

The blow of rising prices amidst the hardships of drought: CPI(M) expresses outrage against anti-people policies.

ಬರದ ಬವಣೆಗೆ ಬೆಲೆ ಏರಿಕೆಯ ಬರೆ: ಜನವಿರೋಧಿ ನೀತಿ ವಿರುದ್ಧ ಸಿಪಿಐ(ಎಂ) ಆಕ್ರೋಶ

ಏರಿಕೆ ಮಾಡಿರುವ ಹಾಲು, ಮೊಸರು, ತುಪ್ಪ ಹಾಗೂ ಬಸ್ ದರಗಳನ್ನು ತಕ್ಷಣವೇ ವಾಪಸ್ ಪಡೆಯಲು ಆಗ್ರಹ
ಕೊಪ್ಪಳ: ರಾಜ್ಯದಲ್ಲಿ ತೀವ್ರ ಬರಗಾಲದಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನವಿರೋಧಿ ಬೆಲೆ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಿಪಿಐ(ಎಂ) ಕೊಪ್ಪಳ ಜಿಲ್ಲಾ ಸಮಿತಿ ಆಗ್ರಹಿಸಿದೆ.
ರಾಜ್ಯ ಸರ್ಕಾರ ಕಳೆದ ಒಂದು ತಿಂಗಳ ಅವಧಿಯಲ್ಲಿ ಹಾಲು, ಮೊಸರು ಹಾಗೂ ಸಾರಿಗೆ ಬಸ್ ದರಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಹಾಲಿನ ದರ ಪ್ರತಿ ಲೀಟರ್ಗೆ 8 ರೂ., ಮೊಸರಿನ ದರ ಪ್ರತಿ ಲೀಟರ್ಗೆ 8 ರೂ. ಹಾಗೂ ತುಪ್ಪದ ದರ ಪ್ರತಿ ಕೆ.ಜಿ.ಗೆ 104 ರೂ. ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಸಾರಿಗೆ ದರಗಳನ್ನೂ ಏರಿಕೆ ಮಾಡಲಾಗಿದ್ದು, ಬೆಂಗಳೂರಿನಿಂದ ಗಂಗಾವತಿಗೆ ಪ್ರಯಾಣಿಸುವ ಬಸ್ ದರದಲ್ಲಿಯೂ ಪ್ರತಿ ಹಂತಕ್ಕೆ 9 ರೂ. ಹೆಚ್ಚಳವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಇದು ಎರಡನೇ ಬಾರಿ ಸಾರಿಗೆ ದರ ಏರಿಕೆಯಾಗಿದೆ. ಮತ್ತೊಂದೆಡೆ, ಕಾಳಸಂತೆಕೋರರು ಅಕ್ಕಿ, ಬೇಳೆ ಸೇರಿದಂತೆ ದಿನಬಳಕೆಯ ಧಾನ್ಯಗಳ ಬೆಲೆಯನ್ನೂ ಹೆಚ್ಚಿಸುತ್ತಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ.
ರಾಜ್ಯದಲ್ಲಿ ಬರಗಾಲ ತೀವ್ರವಾಗಿದ್ದು, ದಲಿತರು, ಬಡವರು, ಮಹಿಳಾ ಕೂಲಿಕಾರರಿಗೆ ಉದ್ಯೋಗವಿಲ್ಲದೆ ಜೀವನ ನಡೆಸುವುದೇ ದುಸ್ತರವಾಗಿದೆ. ಬೆಳೆ ನಷ್ಟದಿಂದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವಾಗಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜವಾಬ್ದಾರಿಯಿಂದ ವರ್ತಿಸದೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಹೇರುತ್ತಿರುವುದು ಖಂಡನೀಯ ಎಂದು ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಹಾಲು ಉತ್ಪಾದಕರ ಹಿತಾಸಕ್ತಿಯನ್ನು ಸಿಪಿಐ(ಎಂ) ಬೆಂಬಲಿಸುತ್ತದೆ. ಆದರೆ, ಉತ್ಪಾದಕರಿಗೆ ನೆರವು ನೀಡುವ ಹೆಸರಿನಲ್ಲಿ ಬಡ ಗ್ರಾಹಕರಿಗೆ ಹೊರೆ ಹಾಕುವುದು ಸರಿಯಲ್ಲ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ನೀಡುವ ಸಹಾಯಧನ ಹೆಚ್ಚಿಸಬೇಕು. ಪಶು ಆಹಾರ ಸೇರಿದಂತೆ ಉತ್ಪಾದನಾ ವೆಚ್ಚ ಕಡಿಮೆ ಮಾಡುವ ಹೂಡಿಕೆಗಳಿಗೆ ಸರ್ಕಾರ ಸಹಾಯಧನ ನೀಡಬೇಕು. ಡೈರಿಗಳು, ಚಿಲ್ಲಿಂಗ್ ಸೆಂಟರ್ಗಳು ಹಾಗೂ ಹಾಲು ಒಕ್ಕೂಟಗಳಲ್ಲಿನ ಭ್ರಷ್ಟಾಚಾರ ಮತ್ತು ಸೋರಿಕೆಯನ್ನು ತಡೆಗಟ್ಟುವ ಮೂಲಕ ಉತ್ಪಾದಕರಿಗೆ ನೆರವಾಗಬೇಕು ಎಂದು ಒತ್ತಾಯಿಸಿದೆ.
ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದ ಸಂದರ್ಭದಲ್ಲಿಯೂ ಗ್ರಾಹಕರಿಗೆ ಅದರ ಪ್ರಯೋಜನವನ್ನು ವರ್ಗಾಯಿಸದೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ನಾಫ್ತಾ ಬೆಲೆ ಏರಿಕೆಯನ್ನು ಮುಂದುವರಿಸಿದೆ ಎಂದು ಪಕ್ಷ ಟೀಕಿಸಿದೆ.
ಸರ್ಕಾರಿ ಡೈರಿ ಉತ್ಪನ್ನಗಳ ಬೆಲೆ ಏರಿಕೆಯ ಬೆನ್ನಲ್ಲೇ ಖಾಸಗಿ ಡೈರಿ ಉತ್ಪನ್ನಗಳ ಬೆಲೆಯೂ ಹೆಚ್ಚಳವಾಗುತ್ತಿದೆ. ಸಾರ್ವಜನಿಕ ಸಾರಿಗೆ ಬಸ್ ದರ ಏರಿಕೆಯ ಬೆನ್ನಲ್ಲೇ ಖಾಸಗಿ ಬಸ್ ದರವೂ ಹೆಚ್ಚಳವಾಗಿದೆ. ಇದರಿಂದ ಖಾಸಗಿ ಬಂಡವಾಳದಾರರ ಒತ್ತಡಕ್ಕೆ ಸರ್ಕಾರ ಮಣಿಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಇನ್ನು ಬರಗಾಲದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕಾಳಸಂತೆಕೋರರು ಜನರನ್ನು ಲೂಟಿ ಮಾಡುತ್ತಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಹೇಳಿದೆ.
ಸರ್ಕಾರಗಳ ಜನವಿರೋಧಿ ಹಾಗೂ ಲೂಟಿಕೋರರ ಪರವಾದ ನೀತಿಗಳನ್ನು ಖಂಡಿಸಿ, ಏರಿಕೆ ಮಾಡಿರುವ ಎಲ್ಲ ಬೆಲೆಗಳನ್ನು ತಕ್ಷಣವೇ ವಾಪಸ್ ಪಡೆಯಬೇಕು ಮತ್ತು ಬರಗಾಲ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಮುಂಬರುವ ಒಂದು ವಾರದ ಅವಧಿಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಸಿಪಿಐ(ಎಂ) ಕರೆ ನೀಡಿದೆ.
ಈ ಕುರಿತು ಸಿಪಿಐ(ಎಂ) ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಹಾಗೂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಹುಸೇನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



