
No room for card games or gambling under the guise of Diwali: Warning of strict action


ದೀಪಾವಳಿ ನೆಪದಲ್ಲಿ ಇಸ್ಪೀಟು, ಜೂಜಾಟಕ್ಕೆ ಅವಕಾಶವಿಲ್ಲ: ಕಠಿಣ ಕ್ರಮದ ಎಚ್ಚರಿಕೆ
ವರ್ತಕರು ತಮ್ಮ ಮಳಿಗೆಗಳನ್ನು ಜೂಜಾಟಕ್ಕೆ ಬಾಡಿಗೆ ನೀಡಿದರೆ ಅವರ ಮೇಲೂ ಕಾನೂನು ಕ್ರಮ: ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್
ಗಂಗಾವತಿ: ದೀಪಾವಳಿ ಹಬ್ಬದ ನೆಪದಲ್ಲಿ ಇಸ್ಪೀಟು ಹಾಗೂ ಹಣವನ್ನು ಪಣಕ್ಕಿಟ್ಟು ಜೂಜಾಟ ನಡೆಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜೂಜಾಟಕ್ಕೆ ಸ್ಥಳಾವಕಾಶ ಕಲ್ಪಿಸುವ ಮಳಿಗೆ ಮಾಲೀಕರು ಹಾಗೂ ವರ್ತಕರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಗಂಗಾವತಿ ಉಪವಿಭಾಗದ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಖಡಕ್ ಎಚ್ಚರಿಕೆ ನೀಡಿದರು.
ನಗರದ ಎಪಿಎಂಸಿ ಗಂಜ್ ಆವರಣದಲ್ಲಿರುವ ದಲಾಲರು ಹಾಗೂ ಖರೀದಿದಾರ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.
ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿ ಪೂಜೆಯ ನೆಪದಲ್ಲಿ ವ್ಯಾಪಾರ ವಹಿವಾಟುಗಳನ್ನು ಬದಿಗಿಟ್ಟು ಬಹಿರಂಗವಾಗಿ ಇಸ್ಪೀಟು ಮತ್ತು ಜೂಜಾಟ ನಡೆಸುವುದು ಕಾನೂನುಬಾಹಿರ. ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಇಂತಹ ಅನಿಷ್ಟ ಪದ್ಧತಿಗೆ ಈ ಬಾರಿ ಸಂಪೂರ್ಣ ಕಡಿವಾಣ ಹಾಕಬೇಕು. ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಖಾಲಿ ನಿವೇಶನಗಳು, ಹೋಟೆಲ್ಗಳ ಹಿಂಭಾಗ ಸೇರಿದಂತೆ ನಗರದ ಯಾವುದೇ ಪ್ರದೇಶದಲ್ಲಿ ಹಣವನ್ನು ಪಣಕ್ಕಿಟ್ಟು ಜೂಜಾಟ ನಡೆಸಿದರೆ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೆಲವು ದಲಾಲಿ ವರ್ತಕರು ತಮ್ಮ ಮಳಿಗೆಗಳನ್ನು ಇಸ್ಪೀಟು ಆಟಕ್ಕೆ ಬಾಡಿಗೆ ನೀಡುತ್ತಿರುವ ಮಾಹಿತಿ ಇದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ವರ್ತಕರು ಯಾವುದೇ ಕಾರಣಕ್ಕೂ ಸಹಕಾರ ನೀಡಬಾರದು. ಜೂಜಾಟದಲ್ಲಿ ಭಾಗವಹಿಸುವವರಷ್ಟೇ ಅಲ್ಲದೆ, ಅದಕ್ಕೆ ಸ್ಥಳಾವಕಾಶ ಒದಗಿಸುವವರನ್ನೂ ಕಾನೂನಿನ ವ್ಯಾಪ್ತಿಗೆ ತರಲಾಗುವುದು. ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ನಗರದಾದ್ಯಂತ ವಿಶೇಷ ನಿಗಾ ವಹಿಸಲಿದೆ ಎಂದು ತಿಳಿಸಿದರು.
ಇದೇ ವೇಳೆ ಕಳೆದ ಬಾರಿ ಭತ್ತ ಖರೀದಿಯ ಹೆಸರಿನಲ್ಲಿ ವ್ಯಾಪಾರಸ್ಥರಿಗೆ ಕೋಟ್ಯಂತರ ರೂಪಾಯಿ ವಂಚನೆ ನಡೆದ ಘಟನೆಗಳನ್ನು ಉಲ್ಲೇಖಿಸಿದ ಅವರು, ಈ ಬಾರಿ ವರ್ತಕರು ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಮಾರುಕಟ್ಟೆಯ ಸಾಮಾನ್ಯ ದರಕ್ಕಿಂತ ಹೆಚ್ಚಿನ ಬೆಲೆ ನೀಡುವ ಆಮಿಷಕ್ಕೆ ಒಳಗಾಗದೆ, ಭತ್ತದ ಖರೀದಿ ಮತ್ತು ಮಾರಾಟದ ಸಂದರ್ಭದಲ್ಲಿ ವ್ಯಕ್ತಿಗಳು ಹಾಗೂ ವ್ಯವಹಾರದ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ ವ್ಯವಹರಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ನಗರ ಠಾಣೆಯ ಪಿಐ ಪ್ರಕಾಶ್ ಯಾತನೂರು, ಎಪಿಎಂಸಿ ಕಾರ್ಯದರ್ಶಿ ಯಮನಪ್ಪ, ವ್ಯಾಪಾರಸ್ಥರಾದ ಮಸ್ಕಿ ಸಿದ್ದಣ್ಣ, ಸಿಂಗನಾಳ ಸುರೇಶ್, ಮಾಂತಗೊಂಡ ಸರ್ವೇಶ್, ಗಾಳಿ ಶಿವಪ್ಪ, ಸಿಂಗನಾಳ ವೆಂಕಟೇಶ್, ಗಲಗಲಿ ಮಾಂತೇಶ್, ಹನುಮೇಶ್ ಶೆಟ್ಟಿ, ಜಂಬಣ್ಣ ಆಚಾರ್ ನರಸಾಪುರ, ರಮೇಶ್, ಲಿಂಗನಗೌಡ, ಮಂಜುನಾಥ ಸೇರಿದಂತೆ ಅನೇಕ ವರ್ತಕರು ಉಪಸ್ಥಿತರಿದ್ದರು.



