Tourism Department: Homestay registration mandatory
ಪ್ರವಾಸೋದ್ಯಮ ಇಲಾಖೆ: ಹೋಂಸ್ಟೇ ನೋಂದಣಿ ಕಡ್ಡಾಯ

ಕೊಪ್ಪಳ ಸೆಪ್ಟೆಂಬರ್ 02, (ಕರ್ನಾಟಕ ವಾರ್ತೆ): ರಾಜ್ಯದ ವ್ಯಾಪ್ತಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹೋಂ ಸ್ಟೇ ಪ್ರಾರಂಭಿಸಲು ಅಥವಾ ಸ್ಥಾಪಿಸಲು ಕೆ.ಟಿ.ಟಿ.ಎಫ್-2015 ರ ಕಾಯ್ದೆಯಂತೆ ಪ್ರವಾಸೋದ್ಯಮ ಇಲಾಖೆಯಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಕೊಪ್ಪಳ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಪ್ರವಾಸೋದ್ಯಮ ಇಲಾಖೆಯಡಿ ನೋಂದಣಿ ಮಾಡಿಕೊಳ್ಳದೇ ಹಲವು ಹೋಂಸ್ಟೇಗಳು ಕಾರ್ಯಾಚರಿಸುತ್ತಿರುವುದು ಗಮನಕ್ಕೆ ಬಂದಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ನೋಂದಣಿ ಮಾಡಿಕೊಳ್ಳದೇ ಇರುವ ಹೋಂಸ್ಟೇಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು. ಮುಂದುವರೆದು ಇಂತಹ ಹೋಂಸ್ಟೇಗಳನ್ನು ಕಾನೂನು ಬದ್ಧವಾಗಿ ಮುಂದುವರೆಸಲು ಆಸಕ್ತಿ ಇರುವ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಕಂಡು ಬರುವ ಅನಧಿಕೃತ ಹೋಂಸ್ಟೇಗಳು ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆದು https://portal.karnatakatourism.org ವೆಬ್‌ಸೈಟ್ ನಲ್ಲಿ ನೋಂದಾಯಿಸಿಕೊಳ್ಳಲು ಹೋಂಸ್ಟೇ ನೋಂದಣಿಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.
ಹೋಂಸ್ಟೇ ನೋಂದಣಿಗೆ ಪ್ರವಾಸೋದ್ಯಮ ಇಲಾಖೆಯಿಂದ ಹೊರಡಿಸಿರುವ ನೂತನ ಮಾರ್ಗಸೂಚಿಗಳನ್ವಯ ಎಲ್ಲಾ ಅರ್ಹತೆ ಮತ್ತು ಮಾನದಂಡಗಳನ್ನು ಪೂರೈಸಿರುವ ಹೋಂಸ್ಟೇಗಳಿಗೆ ನೋಂದಣಿ ಪ್ರಮಾಣಪತ್ರ ನೀಡಲು ನಿಯಮಾನುಸಾರ ಕ್ರಮ ವಹಿಸಲಾಗುವುದು. ನೋಂದಣಿ ಪ್ರಮಾಣಪತ್ರ ಪಡೆಯದೆ ಕಾರ್ಯಾಚರಿಸುತ್ತಿರುವ ಹೋಂಸ್ಟೇಗಳು ಈ ಕೂಡಲೇ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ಈ ಆದೇಶವನ್ನು ಉಲ್ಲಂಘಿಸಿ, ಯಾವುದೇ ಹೋಂಸ್ಟೇ ಮಾಲೀಕರು ಪ್ರವಾಸಿಗರಿಗೆ ಉಳಿಯಲು ಕೊಠಡಿಗಳನ್ನು ನೀಡಿರುವುದು ಮತ್ತು ಆನ್‌ಲೈನ್‌ನಲ್ಲಿ ರೂಮ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಿದ್ದಲ್ಲಿ ಅಂತಹ ಹೋಂಸ್ಟೇ ಮಾಲೀಕರ ವಿರುದ್ದ ಕೆ.ಟಿ.ಟಿ.ಎಫ್-2015 ರ ಕಾಯ್ದೆಯಂತೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

