ಜಾಥಾ ಮೂಲಕ ಅಳವಂಡಿಯಲ್ಲಿ ಎಸ್.ಐ.ಆರ್ ಜಾಗೃತಿ

H.Mallikarjun
H.Mallikarjun - Kalyanasiri
2 Min Read

S.I.R. awareness campaign via a rally in Alavandi

ಜಾಥಾ ಮೂಲಕ ಅಳವಂಡಿಯಲ್ಲಿ ಎಸ್.ಐ.ಆರ್ ಜಾಗೃತಿ


ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮಾಹಿತಿ ನೀಡಿ: ಮಹೇಶ್

—-
ಕೊಪ್ಪಳ ಜುಲೈ 03 (ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಕಾರ್ಯಕ್ರಮ ಹಮ್ಮಿಕೊಂಡಿದ್ದು ಬೂತ್ ಮಟ್ಟದ ಅಧಿಕಾರಿಗೆ ಅಗತ್ಯ ಮಾಹಿತಿ ನೀಡಲು ಸಹಕರಿಸಬೇಕೆಂದು ಕೊಪ್ಪಳ ತಾಲೂಕ ಪಂಚಾಯತ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್ ಅವರು ಕರೆ ನೀಡಿದರು.
ಕೊಪ್ಪಳ ತಾಲೂಕ ಸ್ವೀಪ್ ಸಮಿತಿ ಕೊಪ್ಪಳ ಹಾಗೂ ಅಳವಂಡಿ ಗಾಮ ಪಂಚಾಯತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ (ಜು. 3ರಂದು) ಆಯೋಜಿಸಿದ್ದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಈ ಕಾರ್ಯಕ್ರಮದ ಮೂಲಕ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು ಹಾಗೂ ಮರಣ ಹೊಂದಿರುವವರು, ಸ್ಥಳಾಂತರಗೊಂಡಿರುವವರು, ನಕಲು ಹೆಸರುಗಳು, ಮತ್ತು ಇತರ ಅನರ್ಹ ಮತದಾರರನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವುದು ಇದರ ಉದ್ದೇಶವಾಗಿದೆ. ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಓ) ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ. ಮತದಾರರು ಎಸ್.ಐ.ಆರ್ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕೆಂದರು. ಬೂತ್ ಮಟ್ಟದ ಅಧಿಕಾರಿಯು ಪ್ರತಿ ಮನೆಗೆ ಮೂರು ಬಾರಿ ಭೇಟಿ ನೀಡಲಿದ್ದಾರೆ. ಅಗತ್ಯ ಮಾಹಿತಿಯನ್ನು ಪ್ರತಿಯೊಬ್ಬರು ಸಲ್ಲಿಸಲು ಇದೊಂದು ಸದಾವಕಾಶ ಹಾಗೂ ಹೊಸದಾಗಿ ಸೇರ್ಪಡೆಗೆ ಸಹ ಅವಕಾಶವಿದೆ ಎಂದರು.
ವಿದ್ಯಾರ್ಥಿಗಳಿಂದ ಕಾಲ್ನಡಿಗೆ ಮೂಲಕ ಜಾಗೃತಿ ಜಾಥಾವು ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಪ್ರಾರಂಭವಾಗಿ ಗ್ರಾಮದ ಅಗಸಿ ಮಾರ್ಗವಾಗಿ ಓಣಿಗಳಲ್ಲಿ ಸಂಚರಿಸಿ ಬಸವೇಶ್ವರ ಸರ್ಕಲ್ ತಲುಪಿ ಬನ್ನಿಕಟ್ಟೆಯವರೆಗೆ ಜಾಗೃತಿ ಮೂಡಿಸಿ ಪುನಃ ಕಾಲೇಜಿನ ಆವರಣದಲ್ಲಿ ಮುಕ್ತಾಯಗೊಂಡಿತು.ಬಟಿಂಗ್ಸ್ ಪ್ರದರ್ಶನದಿಂದ ಕಾಲ್ನಡಿಗೆ ಜಾಥಾಕ್ಕೆ ಮೆರಗು ತಂದಿತು. 350 ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರರಾದ ನವೀನ ಇನಾಮದಾರ, ಪಂಚಾಯತ ಅಭಿವೃದ್ದಿ ಅಧಿಕಾರಿ ಕೊಟ್ರಪ್ಪ ಅಂಗಡಿ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಅಂಗನವಾಡಿ ಮೇಲ್ವಿಚಾರಕಿ ರಹಮತ್‌ಬೀ, ಕಾಲೇಜಿನ ಉಪನ್ಯಾಸಕರಾದ ಅಮರೇಶ, ಎಸ್.ಎಸ್ ಅಂಗಡಿ, ಗ್ರಾಮ ಪಂಚಾಯತ ಕಾರ್ಯದರ್ಶಿ ಬಸವರಾಜ, ಸಂಜೀವಿನಿ ಯೋಜನೆಯ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹೀರಾತು
Total Views: 0
Share This Article