ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ

H.Mallikarjun
H.Mallikarjun - Kalyanasiri
2 Min Read

Awareness is needed to prevent cruelty to children

 

 

ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ

ಜಾಹೀರಾತು

 

ಕೊಪ್ಪಳ ಸೆಪ್ಟೆಂಬರ್ 01 (ಕರ್ನಾಟಕ ವಾರ್ತೆ): ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ಸೇರಿದಂತೆ ಮಕ್ಕಳ ಹಕ್ಕುಗಳ ಉಲ್ಲಂಘನೆಗಳನ್ನು ತಡೆಗಟ್ಟಲು ಗ್ರಾಮ ಮಟ್ಟದಲ್ಲಿ ನಿರಂತರ ಜಾಗೃತಿ ಮೂಡಿಸುವುದು ಅಗತ್ಯ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಮನಮ್ಮ ಹೇಳಿದರು.
ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್ 31ರಂದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ನವಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಜನಸಂಪರ್ಕ ಸಂವಾದ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಸರ್ಕಾರ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೊ)-2012, ತಿದ್ದುಪಡಿ-2019 ಸೇರಿದಂತೆ ಹಲವು ಕಾನೂನುಗಳನ್ನು ಜಾರಿಗೊಳಿಸಿದೆ. 18 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳಕ್ಕೆ ಕಠಿಣ ಶಿಕ್ಷೆ ಮತ್ತು ದಂಡದ ಅವಕಾಶವಿದೆ. ಅಪರಾಧಕ್ಕೆ ಸಹಾಯ, ಪ್ರೋತ್ಸಾಹ ಅಥವಾ ಪ್ರಯತ್ನ ಮಾಡುವವರಿಗೂ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮಕ್ಕಳು ತಿಳಿದೋ, ತಿಳಿಯದೆಯೋ ಕಾನೂನಿನ ವ್ಯಾಪ್ತಿಗೆ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಮಾಡುವುದು, ಅದರಲ್ಲಿ ಭಾಗವಹಿಸುವುದು ಅಥವಾ ಪ್ರೋತ್ಸಾಹಿಸುವುದು ಕಾನೂನುಬಾಹಿರವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಬಾಲ್ಯವಿವಾಹದಿಂದ ತಾಯಿ ಮತ್ತು ಶಿಶು ಮರಣ, ಅಪೌಷ್ಟಿಕತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ 18 ವರ್ಷದೊಳಗಿನ ಹೆಣ್ಣುಮಗು ಹಾಗೂ 21 ವರ್ಷದೊಳಗಿನ ಗಂಡುಮಗುವಿನ ವಿವಾಹವನ್ನು ನಿಷೇಧಿಸಲಾಗಿದೆ. ಬಾಲ್ಯವಿವಾಹ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಸಾರ್ವಜನಿಕರು, ಪೋಷಕರು ಹಾಗೂ ಯುವಜನರು ಸಹಕರಿಸಬೇಕು ಎಂದು ಕರೆ ನೀಡಿದರು.
ಗ್ರಾಮ ಮಟ್ಟದ ಮಕ್ಕಳ ರಕ್ಷಣಾ ಸಮಿತಿಗಳ ಮೂಲಕ ಮಕ್ಕಳ ಹಕ್ಕುಗಳು, ಕಾನೂನುಗಳು ಹಾಗೂ ಸುರಕ್ಷತೆ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಭಾಷ ಪಾಟೀಲ್ ವಹಿಸಿದ್ದರು. ಉಪನ್ಯಾಸಕರಾದ ಶ್ರೀನಿಂಗಪ್ಪ, ಮೈಬೂಬ, ನಾಗಮ್ಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೇಲ್ವಿಚಾರಕಿ ಶಾಹಿದಾಬೇಗಂ ಕುಂದರಪಿ ಹಾಗೂ ಪೊಲೀಸ್ ಇಲಾಖೆಯ ಕಿಶೋರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರಮೇಶ್ ಹೆಚ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Total Views: 0
ಜಾಹೀರಾತು
Share This Article