

Kanneri Swamiji’s statement is condemnable; the government should register a suo motu case and take action: Dr. Shashikanta Pattana

ಸಂವಿಧಾನದಲ್ಲಿ ಮನುಸ್ಮೃತಿ ಅಂಶಗಳಿವೆಯೆಂಬ ಹೇಳಿಕೆ ಅವಿವೇಕತನದ ಪರಮಾವಧಿ!

ಕನ್ನೇರಿ ಸ್ವಾಮಿಗಳ ಹೇಳಿಕೆ ಖಂಡನೀಯ; ಸರಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿ: ಡಾ. ಶಶಿಕಾಂತ ಪಟ್ಟಣ
ಭಾರತದ ಸಂವಿಧಾನವು ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಆಳವಾದ ಅಧ್ಯಯನ, ಸಾಮಾಜಿಕ ಚಿಂತನೆ, ವೈಚಾರಿಕ ದೃಷ್ಟಿಕೋನ ಹಾಗೂ ಸಮಾನತೆಯ ತತ್ವಗಳ ಆಧಾರದ ಮೇಲೆ ರೂಪುಗೊಂಡಿರುವ ಮಹತ್ವದ ಪ್ರಜಾಸತ್ತಾತ್ಮಕ ಗ್ರಂಥವಾಗಿದೆ. ಇಂತಹ ಶ್ರೇಷ್ಠ ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂದು ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳು ಹೇಳಿರುವುದು ಅವಿವೇಕತನದ ಪರಮಾವಧಿಯಾಗಿದ್ದು, ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ಡಾ. ಶಶಿಕಾಂತ ಪಟ್ಟಣ, ರಾಮದುರ್ಗ, ಪುಣೆ ತಿಳಿಸಿದ್ದಾರೆ.
ಸಂವಿಧಾನದ ಆಶಯ, ಮೌಲ್ಯಗಳು ಹಾಗೂ ಅದರ ರಚನೆಯ ಹಿಂದಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅರಿಯದೆ ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಸ್ವಾಮಿಗಳು ತಮ್ಮ ಧಾರ್ಮಿಕ ಸ್ಥಾನಮಾನದ ಜವಾಬ್ದಾರಿಯನ್ನು ಅರಿತು ಮಾತನಾಡಬೇಕು. ಸಂಘಟನೆಯೊಂದರ ವಿಚಾರಧಾರೆಗೆ ಅಂಧವಾಗಿ ಬೆಂಬಲ ನೀಡುವ ಬದಲು, ಸಂವಿಧಾನ ಮತ್ತು ಸಮಾಜದ ಹಿತದೃಷ್ಟಿಯಿಂದ ಮಾತನಾಡಬೇಕು ಎಂದು ಅವರು ಟೀಕಿಸಿದ್ದಾರೆ.
ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುವ ಹಾಗೂ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಇಂತಹ ಹೇಳಿಕೆಗಳು ಸಾರ್ವಜನಿಕ ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ಪರಿಣಾಮ ಬೀರದಂತೆ ರಾಜ್ಯ ಸರ್ಕಾರವು ಕಾನೂನುಬದ್ಧವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಲಿಂಗಾಯತ ಧರ್ಮದ ವಿಚಾರದಲ್ಲಿಯೂ ಗೊಂದಲಕಾರಿ ಅಭಿಪ್ರಾಯಗಳನ್ನು ಹರಡುವ ಪ್ರಯತ್ನಗಳ ಬಗ್ಗೆ ಬಸವಭಕ್ತರು ಎಚ್ಚರಿಕೆಯಿಂದ ಇರಬೇಕು. ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯ ಮೌಲ್ಯಗಳಿಗೆ ವಿರುದ್ಧವಾದ ವಿಚಾರಗಳನ್ನು ಪ್ರಶ್ನಿಸಬೇಕು. ವಿವಾದಾತ್ಮಕ ಹೇಳಿಕೆಗಳ ಮೂಲಕ ಸಮಾಜದಲ್ಲಿ ಭಿನ್ನಾಭಿಪ್ರಾಯ ಮೂಡಿಸುವವರ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ಮೂಲಕ ಜನರು ತಮ್ಮ ಅಸಮಾಧಾನ ವ್ಯಕ್ತಪಡಿಸಬೇಕು ಎಂದು ಡಾ. ಶಶಿಕಾಂತ ಪಟ್ಟಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



