ತಿರುಗುವ ‘ಹಾರೆ ಗುದ್ದಲಿ ವೀರ’ ಯಾರಾದರೂ ಇದ್ದರೆ ಅದು ಶಾಸಕ ರಾಘವೇಂದ್ರ ಹಿಟ್ನಾಳ್ ಮಾತ್ರ,” ಎಂದು ತೀವ್ರವಾಗಿ ವ್ಯಂಗ್ಯವಾಡಿದರು. ಕೂಡಲೇ ಕೊಪ್ಪಳವನ್ನು ‘ತೀವ್ರ ಬರಪೀಡಿತ’ ಎಂದು ಘೋಷಿಸಬೇಕು ಹಾಗೂ ಕಡ್ಡಾಯವಾಗಿ 7 ಗಂಟೆ ವಿದ್ಯುತ್ ನೀಡಬೇಕು ಎಂದು ಅವರು ಆಗ್ರಹಿಸಿದರು.
3 ಲಕ್ಷಕ್ಕೆ ಏರಿದ ಟ್ರಾನ್ಸ್ಫಾರ್ಮರ್ ದರ: ರೈತರ ಆಕ್ರೋಶ
‘ಕಾಂಗ್ರೆಸ್ ಶಾಸಕರು ಹಣ ಪಡೆದು ರೈತರ ವಿದ್ಯುತ್ ಅನ್ನು ಕಾರ್ಖಾನೆಗಳಿಗೆ ಮಾರಿಕೊಳ್ಳುತ್ತಿದ್ದಾರೆ’ ಎಂಬ ಬರಹದ ಪೋಸ್ಟರ್ಗಳನ್ನು ಹಿಡಿದು ರೈತರು ಆಕ್ರೋಶ ವ್ಯಕ್ತಪಡಿಸಿದರು. “ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕೇವಲ 25 ಸಾವಿರ ರೂ. ಕಟ್ಟಿದರೆ ಒಂದು ಟ್ರಾನ್ಸ್ಫಾರ್ಮರ್ (ಟಿಸಿ) ಸಿಗುತ್ತಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಟಿಸಿ ದರವನ್ನು ಬರೋಬ್ಬರಿ 3 ಲಕ್ಷ ರೂ.ಗಳಿಗೆ ಏರಿಸಿದೆ. ಒಂದೆಡೆ ಟಿಸಿ ದರ ಏರಿಕೆ, ಮತ್ತೊಂದೆಡೆ ವಿದ್ಯುತ್ ಕಡಿತ ಮಾಡಿ ರೈತರ ಬದುಕನ್ನು ಕಸಿದುಕೊಳ್ಳಲಾಗುತ್ತಿದೆ,” ಎಂದು ಪ್ರತಿಭಟನಾನಿರತ ರೈತರು ದೂರಿದರು.
ಹೋರಾಟದಲ್ಲಿ ಡಾ ಬಸವರಾಜ್ ಕ್ಯಾವಟರ, ಮಾಂತೇಶ್ ಪಾಟೀಲ್ ಮೈನಳ್ಳಿ, ಪ್ರದೀಪ್ ಹಿಟ್ನಾಳ್,ವೀರೇಶ್ ಸಜ್ಜನ,ಬಸವರಾಜ್ ಬೈರಾಪುರ್, ಶ್ರೀನಿವಾಸ್ ಕಲಾದಗಿ,ಸುನೀಲ ಹೆಸರೂರ್ ಹನುಮಂತಪ್ಪ ಉಂಕಿ, ಮಹೇಶ್ ಮಂಗಳಾಪುರ, ಗವಿರಾಜ್ ಗೊರವರ, ಅಂದಪ್ಪ ಯಲ್ಲಮ್ಮನವರ, ಗುರಪ್ಪ ಗೋಡೆಕಾರ್, ಶರಣಪ್ಪ ಮಡಿವಾಳರ, ಅಜಯ್ ಪಾಟೀಲ್ ಮೈನಳ್ಳಿ, ನೀಲಕಂಠಯ್ಯ ಹಿರೇಮಠ ಪರಸಪ್ಪ ನಿಂಗಾಪುರ,ರಮೇಶ್ ಗುದ್ಲಾನೂರ್,ಪಾಂಡು ಬೋರಿನ್, ಗವಿಸಿದ್ದಪ್ಪ ಗದ್ದಿಕೇರಿ,ಶಿವಪ್ಪ ಗಾಣಿಗೇರ, ಯೋಗಾನಂದ ಲೇಬಗೆರಿ, ಅಶೋಕ್ ಮುತ್ತಲ್,ಶ್ರೀಮತಿ ಗೀತಾ ಮುತ್ತಾಳ, ಶ್ರೀಮತಿ ವಾಣಿಶ್ರೀ ಮಠದ, ಶ್ರೀಮತಿ ಕೀರ್ತಿ ಪಾಟೀಲ್ ಶ್ರೀಮತಿ ಶೋಭಾ ನಗರಿ ಸೇರಿದಂತೆ ಅಳವಂಡಿ ಭಾಗದ ಸಾವಿರಾರು ರೈತರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.


