Kisan Goshthi and crop demonstration at Gedageri

ಗೆದಗೇರಿಯಲ್ಲಿ ಕಿಸಾನ್ ಗೋಷ್ಠಿ, ಬೆಳೆ ಪ್ರಾತ್ಯಕ್ಷಿಕೆ

ಬರ ಪರಿಸ್ಥಿತಿಯಲ್ಲೂ ರೈತರಿಗೆ ನಿರಂತರ ಆದಾಯ: ವಾಮನ ಮೂರ್ತಿ
ಕೊಪ್ಪಳ ಸೆಪ್ಟೆಂಬರ್ 02 (ಕರ್ನಾಟಕ ವಾರ್ತೆ): ರೈತರು ತಮ್ಮ ಹೊಲಗಳಲ್ಲಿ ಮಾವು, ಪೇರಲ, ಪಪಾಯ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಹೊಲದ ಬದುವಿನಲ್ಲಿ ತೆಂಗಿನ ಗಿಡಗಳನ್ನು ಬೆಳೆಸುವ ಮೂಲಕ ನಿರಂತರ ಆದಾಯ ಗಳಿಸಬಹುದು ಎಂದು ನಿವೃತ್ತ ತೋಟಗಾರಿಕೆ ತಜ್ಞ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆಯ ಸದಸ್ಯರಾದ ವಾಮನ ಮೂರ್ತಿ ಹೇಳಿದರು.
ಯಲಬುರ್ಗಾ ತಾಲ್ಲೂಕಿನ ಗೆದಗೇರಿ ಗ್ರಾಮದಲ್ಲಿ ಸೋಮವಾರ (ಆ. 31ರಂದು) ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಗಂಗಾವತಿ ಹಾಗೂ ಆತ್ಮ ಯೋಜನೆ ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವಿವಿಧ ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳನ್ನು ಸಮಗ್ರವಾಗಿ ಬೆಳೆಯುವುದರಿಂದ ರೈತರಿಗೆ ವರ್ಷವಿಡೀ ಆದಾಯದ ಮೂಲ ಸೃಷ್ಟಿಯಾಗಲಿದೆ. ಅಲ್ಲದೆ ಬರಗಾಲದಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಅಲ್ಪ ಪ್ರಮಾಣದ ಆದಾಯ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಗವಿಸಿದ್ದಯ್ಯ ಹಿರೇಮಠ ಅವರು ಪ್ರಸ್ತುತ ಮಳೆಯ ಅಭಾವ ಹಾಗೂ ಬರ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದರು. ರೈತರು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಲಭ್ಯವಿರುವ ನೀರನ್ನು ಸಂರಕ್ಷಿಸಿ ರಕ್ಷಣಾತ್ಮಕ ನೀರಾವರಿ ಒದಗಿಸುವ ಮೂಲಕ ಬೆಳೆಗಳನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ತೊಗರಿ, ಮೆಕ್ಕೆಜೋಳ ಹಾಗೂ ನೆಲಗಡಲೆ ಬೆಳೆಗಳಿಗೆ ಸಂಬಂಧಿಸಿದಂತೆ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ನಂತರ ರೈತ ಶ್ರೀ ಪರಸಪ್ಪನವರ ತೊಗರಿ ಹೊಲದಲ್ಲಿ ಕುಡಿ ಚಿವುಟುವ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. ತೊಗರಿ ಬೆಳೆಯಲ್ಲಿ ಸೂಕ್ತ ಸಮಯದಲ್ಲಿ ಕುಡಿ ಚಿವುಟುವುದರಿಂದ ಉತ್ತಮ ಬೆಳವಣಿಗೆ ಹಾಗೂ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ರೈತರಿಗೆ ತಿಳಿಸಲಾಯಿತು.
ಬರ ಪರಿಸ್ಥಿತಿಯಿಂದ ಬೆಳೆಗಳಿಗೆ ಉಂಟಾಗುವ ಜೈವಿಕ ಒತ್ತಡವನ್ನು ಕಡಿಮೆ ಮಾಡಲು ನ್ಯಾನೋ ಯೂರಿಯಾ ಹಾಗೂ 19:19:19ರಂತಹ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಸೂಕ್ತ ಪ್ರಮಾಣದಲ್ಲಿ ಸಿಂಪಡಿಸುವ ಮೂಲಕ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು ಎಂದು ವಾಮನ ಮೂರ್ತಿ ಸಲಹೆ ನೀಡಿದರು. ತೊಗರಿ ಬೆಳೆ ಹೂ ಬಿಡಲು ಆರಂಭಿಸಿದ ಸಂದರ್ಭದಲ್ಲಿ ‘ಪಲ್ಸ್ ಮ್ಯಾಜಿಕ್’ ಲಘು ಪೋಷಕಾಂಶಗಳ ಮಿಶ್ರಣವನ್ನು ಸಿಂಪಡಿಸುವುದರಿAದ ಶೇ.15ರಿಂದ 20ರಷ್ಟು ಇಳುವರಿ ಹೆಚ್ಚಿಸಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಅಚ್ಚಪ್ಪ, ತಿರುಪತಿ, ಪರಸಪ್ಪ, ನೀಲಪ್ಪ ಕಕ್ಕಿಹಳ್ಳಿ, ಶಿವಪ್ಪ ಕಂಡಕ್ಟರ್ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು. ಆತ್ಮ ಯೋಜನೆಯ ಜಿಲ್ಲಾ ಉಪ ಯೋಜನಾ ನಿರ್ದೇಶಕ ಶಿವಪ್ಪ ನಾಯಕ, ಬಿಟಿಎಂ ಜ್ಯೋತಿ ಹಾಗೂ ಕೃಷಿಸಖಿ ನಿರ್ಮಲ ಉಪಸ್ಥಿತರಿದ್ದರು.

