
Government-Industry Dialogue on October 8 to Connect Karnataka's Textile Industry to the Global Market
ಜಾಗತಿಕ ಮಾರುಕಟ್ಟೆಗೆ ಕರ್ನಾಟಕದ ಜವಳಿ ಉದ್ಯಮವನ್ನು ಸಂಪರ್ಕಿಸಲು ಅಕ್ಟೋಬರ್ 8ರಂದು ಸರ್ಕಾರ–ಉದ್ಯಮ ಸಂವಾದ
ಬೆಂಗಳೂರು, ಅಕ್ಟೋಬರ್ 6: ದೇಶದ ಜವಳಿ ರಫ್ತನ್ನು ಪ್ರಸ್ತುತ ಸುಮಾರು 40 ಬಿಲಿಯನ್ ಅಮೆರಿಕನ್ ಡಾಲರ್ನಿಂದ 2030ರ ವೇಳೆಗೆ 100 ಬಿಲಿಯನ್ ಡಾಲರ್ಗೆ ಹೆಚ್ಚಿಸುವ ರಾಷ್ಟ್ರೀಯ ಗುರಿಗೆ ಪೂರಕವಾಗಿ, ಕರ್ನಾಟಕದ ಜವಳಿ ಉದ್ಯಮದ ರಫ್ತು ಸಾಮರ್ಥ್ಯವನ್ನು ವಿಸ್ತರಿಸುವ ಕುರಿತು ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ವಿಶೇಷ ಇಲಾಖಾ ಮಟ್ಟದ ಸಮಾವೇಶ ನಡೆಯಲಿದೆ.
“Textiles for Global Market Strategy – Achieving USD 100 Billion Exports” ವಿಷಯದಡಿ ನಡೆಯುವ ಒಂದು ದಿನದ ಕಾರ್ಯಕ್ರಮದಲ್ಲಿ ಜಾಗತಿಕ ಮಾರುಕಟ್ಟೆಯ ಅವಕಾಶಗಳು, ರಫ್ತು ಹೆಚ್ಚಳ, ಉತ್ಪನ್ನಗಳ ಗುಣಮಟ್ಟ, ಮಾರುಕಟ್ಟೆ ಸಂಪರ್ಕ ಹಾಗೂ ಉದ್ಯಮಗಳ ಸ್ಪರ್ಧಾತ್ಮಕತೆ ಕುರಿತು ಚರ್ಚಿಸಲಾಗುತ್ತದೆ.
ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 8ರಂದು ಬೆಳಿಗ್ಗೆ 11 ಗಂಟೆಗೆ KASSIA, ಮಾಗಡಿ ಕಾರ್ಡ್ ರಸ್ತೆ, ವಿಜಯನಗರ, ಬೆಂಗಳೂರು ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (KASSIA) ಸಹಯೋಗದಲ್ಲಿ ನಡೆಯುವ ಈ ಶೃಂಗಸಭೆಯಲ್ಲಿ ಜವಳಿ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ರಫ್ತುದಾರರು ಹಾಗೂ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಜವಳಿ ರಫ್ತು ಗುರಿಯ ಭಾಗವಾಗಿ ಬೆಂಗಳೂರು ನಗರ ಜಿಲ್ಲೆಯನ್ನು ‘ಚಾಂಪಿಯನ್ ಡಿಸ್ಟ್ರಿಕ್ಟ್’ ಆಗಿ ಗುರುತಿಸಲಾಗಿದ್ದು, ಜಿಲ್ಲೆಯ ಜವಳಿ ಮತ್ತು ಸಂಬಂಧಿತ ಕೈಗಾರಿಕೆಗಳ ರಫ್ತು ಸಾಮರ್ಥ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವತ್ತ ಕಾರ್ಯಕ್ರಮ ಗಮನ ಹರಿಸಲಿದೆ.
ಸ್ಥಳೀಯ ಉತ್ಪಾದಕರನ್ನು ಜಾಗತಿಕ ಮಾರುಕಟ್ಟೆಯೊಂದಿಗೆ ಸಂಪರ್ಕಿಸುವುದು, ಹೊಸ ರಫ್ತು ಅವಕಾಶಗಳನ್ನು ಗುರುತಿಸುವುದು, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮತ್ತು ಗುಣಮಟ್ಟವನ್ನು ಉತ್ತಮಪಡಿಸುವುದು ಹಾಗೂ ರಫ್ತು ಬಯಸುವ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ ಒದಗಿಸುವುದು ಶೃಂಗಸಭೆಯ ಪ್ರಮುಖ ಉದ್ದೇಶವಾಗಿದೆ.




