Karatagi, Kanakagiri, Kukanur, Koppal taluk level Dussehra Games. From 6

ಕಾರಟಗಿ, ಕನಕಗಿರಿ, ಕುಕನೂರು, ಕೊಪ್ಪಳ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ. 6ರಿಂದ

ಕೊಪ್ಪಳ ಸೆಪ್ಟೆಂಬರ್ 02 (ಕರ್ನಾಟಕ ವಾರ್ತೆ): 2026-27ನೇ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಜಿಲ್ಲೆಯ ಕಾರಟಗಿ, ಕನಕಗಿರಿ, ಕುಕನೂರು ಮತ್ತು ಕೊಪ್ಪಳ ತಾಲ್ಲೂಕುಗಳಲ್ಲಿ ಆಯೋಜಿಸಲಾಗಿದ್ದು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡರ ಅವರು ತಿಳಿಸಿದ್ದಾರೆ.
ದಸರಾ ಕ್ರೀಡಾಕೂಟಗಳ ಆಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದ್ದು, ಜಿಲ್ಲೆಯ ಕಾರಟಗಿ ತಾಲ್ಲೂಕಿನ ದಸರಾ ಕ್ರೀಡಾಕೂಟವು ಸೆಪ್ಟೆಂಬರ್ 6 ರಂದು ಕಾರಟಗಿಯ ಶ್ರೀ ಸಿದ್ದೇಶ್ವರ ರಂಗ ಮಂದಿರದ ಎದುರುಗಡೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದೆ. ಅದೇ ರೀತಿ ಕನಕಗಿರಿ ಮತ್ತು ಕುಕನೂರು ತಾಲ್ಲೂಕಿನ ದಸರಾ ಕ್ರೀಡಾಕೂಟಗಳು ಸೆಪ್ಟೆಂಬರ್ 8ರಂದು ಕನಕಗಿರಿಯ ಪಬ್ಲಿಕ್ ಶಾಲೆಯಲ್ಲಿ ಮತ್ತು ಯಲಬುರ್ಗಾ ತಾಲ್ಲೂಕು ಕ್ರೀಡಾಂಗಣದಲ್ಲಿ ಜರುಗಲಿದೆ. ಕೊಪ್ಪಳ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವು ಸೆಪ್ಟೆಂಬರ್ 10ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳ ದಸರಾ ಕ್ರೀಡಾಕೂಟದ ದಿನಾಂಕವನ್ನು ನಂತರದಲ್ಲಿ ಕ್ರೀಡಾ ಇಲಾಖೆಯು ಪ್ರಕಟಿಸಲಿದೆ.
ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಅಥ್ಲೆಟಿಕ್ಸ್ ಹಾಗೂ ವಿವಿಧ ಗುಂಪು ಕ್ರೀಡೆಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಥ್ಲೆಟಿಕ್ಸ್ನಲ್ಲಿ 100, 200, 400, 800, 1500, 5000 ಮೀಟರ್ ಓಟ, 3000 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಡಿಸ್ಕಸ್ ಥ್ರೋ, ಜಾವೆಲಿನ್ ಥ್ರೋ ಹಾಗೂ 4100, 4400 ಮೀಟರ್ ರಿಲೇ ಸ್ಪರ್ಧೆಗಳು ನಡೆಯಲಿವೆ. ಗುಂಪು ಕ್ರೀಡೆಗಳಲ್ಲಿ ವಾಲಿಬಾಲ್, ಕಬಡ್ಡಿ, ಖೋ-ಖೋ, ಫುಟ್ಬಾಲ್ ಮತ್ತು ಥ್ರೋಬಾಲ್ ಸ್ಪರ್ಧೆಗಳು ನಡೆಯಲಿದ್ದು, ಯೋಗಾಸನ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ಮಹಿಳೆಯರ ವಿಭಾಗದಲ್ಲಿಯೂ ವಿವಿಧ ಅಥ್ಲೆಟಿಕ್ಸ್ ಮತ್ತು ಗುಂಪು ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
*ಸೂಚನೆಗಳು:* ತಾಲ್ಲೂಕು ಮಟ್ಟದಲ್ಲಿ ನಡೆದ ಕ್ರೀಡೆಗಳಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ವಿವಿಧ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳಿಗೆ ಭಾಗವಹಿಸಲು ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಕ್ರೀಡಾಪಟುಗಳು ಮಾತ್ರ ಅರ್ಹರಿರುತ್ತಾರೆ. ದಸರಾ ಕ್ರೀಡಾಕೂಟದಲ್ಲಿ ಸಮವಸ್ತ್ರಧಾರಿ ಸೇವೆಗಳಿಗೆ (ಪೊಲೀಸ್, ಅಬಕಾರಿ, ಅರಣ್ಯ, ಅಗ್ನಿಶಾಮಕ, ರಕ್ಷಣಾಪಡೆ ಮತ್ತು ಅರೆರಕ್ಷಣಾಪಡೆಗೆ) ಸೇರಿದ ಸಿಬ್ಬಂದಿಗಳು ಭಾಗವಹಿಸಲು ಅರ್ಹರಿರುವುದಿಲ್ಲ. ತಾಲೂಕು ಮಟ್ಟದ ದಸರಾ ಸ್ಪರ್ಧೆಗಳಲ್ಲಿ ಆಯಾ ಜಿಲ್ಲೆಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಕ್ರೀಡಾಪಟುಗಳು ಪ್ರತಿನಿಧಿಸುವ ತಾಲೂಕು ಅಥವಾ ಜಿಲ್ಲೆಯ ಸ್ಥಳೀಯವಾದ ದೃಢೀಕರಣದ ಬಗ್ಗೆ (ಶಾಲಾ/ಕಾಲೇಜಿನ ಗುರುತಿನ ಚಿಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಸರ್ಕಾರದಿಂದ ಅಧಿಕೃತ ಇರುವ ಇತರೆ ಗುರುತಿನ ಚೀಟಿಗಳು) ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಕ್ರೀಡಾಪಟುಗಳು ಬೇರೆ ಜಿಲ್ಲೆಯಿಂದ ಭಾಗವಹಿಸಿದ್ದಲ್ಲಿ ಅವರನ್ನು ನಿಷೇಧಿಸಲಾಗುವುದು. ಕ್ರೀಡಾಪಟುಗಳು ಒಂದೊಮ್ಮೆ ವಿಧ್ಯಾಭ್ಯಾಸ ಅಥವಾ ಸೇವೆಯಲ್ಲಿದ್ದರೆ ಸಂಬಂಧಪಟ್ಟ ಕಾಲೇಜು ಅಥವಾ ಸಂಸ್ಥೆಗಳ ಗುರುತಿನ ಚೀಟಿಯೊಡನೆ ಕ್ರೀಡಾಕೂಟಕ್ಕೆ ಅವಕಾಶ ನೀಡಲಾಗುವುದು. ಒಂದು ತಾಲ್ಲೂಕು ಅಥವಾ ಜಿಲ್ಲೆಯಲ್ಲಿ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮತ್ತೊಂದು ಜಿಲ್ಲೆ ಅಥವಾ ತಾಲೂಕಿನ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವಂತಿಲ್ಲ.
ಆದ್ದರಿಂದ ಕಾರಟಗಿ, ಕನಕಗಿರಿ, ಕುಕನೂರು ಮತ್ತು ಕೊಪ್ಪಳ ತಾಲೂಕುಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಆನ್ಲೈನ್ ನೊಂದಣಿ ಪೋರ್ಟಲ್ https://dasaracmcup.in/ ಮೂಲಕ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನರ್ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಗದಗ ರಸ್ತೆ, ಕೊಪ್ಪಳ ಕಛೇರಿ ದೂರವಾಣಿ ಸಂಖ್ಯೆ: 08539-230121ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

