ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಶ್ರಮಿಸಿ: ನ್ಯಾ. ಮಹಾಂತೇಶ ದರಗದ

H.Mallikarjun
H.Mallikarjun - Kalyanasiri
3 Min Read

Strive to prevent human trafficking: Justice Mahantesh Daragad

ಜಾಹೀರಾತು

ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಶ್ರಮಿಸಿ: ನ್ಯಾ. ಮಹಾಂತೇಶ ದರಗದ


ಕೊಪ್ಪಳ ಜುಲೈ 03 (ಕರ್ನಾಟಕ ವಾರ್ತೆ): ಮಾನವ ಕಳ್ಳ ಸಾಗಾಣಿಕೆಯು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಈ ಸಮಸ್ಯೆಯನ್ನು ತಡೆಗಟ್ಟಲು ಎಲ್ಲರೂ ಸೇರಿ ಶ್ರಮಿಸಬೇಕೆಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರದ ಸದಸ್ಯ ಕಾರ್ಯದರ್ಶಿಗಲಾದ ಮಹಾಂತೇಶ ಎಸ್. ದರಗದ ಅವರು ಹೇಳಿದರು.
“ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನದ” ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಹಾಗೂ ಸರ್ಕಾರಿ ಉಪಕಾರಣಗಾರ ಹಾಗೂ ತರಬೇತಿ ಸಂಸ್ಥೆ ದಾದೆಗಲ್ ಇವರುಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸಂಬಂಧಿತ ಕಾನೂನುಗಳ ಕುರಿತು ಶುಕ್ರವಾರ (ಜು. 3ರಂದು) ದಾದೆಗಲ್ ಸರ್ಕಾರಿ ಉಪಕಾರಣಗಾರ ಹಾಗೂ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರನ್ನು ಮೋಸ, ಬೆದರಿಕೆ ಅಥವಾ ಬಲವಂತದ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಿ, ಅವರನ್ನು ಲೈಂಗಿಕ ಶೋಷಣೆ, ಬಲವಂತದ ದುಡಿಮೆ, ಬಾಲಕಾರ್ಮಿಕತೆ, ಭಿಕ್ಷಾಟನೆ ಅಥವಾ ಅಂಗಾAಗ ಕಳ್ಳಸಾಗಾಣಿಕೆಯಂತಹ ಅಮಾನವೀಯ ಚಟುವಟಿಕೆಗಳಿಗೆ ಬಳಸುವುದೇ ಮಾನವ ಕಳ್ಳ ಸಾಗಾಣಿಕೆಯಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ವಿಶ್ವದಾದ್ಯಂತ ದೊಡ್ಡ ಅಪರಾಧವಾಗಿ ಪರಿಗಣಿಸಲಾಗಿದೆ. ಬಡತನ, ನಿರುದ್ಯೋಗ, ಶಿಕ್ಷಣದ ಕೊರತೆ, ಸುಳ್ಳು ಉದ್ಯೋಗದ ಆಮಿಷಗಳು ಮತ್ತು ಸಾಮಾಜಿಕ ಅಸಮಾನತೆಗಳು ಮಾನವ ಕಳ್ಳ ಸಾಗಾಣಿಕೆಗೆ ಪ್ರಮುಖ ಕಾರಣಗಳಾಗಿವೆ. ಮಹಿಳೆಯರು, ಮಕ್ಕಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಜನರು ಹೆಚ್ಚಾಗಿ ಇದರ ಬಲಿಯಾಗುತ್ತಾರೆ ಎಂದರು.
ಈ ಸಮಸ್ಯೆಯನ್ನು ತಡೆಯಲು ಸರ್ಕಾರ, ಪೊಲೀಸ್ ಇಲಾಖೆ, ಸಾಮಾಜಿಕ ಸಂಘಟನೆಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಅಪರಿಚಿತರ ಉದ್ಯೋಗ ಅಥವಾ ವಿದೇಶ ಪ್ರಯಾಣದ ಆಮಿಷಗಳನ್ನು ನಂಬುವ ಮೊದಲು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಸಾರ್ವಜನಿಕರು ವಿಶೇಷವಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬAದರೆ, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಅವರು ಮಾತನಾಡಿ, ಮಕ್ಕಳ ರಕ್ಷಣಾ ನೀತಿ 2016 ಪರಿಷ್ಕೃತ-2022ರ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಪ್ರತಿಯೊಂದು ಶಾಲೆ, ಕಾಲೇಜು ತನ್ನದೇ ಆದ ಲಿಖಿತ ಮಕ್ಕಳ ರಕ್ಷಣಾ ನೀತಿಯನ್ನು ಹೊಂದಿರಬೇಕು. ಶಾಲಾ ಆವರಣದಲ್ಲಿ ದೈಹಿಕ, ಮಾನಸಿಕ, ಲೈಂಗಿಕ, ಭಾವನಾತ್ಮಕ ಹಿಂಸೆ, ಬೆದರಿಕೆ, ರ‍್ಯಾಗಿಂಗ್ ಹಾಗೂ ತಾರತಮ್ಯಕ್ಕೆ ಅವಕಾಶ ನೀಡಬಾರದು. ಶಿಕ್ಷಕರು, ಚಾಲಕರು, ಸಹಾಯಕ ಸಿಬ್ಬಂದಿ ಸೇರಿದಂತೆ ಮಕ್ಕಳೊಂದಿಗೆ ಕೆಲಸ ಮಾಡುವ ಎಲ್ಲರ ಪೊಲೀಸ್ ಹಿನ್ನೆಲೆ ಪರಿಶೀಲನೆ ಪಡೆದುಕೊಳ್ಳಬೇಕು ಸಮಾಲೋಚನೆ ಅಗತ್ಯವಿರುವ ಮಕ್ಕಳಿಗೆ ಮಾನಸಿಕ ಆರೋಗ್ಯ ಮತ್ತು ಸಮಾಲೋಚನಾ ಸೇವೆಗಳನ್ನು ಒದಗಿಸಬೇಕು. ಶಿಕ್ಷಕರು, ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು ಮತ್ತು ಪೊಕ್ಸೋ ಕಾಯ್ದೆಯ ಕುರಿತು  ತರಬೇತಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೇಷನ್ ಆಫೀಸರ್ ಶಿವಲೀಲಾ ವನ್ನೂರ ಅವರು ಪೊಕ್ಸೋ ಕಾಯ್ದೆ ಮತ್ತು ದತ್ತು ಕಾರ್ಯಕ್ರಮ ಮತ್ತು ಫಾಸ್ಟರ್‌ಕೇರ್ ಕುರಿತು ಹಾಗೂ ಸಮಾಜ ಕಾರ್ಯಕರ್ತೆ ಪ್ರತಿಭಾ ಕಾಶಿಮಠ  ಅವರು ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ ಕಾಯ್ದೆ-2016 ಹಾಗೂ ಮಕ್ಕಳ ರಕ್ಷಣಾ ನೀತಿ-2016 ಪರಿಷ್ಕೃತ-2022ರ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.  
ಸರ್ಕಾರಿ ಉಪಕಾರಣಗಾರ ಹಾಗೂ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಮೌನೇಶ ರಾಥೋಡ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಬಡಿಗೇರ್ ಅವರು ಸ್ವಾಗತಿಸಿದರು. ರಮೇಶ ನಿರೂಪಿಸಿ, ವಂದಿಸಿದರು,
ಈ ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಠಾಣೆಯ ಎ.ಎಸ್.ಐ ಸೂರ್ಯಕಾಂತ್ ಸೇರಿದಂತೆ ಸರ್ಕಾರಿ ಉಪಕಾರಣಗಾರ ಹಾಗೂ ತರಬೇತಿ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Total Views: 0
Share This Article