Koppal: Job card fair for rural employment generation

ಕೊಪ್ಪಳ: ಗ್ರಾಮೀಣ ಉದ್ಯೋಗ ಸೃಷ್ಟಿಗೆ ಜಾಬ್ ಕಾರ್ಡ್ ಮೇಳ


ಕೊಪ್ಪಳ ಆಗಸ್ಟ್ 18 (ಕರ್ನಾಟಕ ವಾರ್ತೆ): ಗ್ರಾಮೀಣ ಜನತೆಯ ವಲಸೆಯನ್ನು ತಡೆದು, ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆ ವತಿಯಿಂದ ಆ.15ರಿಂದ ಕೊಪ್ಪಳ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನ ಹಮ್ಮಿಕೊಳ್ಳಲಾಗಿದೆ.
2026ರ ಜುಲೈ 1ರಿಂದ ಜಾರಿಗೆ ಬಂದಿರುವ ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಷನ್ ಗ್ರಾಮೀಣ (ವಿಬಿ–ಜಿ ರಾಮ್ ಜಿ) ಯೋಜನೆಯಡಿ ನೋಂದಾಯಿಸಿಕೊಂಡು ಇ-ಕೆವೈಸಿ ಪೂರ್ಣಗೊಳಿಸಿರುವ ಕೂಲಿಕಾರರಿಗೆ ಅಕುಶಲ ಉದ್ಯೋಗ ಒದಗಿಸಲಾಗುತ್ತಿದೆ.
ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 75,777 ಜಾಬ್ ಕಾರ್ಡ್ಗಳಿದ್ದು, 1,50,130 ಕೂಲಿಕಾರರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 48,746 ಕುಟುಂಬಗಳು ಮಾತ್ರ ಸಕ್ರಿಯವಾಗಿವೆ. ಸಕ್ರಿಯ ಕುಟುಂಬಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವುದರ ಜೊತೆಗೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪ್ರತಿದಿನ ಕನಿಷ್ಠ 125 ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿಯನ್ನು ಜಾಬ್ ಕಾರ್ಡ್ ಮೇಳದ ಮೂಲಕ ಹೊಂದಲಾಗಿದೆ.
ಅಭಿಯಾನದ ಮೂಲಕ ವಿಬಿ–ಜಿ ರಾಮ್ ಜಿ ಯೋಜನೆಯಡಿ ಅಕುಶಲ ಉದ್ಯೋಗ ಹಾಗೂ ವೈಯಕ್ತಿಕ ಸವಲತ್ತುಗಳ ಕುರಿತು ಗ್ರಾಮೀಣ ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಾಸಿಕವಾಗಿ 3ರಿಂದ 4 ಸಾವಿರ ಮಾನವ ದಿನಗಳ ಉದ್ಯೋಗ ಒದಗಿಸುವ ಮೂಲಕ ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ಹಾಗೂ ಜೀವನೋಪಾಯದ ಭದ್ರತೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ಬರ ಪರಿಸ್ಥಿತಿ ಎದುರಿಸಲು ಜಲಸಂರಕ್ಷಣೆ, ಅಂತರ್ಜಲ ಮರುಪೂರಣ ಹಾಗೂ ದೀರ್ಘಕಾಲಿಕ ಜೀವನೋಪಾಯಕ್ಕೆ ನೆರವಾಗುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಸ್ಥಳೀಯವಾಗಿಯೇ ಉದ್ಯೋಗ ದೊರೆಯುವಂತೆ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅಭಿಯಾನದ ಅಂಗವಾಗಿ ಸಕ್ರಿಯ ಕುಟುಂಬಗಳ ಪಟ್ಟಿಯನ್ನು ಸಿದ್ಧಪಡಿಸಿ ಮನೆಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಡಂಗೂರ ಸಾರುವುದು, ಸ್ವಚ್ಛ ವಾಹಿನಿಗಳ ಮೂಲಕ ಜಿಂಗಲ್ಸ್ ಪ್ರಸಾರ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದೆ.
ಜಾಬ್ ಕಾರ್ಡ್ ಪಡೆಯಲು ಏನು ಮಾಡಬೇಕು?: ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್ ಪಡೆಯಲು ಬಯಸುವ ಕುಟುಂಬಗಳು ತಮ್ಮ ಗ್ರಾಮ ಪಂಚಾಯಿತಿಯಲ್ಲಿ ನಮೂನೆ–1 ಪಡೆದು ಭರ್ತಿ ಮಾಡಬೇಕು. ಇ-ಕೆವೈಸಿ ಪೂರ್ಣಗೊಳಿಸುವುದರೊಂದಿಗೆ ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್, ರೇಷನ್ ಕಾರ್ಡ್ನ ನಕಲು ಪ್ರತಿ ಹಾಗೂ ಎರಡು ಭಾವಚಿತ್ರಗಳನ್ನು ಸಲ್ಲಿಸಿ ಹೊಸ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ಪಡೆಯಬಹುದಾಗಿದೆ.
ಗ್ರಾಮೀಣ ಭಾಗದ ಅರ್ಹ ಕೂಲಿಕಾರರು ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದುಕೊಂಡು ಸ್ಥಳೀಯ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವಂತೆ ಕೊಪ್ಪಳ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತಿರಾದಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.





