

Reviving a 200-Year-Old Well! Restored Historic Well in Virupapura Unveiled to the Public

200 ವರ್ಷಗಳ ಪುರಾತನ ಭಾವಿಗೆ ಮರುಜೀವ! ವಿರೂಪಾಪುರ ನಗರದಲ್ಲಿ ಜೀರ್ಣೋದ್ಧಾರಗೊಂಡ ಐತಿಹಾಸಿಕ ಬಾವಿ ಲೋಕಾರ್ಪಣೆ

ಗಂಗಾವತಿ: ನಗರದ 31ನೇ ವಾರ್ಡಿನ ವಿರೂಪಾಪುರ ನಗರದ ಶ್ರೀ ತ್ರಿಕೂಟ ಬಸವೇಶ್ವರ ದೇವಸ್ಥಾನದ ಸಮೀಪವಿರುವ ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಬಾವಿಯನ್ನು ದೇವಸ್ಥಾನದ ಕಮಿಟಿ ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರದಿಂದ ಜೀರ್ಣೋದ್ಧಾರಗೊಳಿಸಿ ಪುನರುಜ್ಜೀವನಗೊಳಿಸಲಾಗಿದೆ.
ಕಾಲಕ್ರಮೇಣ ಮುಚ್ಚಿಹೋಗಿದ್ದ ಈ ಐತಿಹಾಸಿಕ ಬಾವಿಯನ್ನು ಸ್ವಚ್ಛಗೊಳಿಸಿ, ಪುನರ್ ನಿರ್ಮಾಣ ಮಾಡಲಾಗಿದ್ದು, ದೇವಸ್ಥಾನದ ಕಮಿಟಿ ಸದಸ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ನಗರಸಭೆ ಪೌರಾಯುಕ್ತ ರಾಮರೆಡ್ಡಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.
ಉದ್ಘಾಟನೆಗೂ ಮುನ್ನ ಬಾವಿಯ ನೀರಿನಿಂದ ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧೀಕರಿಸಿ, ಕುಂಕುಮ ಅಭಿಷೇಕ, ಗಂಗಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಾವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ರಾಮರೆಡ್ಡಿ ಅವರು, ಪುರಾತನ ಬಾವಿಗಳನ್ನು ಸಂರಕ್ಷಿಸುವುದು ಹಾಗೂ ನೆಲ-ಜಲದ ಪರಂಪರೆಯನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ದೇವಸ್ಥಾನದ ಕಮಿಟಿ ಹಾಗೂ ಸಾರ್ವಜನಿಕರು ಕೈಗೊಂಡಿರುವ ಕಾರ್ಯ ಶ್ಲಾಘನೀಯ. ಬಾವಿಯ ಜೀರ್ಣೋದ್ಧಾರ ಕಾರ್ಯಕ್ಕೆ ನಗರಸಭೆಯಿಂದಲೂ ಸಹಾಯ ಮಾಡಲಾಗಿದೆ. ಇಂತಹ ಕಾರ್ಯಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ದೇವಸ್ಥಾನದ ಸದಸ್ಯರು ಹಾಗೂ ಸ್ಥಳೀಯ ಹಿರಿಯರು ಮಾತನಾಡಿ, ಸುಮಾರು ಎರಡು ಶತಮಾನಗಳ ಹಿಂದೆ ಈ ಬಾವಿಯ ನೀರನ್ನು ಕುಡಿಯಲು ಹಾಗೂ ದಿನನಿತ್ಯದ ಎಲ್ಲ ಅಗತ್ಯಗಳಿಗೂ ಬಳಸಲಾಗುತ್ತಿತ್ತು. ನಮ್ಮ ಹಿರಿಯರು ಮಾತ್ರವಲ್ಲ, ನಾವೂ ಇದೇ ಬಾವಿಯ ನೀರನ್ನು ಕುಡಿದು ಬೆಳೆದಿದ್ದೇವೆ. ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳ ಗಂಗಾಪೂಜೆಗೂ ಸುತ್ತಮುತ್ತಲಿನ ಜನರು ಈ ಬಾವಿಯನ್ನೇ ಅವಲಂಬಿಸಿದ್ದರು. ಇಂತಹ ಐತಿಹಾಸಿಕ ಜಲಮೂಲಕ್ಕೆ ಮತ್ತೆ ಜೀವ ತುಂಬಿರುವುದು ಸಂತಸ ತಂದಿದೆ. ಮುಂದಿನ ಪೀಳಿಗೆಗೂ ಇದರ ಮಹತ್ವ ತಿಳಿಸಿ, ಸಾರ್ವಜನಿಕರು ಇದನ್ನು ಸಂರಕ್ಷಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸದಸ್ಯರಾದ ಚಂದ್ರಶೇಖರ ನಾಯಕ, ಕೆ. ಅಂಬ್ರೇಶ, ಪರಶುರಾಮ ನಾಯಕ, ಅಶೋಕ ಗುಡಿಕೋಟಿ, ಉಮೇಶ ನಾಯಕ, ಯಮುನೂರಪ್ಪ ನಾಯಕ, ಬಸವರಾಜ ಬೋವಿ, ಕೆ. ಶರಣಪ್ಪ, ಕೆ. ವೀರಭದ್ರಪ್ಪ, ಹಿರಿಯರಾದ ಮುಕ್ಕಣ್ಣ, ಕೆ. ವಿರೂಪಾಕ್ಷಪ್ಪ, ಬಸವರಾಜ ನಾಯಕ ಸೇರಿದಂತೆ ಸ್ಥಳೀಯ ಮಹಿಳೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



