Gangavathi: Allegations of misuse of temple renovation funds; memorandum submitted to the CM through the Tahsildar.
♣
ಗಂಗಾವತಿ: ದೇವಾಲಯಗಳ ಜೀರ್ಣೋದ್ಧಾರ ಅನುದಾನ ದುರ್ಬಳಕೆ ಆರೋಪ; ಸಿಎಂಗೆ ತಹಶೀಲ್ದಾರ್ ಮೂಲಕ ಮನವಿ



ಗಂಗಾವತಿ: ಕ್ಷೇತ್ರದಲ್ಲಿ ದೇವಾಲಯಗಳ ಜೀರ್ಣೋದ್ಧಾರದ ಹೆಸರಿನಲ್ಲಿ ಸರ್ಕಾರಿ ಅನುದಾನ ದೊಡ್ಡ ಮಟ್ಟದಲ್ಲಿ ದುರ್ಬಳಕೆಯಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಮಾನ್ಯ ಮುಖ್ಯಮಂತ್ರಿಗಳಿಗೆ ಗಂಗಾವತಿ ತಹಶೀಲ್ದಾರ್ ಮುಖಾಂತರ ಮನವಿ ಪತ್ರ ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ಯೋಜನೆಯಡಿ 2025-26ನೇ ಸಾಲಿನಲ್ಲಿ ಅನೇಕ ದೇವಾಲಯಗಳ ಅಭಿವೃದ್ಧಿಗೆ ಅನುದಾನ ನಿಗದಿಯಾಗಿತ್ತು. ಆದರೆ, ಯಾವುದೇ ನೈಜ ಕಾಮಗಾರಿಗಳನ್ನು ನಡೆಸದೆಯೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಣ ಎತ್ತುವಳಿ ಮಾಡಲಾಗಿದೆ ಎಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಗಂಭೀರ ಆರೋಪ ಮಾಡಿದ್ದಾರೆ.
ಅಧಿಕಾರಿಗಳು ಮತ್ತು ಶಾಸಕರ ಆಪ್ತರ ಶಾಮೀಲಾತಿ ಶಂಕೆ:
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಶಾಮೀಲಾತಿಯಿಂದಲೇ ಈ ಸಾರ್ವಜನಿಕ ಹಣದ ದುರ್ಬಳಕೆ ನಡೆದಿದೆ. ನಿಯಮಾವಳಿಗಳನ್ನು ಗಾಳಿಗೆ ತೂರಿ, ಬಹುತೇಕ ಅನುದಾನವನ್ನು ಸ್ಥಳೀಯ ಶಾಸಕರ ಆಪ್ತ ಸಹಾಯಕರು ಹಾಗೂ ಅವರ ಬೆಂಬಲಿಗರ ಅಣತಿಯಂತೆ ತಮಗಿಷ್ಟ ಬಂದವರಿಗೆ ನಿಗದಿಪಡಿಸಿ ಹಣ ಲೂಟಿ ಮಾಡಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಉಗ್ರ ಹೋರಾಟದ ಎಚ್ಚರಿಕೆ:
ಈ ಭ್ರಷ್ಟಾಚಾರ ಹಗರಣದ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಜಿಲ್ಲಾ ಪಂಚಾಯತ್ ಇಂಜಿನಿಯರ್ ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸಿದ್ದಲ್ಲಿ, ಮುಂಬರುವ ದಿನಗಳಲ್ಲಿ ಸಂಘಟನೆಯ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಮಿತಿಯ ಪದಾಧಿಕಾರಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.





