ವಿಬಿಜಿರಾಮ್ ಜೀ ಯೋಜನೆ ಗ್ರಾಮೀಣ ಕುಟುಂಬಗಳಿಗೆ ಆಸರೆ: ದೇವರಾಜ ಪತ್ತಾರ

H.Mallikarjun
H.Mallikarjun - Kalyanasiri
2 Min Read

Vibijiram Ji’s scheme is a support for rural families: Devaraj Pattara

ಬುಡಶೆಟ್ನಾಳ ಗ್ರಾಮದ ಕೆರೆ ಪುನಶ್ಚೇತನ ಕಾಮಗಾರಿ
ವಿಬಿಜಿರಾಮ್ ಜೀ ಯೋಜನೆ ಗ್ರಾಮೀಣ ಕುಟುಂಬಗಳಿಗೆ ಆಸರೆ: ದೇವರಾಜ ಪತ್ತಾರ
ಕೊಪ್ಪಳ ಸೆಪ್ಟೆಂಬರ್ 01 (ಕರ್ನಾಟಕ ವಾರ್ತೆ): ಗ್ರಾಮೀಣ ಭಾಗದ ಕುಟುಂಬಗಳಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ಮೂಲಕ ಆರ್ಥಿಕ ಸಬಲೀಕರಣಕ್ಕೆ ನೆರವಾಗುತ್ತಿರುವ ವಿಕಸಿತ ಭಾರತ ಜಿರಾಮ್ ಜೀ (ವಿಬಿಜಿರಾಮ್ ಜೀ) ಯೋಜನೆ ಆಸರೆಯಾಗಿದೆ ಎಂದು ತಾಲೂಕು ಪಂಚಾಯಿತಿ ಐಇಸಿ ಸಂಯೋಜಕ ದೇವರಾಜ ಪತ್ತಾರ ಹೇಳಿದರು.
ಮಂಗಳವಾರ (ಸೆ. 1ರಂದು) ಕಲಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಡಶೆಟ್ನಾಳ ಗ್ರಾಮದ ಕೆರೆ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯೋಜನೆಯಡಿ ಗ್ರಾಮಗಳಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ಗ್ರಾಮೀಣ ಕೂಲಿಕಾರರು ಗುಳೆ ಹೋಗುವುದನ್ನು ತಡೆದು, ಪ್ರತಿ ಕುಟುಂಬಕ್ಕೆ ಸ್ಥಳೀಯವಾಗಿ 125 ದಿನಗಳ ಕೂಲಿ ಕೆಲಸ ಒದಗಿಸುವ ಉದ್ದೇಶ ಹೊಂದಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಜಲ ಸಂರಕ್ಷಣೆ, ನೀರಾವರಿ, ಅಂತರ್ಜಲ ಮರುಪೂರಣ, ಜಲಾನಯನ ಪ್ರದೇಶ ಅಭಿವೃದ್ಧಿ ಹಾಗೂ ಜಲಮೂಲಗಳ ಪುನಶ್ಚೇತನ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಕೂಲಿಕಾರರು ಕಾಮಗಾರಿ ಸ್ಥಳದಲ್ಲಿ ಹಾಜರಾತಿ ದಾಖಲಿಸುವುದರ ಜತೆಗೆ ವಹಿಸಲಾದ ಅಳತೆಗೆ ಅನುಗುಣವಾಗಿ ಕೆಲಸ ನಿರ್ವಹಿಸಬೇಕು. ಕೇವಲ ಹಾಜರಾತಿ ಹಾಕಿದ ಮಾತ್ರಕ್ಕೆ ಕೂಲಿ ಪಾವತಿಯಾಗುವುದಿಲ್ಲ ಎಂಬುದನ್ನು ಕಾಯಕ ಬಂಧುಗಳು ಹಾಗೂ ಕೂಲಿಕಾರರು ಅರಿತುಕೊಳ್ಳಬೇಕು. ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ಕೆಲಸದ ಅಳತೆಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗಿದ್ದು, ಇದರ ಸದುಪಯೋಗ ಪಡೆಯಬೇಕು. ಪ್ರಸ್ತುತ ಪ್ರತಿ ಮಾನವ ದಿನಕ್ಕೆ ರೂ.382 ಕೂಲಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಯೋಜನೆಯಡಿ ಜಾನುವಾರು ಶೆಡ್, ಮೇಕೆ ಶೆಡ್, ಕೃಷಿಹೊಂಡ, ಬದು ನಿರ್ಮಾಣ, ಕೋಳಿ ಶೆಡ್ ಸೇರಿದಂತೆ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಜಮೀನು ಇಲ್ಲದವರು ಗ್ರಾಮ ಪಂಚಾಯಿತಿಯಿAದ ಕೈಗೊಳ್ಳುವ ಸಾಮೂಹಿಕ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿ ಕೂಲಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಹೊಸದಾಗಿ ನೋಂದಣಿಯಾದ ಕುಟುಂಬಗಳಿಗೆ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಲಾಗುವುದು ಎಂದರು.
ಕಲಕೇರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಡ್ಡಿ ತವದಿ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಜಾಬ್‌ಕಾರ್ಡ್ ಮೇಳ ನಡೆಯುತ್ತಿದ್ದು, ಯೋಜನೆಯಡಿ ಇನ್ನೂ ನೋಂದಣಿಯಾಗದ ಕುಟುಂಬಗಳು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪ್ರತಿ ಹಾಗೂ ಇ-ಕೆವೈಸಿ ದಾಖಲೆಗಳೊಂದಿಗೆ ಗ್ರಾಮೀಣ ರೋಜಗಾರ್ ಗ್ಯಾರಂಟಿ ಕಾರ್ಡ್ ಪಡೆಯಬಹುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಸ್ಯಾನಿಟೇಶನ್ ಮತ್ತು ಹೈಜಿನ್ ಸಮಾಲೋಚಕಿ ಬಸಮ್ಮ ಹುಡೇದ ಅವರು ಮಹಿಳೆಯರ ವೈಯಕ್ತಿಕ ಶುಚಿತ್ವ, ಮಾಸಿಕ ಋತುಚಕ್ರ ನಿರ್ವಹಣೆ, ಸ್ವಚ್ಛ ಬಟ್ಟೆ ಮತ್ತು ಸ್ಯಾನಿಟರಿ ಪ್ಯಾಡ್ ಬಳಕೆಯ ಕುರಿತು ಮಾಹಿತಿ ನೀಡಿದರು. ಬಳಸಿದ ಪ್ಯಾಡ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಗ್ರಾಮ ಪಂಚಾಯಿತಿ ವಾಹನಕ್ಕೆ ಅಥವಾ ನಿಗದಿತ ಸ್ಥಳಕ್ಕೆ ನೀಡಿ, ಇನ್ಸಿನರೇಟರ್ ಮೂಲಕ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಕಸ ಸಂಗ್ರಹ ವಾಹನಕ್ಕೆ ನೀಡಬೇಕು. ಬಯಲು ಶೌಚದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಿಡಿಒ ಬಸವರಡ್ಡಿ ತವದಿ, ಡಿಇಒ ಕುಮಾರ ಪರಗಿ, ಬೇರ್‌ಫೂಟ್ ಟೆಕ್ನಿಷಿಯನ್ ಮಾರುತಿ ವಾಲ್ಮೀಕಿ, ಗ್ರಾಮ ಕಾಯಕ ಮಿತ್ರ ರಾಧಾ, ತಾಂಡಾ ರೋಜಗಾರ್ ಮಿತ್ರ ಯಮನೂರಪ್ಪ, ಕಾಯಕ ಬಂಧುಗಳು ಸೇರಿದಂತೆ 304 ಕೂಲಿಕಾರರು ಉಪಸ್ಥಿತರಿದ್ದರು.
Total Views: 0
ಜಾಹೀರಾತು
Share This Article