ಆರ್‌ಟಿಐ ಮಾಹಿತಿ ಕೇಳಿದರೆ ಮಾಹಿತಿ ಆಯೋಗಕ್ಕೆ ಹೋಗಿ ಎನ್ನುತ್ತಾರೆ!

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು




If you ask for information under the RTI, they tell you to go to the Information Commission!

ಆರ್‌ಟಿಐ ಮಾಹಿತಿ ಕೇಳಿದರೆ ಮಾಹಿತಿ ಆಯೋಗಕ್ಕೆ ಹೋಗಿ ಎನ್ನುತ್ತಾರೆ!

ಜಾಹೀರಾತು
ಜಾಹೀರಾತು

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ; ಉಪ ನಿರ್ದೇಶಕ ಅಜ್ಜಪ್ಪ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲು ಕರ್ನಾಟಕ ಜನ ಸೈನ್ಯ ನಿರ್ಧಾರ

ಗಂಗಾವತಿ, ನ. 6: ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಮಾಹಿತಿ ಕೇಳಿದ ಸಾರ್ವಜನಿಕರಿಗೆ ಸಮರ್ಪಕ ಉತ್ತರ ನೀಡದೆ, ಮಾಹಿತಿ ಬೇಕಾದರೆ ಮಾಹಿತಿ ಆಯೋಗಕ್ಕೆ ಹೋಗಿ ಎಂದು ಹೇಳುತ್ತಿರುವ ಕೊಪ್ಪಳ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವರ್ತನೆ ಖಂಡನೀಯ ಎಂದು ಕರ್ನಾಟಕ ಜನ ಸೈನ್ಯದ ಕೊಪ್ಪಳ ಜಿಲ್ಲಾ ಅಧ್ಯಕ್ಷ ರಮೇಶ್ ಕಾಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರಿ ಇಲಾಖೆಗಳ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಅಧಿಕಾರಿಗಳ ಹೊಣೆಗಾರಿಕೆ ಖಚಿತಪಡಿಸುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆ–2005 ಜಾರಿಗೆ ತರಲಾಗಿದೆ. ಆದರೆ, ಕಾಯ್ದೆಯಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದರೂ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದೆ, ಅರ್ಜಿದಾರರಿಗೆ ಸಮರ್ಪಕ ಉತ್ತರ ನೀಡದೆ ಹಾಗೂ ಅವರ ಅಹವಾಲು ಆಲಿಸದೆ ಮಾಹಿತಿ ಆಯೋಗಕ್ಕೆ ಹೋಗುವಂತೆ ಹೇಳುತ್ತಿರುವುದು ಯಾವ ರೀತಿಯ ಆಡಳಿತ ವ್ಯವಸ್ಥೆ ಎಂದು ಪ್ರಶ್ನಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗಳಿಗೆ ನಿಗದಿತ ಕಾಲಮಿತಿಯಲ್ಲಿ ಮಾಹಿತಿ ಒದಗಿಸುವುದು ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕಾನೂನುಬದ್ಧ ಕರ್ತವ್ಯವಾಗಿದೆ. ಮಾಹಿತಿ ನೀಡಲು ಸಾಧ್ಯವಾಗದಿದ್ದರೆ ಅದಕ್ಕೆ ಸಂಬಂಧಿಸಿದ ಕಾನೂನುಬದ್ಧ ಕಾರಣಗಳನ್ನು ಲಿಖಿತವಾಗಿ ತಿಳಿಸಬೇಕು. ಆದರೆ, ಅರ್ಜಿದಾರರನ್ನು ಅಲೆದಾಡಿಸುವುದು ಮತ್ತು ಕರ್ತವ್ಯದಿಂದ ನುಣುಚಿಕೊಳ್ಳುವುದು ಸಾರ್ವಜನಿಕರ ಹಕ್ಕುಗಳಿಗೆ ಧಕ್ಕೆ ಉಂಟುಮಾಡಿದಂತಾಗಿದೆ ಎಂದು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯಲೋಪ, ನಿರ್ಲಕ್ಷ್ಯ ಹಾಗೂ ಅಧಿಕಾರ ದುರುಪಯೋಗದ ಆರೋಪಗಳ ಕುರಿತು ಕರ್ನಾಟಕ ಲೋಕಾಯುಕ್ತರಿಗೆ ದೂರು ಸಲ್ಲಿಸಿ ಸಮಗ್ರ ತನಿಖೆಗೆ ಒತ್ತಾಯಿಸಲಾಗುವುದು. ಆರ್‌ಟಿಐ ಅರ್ಜಿಗಳ ದಾಖಲೆಗಳು, ಸ್ವೀಕೃತಿ ಪತ್ರಗಳು, ಮೇಲ್ಮನವಿ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಲಭ್ಯವಿರುವ ಸಂಭಾಷಣೆಯ ಸಾಕ್ಷ್ಯಗಳನ್ನು ತನಿಖೆಗೆ ಒದಗಿಸಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಗಳು ಜನಸೇವಕರು ಎಂಬುದನ್ನು ಮರೆಯಬಾರದು. ಸಾರ್ವಜನಿಕರು ಮಾಹಿತಿ ಕೇಳಿದಾಗ ಉತ್ತರಿಸುವುದು ಅವರ ಜವಾಬ್ದಾರಿ. ಮಾಹಿತಿ ಕೇಳುವವರನ್ನು ಸತಾಯಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಕಾನೂನುಬದ್ಧ ಕ್ರಮ ಕೈಗೊಂಡು, ಅರ್ಜಿದಾರರಿಗೆ ಅವರು ಕೋರಿರುವ ಮಾಹಿತಿಯನ್ನು ಒದಗಿಸಲು ಕ್ರಮ ಜರುಗಿಸಬೇಕು ಎಂದು ಪ್ರಕಟಣೆ ಮುಲಕ  ಕೊಪ್ಪಳ ಜಿಲ್ಲೆಯಕರ್ನಾಟಕ ಜನ ಸೈನ್ಯ,  ಜಿಲ್ಲಾ ಅಧ್ಯಕ್ಷರು, ರಮೇಶ್ ಕಾಳೆ  ಆಗ್ರಹಿಸಿದ್ದಾರೆ.


  

Total Views: 0
ಜಾಹೀರಾತು
Share This Article
Leave a Comment