ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳವನ್ನು ಆಂದೋಲನವಾಗಿ ಪರಿಗಣಿಸಿ: ಸಚಿವ ಮಧು ಬಂಗಾರಪ್ಪ ಕಟ್ಟುನಿಟ್ಟಿನ ಸೂಚನೆ

H.Mallikarjun
H.Mallikarjun - Kalyanasiri
4 Min Read
ಜಾಹೀರಾತು

Treat the increase in enrollment in government schools as a campaign: Minister Madhu Bangarappa’s strict directive

ಕೊಪ್ಪಳ ಜಿಲ್ಲಾ ಮಟ್ಟದ ಶಾಲಾ ಶಿಕ್ಷಣ ಇಲಾಖೆಯ 2026–27ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆ

ಜಾಹೀರಾತು



ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳವನ್ನು ಆಂದೋಲನವಾಗಿ ಪರಿಗಣಿಸಿ: ಸಚಿವ ಮಧು ಬಂಗಾರಪ್ಪ ಕಟ್ಟುನಿಟ್ಟಿನ ಸೂಚನೆ

ಕೊಪ್ಪಳ, ನವೆಂಬರ್ 20 : ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ದಾಖಲಾತಿ ಹೆಚ್ಚಳವನ್ನು ಅಧಿಕಾರಿಗಳು ಒಂದು ಆಂದೋಲನದಂತೆ ಪರಿಗಣಿಸಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಜೆ.ಹೆಚ್ ಪಟೇಲ ಸಭಾಂಗಣದಲ್ಲಿ ನವೆಂಬರ್ 20 ರಂದು ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲಾ ಮಟ್ಟದ ಶಾಲಾ ಶಿಕ್ಷಣ ಇಲಾಖೆಯ 2026–27ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದನೇ ತರಗತಿ ದಾಖಲಾತಿ ವಯೋಮಿತಿ ನಿಯಮದ ಬದಲಾವಣೆಯಿಂದಾಗಿ ಕಳೆದ ಸಾಲಿಗಿಂತ ಈ ಬಾರಿ ಸುಮಾರು 6,000 ಮಕ್ಕಳ ದಾಖಲಾತಿ ಕಡಿಮೆಯಾಗಿರುವ ಕುರಿತು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಸರ್ಕಾರದಿಂದ ಉಚಿತ ವಿದ್ಯುತ್, ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್, ಅತಿಥಿ ಶಿಕ್ಷಕರು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೂ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬಾರದಿದ್ದರೆ ನಮ್ಮ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ‌. ಹಾಗಾಗಿ ಜಿಲ್ಲೆಯಲ್ಲಿ ಆರಂಭಿಸಲಾಗಿರುವ 203 ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಹೆಚ್ಚಿನ ಮಕ್ಕಳನ್ನು ದಾಖಲಿಸಿಕೊಳ್ಳುವ ಮೂಲಕ ಒಂದನೇ ತರಗತಿಯ ದಾಖಲಾತಿ ತಾನಾಗಿಯೇ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
*ಪರೀಕ್ಷೆಗೆ ಗೈರಾಗುವ ಮಕ್ಕಳ ಮನೆಗೆ ಭೇಟಿ ನೀಡಿ:* ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದರೂ ಸುಮಾರು 1,631 ಮಕ್ಕಳು ಪರೀಕ್ಷೆಗೆ ಗೈರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಪರೀಕ್ಷಾ ಸಮಯದಲ್ಲಿ ಶಿಕ್ಷಕರು ಮತ್ತು ಅಧಿಕಾರಿಗಳು ಗೈರಾಗುವ ಮಕ್ಕಳ ಮನೆಗೆ ಖುದ್ದು ಭೇಟಿ ನೀಡಿ, ಪೋಷಕರ ಮನವೊಲಿಸಿ, ಆ ಮಕ್ಕಳಿಗೆ ಪರೀಕ್ಷೆ ಬರೆಯುವಂತೆ ಪ್ರೇರೇಪಿಸಬೇಕು. ಇದರ ಜೊತೆಗೆ ದ್ವಿತೀಯ ಪಿಯುಸಿಯಲ್ಲಿ ‘ಮಿಷನ್ 60’ ಗುರಿ ತಲುಪಲು ವಿಶೇಷ ತರಗತಿಗಳನ್ನು ನಡೆಸಬೇಕು ಹಾಗೂ ಮೌಲ್ಯ ಶಿಕ್ಷಣಕ್ಕೆ (ಮಾರಲ್ ಸೈನ್ಸ್) ಹೆಚ್ಚಿನ ಒತ್ತು ನೀಡಬೇಕು. ಮಕ್ಕಳ ಪಾಲಕರ ಮತ್ತು ಶಿಕ್ಷಕರ ಸಭೆಗಳನ್ನು ಸಹ ನಿಯಮಿತವಾಗಿ ಹಮ್ಮಿಕೊಳ್ಳಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
*ಮುಂದಿನ ಜೂನ್‌ನಿಂದ ಕೆಪಿಎಸ್ ಶಾಲಾ ಮಕ್ಕಳಿಗೆ ಪ್ರತ್ಯೇಕ ಉಚಿತ ಬಸ್:* ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (ಕೆಪಿಎಸ್) ಒಂದೇ ಸೂರಿನಡಿ 14 ವರ್ಷಗಳ ಸಮಗ್ರ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಬಸ್‌ಗಳಲ್ಲಿ ಮಕ್ಕಳಿಗೆ ಆಗುತ್ತಿರುವ ಸಮಯದ ವ್ಯತ್ಯಯ ತಪ್ಪಿಸಲು ಮುಂದಿನ ಜೂನ್ ತಿಂಗಳಿನಿಂದ ಕೆಪಿಎಸ್ ಶಾಲಾ ಮಕ್ಕಳಿಗಾಗಿಯೇ ಸರ್ಕಾರದಿಂದ ಪ್ರತ್ಯೇಕ ಉಚಿತ ಬಸ್ ಸೌಲಭ್ಯ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಅಲ್ಲದೆ, ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 12ನೇ ತರಗತಿಯವರೆಗಿನ ಎಲ್ಲಾ ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಿಸಲಾಗುವುದು. ಪಠ್ಯಪುಸ್ತಕಗಳ ಭಾಗ-1 ಮತ್ತು ಭಾಗ-2ನ್ನು ಒಟ್ಟಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಶೇಖರಪ್ಪ ಹೊರಪೇಟಿ ಅವರು ಮಾತನಾಡಿ, ಜಿಲ್ಲೆಯಲ್ಲಿ 1,143 ಸರ್ಕಾರಿ, 65 ಅನುದಾನಿತ, 452 ಅನುದಾನರಹಿತ ಸೇರಿ‌ ಒಟ್ಟು 1,660 ಶಾಲೆಗಳಿದ್ದು, ಸರ್ಕಾರಿ ಶಾಲೆಗಳಲ್ಲಿ 1,67,628 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 21,433 ವಿದ್ಯಾರ್ಥಿಗಳು ಹಾಜರಾಗಿದ್ದು, ಪೂರಕ ಪರೀಕ್ಷೆ ಸೇರಿ ಒಟ್ಟು 21,045 ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ. 98.19ರಷ್ಟು ಫಲಿತಾಂಶ ದಾಖಲಾಗಿದೆ. ಜಿಲ್ಲೆಯ 49 ಕೆಪಿಎಸ್ ಶಾಲೆಗಳ ಪೈಕಿ 26 ಶಾಲೆಗಳಿಗೆ ಕೆಕೆಆರ್‌ಡಿಬಿ ಹಾಗೂ 14 ಶಾಲೆಗಳಿಗೆ ಎಡಿಬಿ ಅನುದಾನ ಮಂಜೂರಾಗಿದೆ. ವಿವಿಧ ಯೋಜನೆಗಳಡಿ 138 ಶೌಚಾಲಯಗಳು ಹಾಗೂ 58 ಹೊಸ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶಾಲೆಯಿಂದ ಹೊರಗುಳಿದ 1118 ಮಕ್ಕಳಲ್ಲಿ 408 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ ಎಂದು ವಿವರಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಾಜಶೇಖರ ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ 53 ಸರ್ಕಾರಿ ಸೇರಿದಂತೆ ಒಟ್ಟು 123 ಪಿಯು ಕಾಲೇಜುಗಳಿವೆ. ಕಳೆದ ಸಾಲಿಗಿಂತ ಈ ಬಾರಿ 5,048 ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಾಗಿದ್ದು, ಒಟ್ಟು 34,846 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಪೈಕಿ ವಿಜ್ಞಾನ ವಿಭಾಗದ ದಾಖಲಾತಿಯಲ್ಲಿ ಶೇ. 20ರಷ್ಟು ವೃದ್ಧಿಯಾಗಿದೆ. ಕಳೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 86.80ರಷ್ಟು ಫಲಿತಾಂಶದೊಂದಿಗೆ ಕಲ್ಯಾಣ ಕರ್ನಾಟಕ ವಿಭಾಗದಲ್ಲೇ ಕೊಪ್ಪಳ ಪ್ರಥಮ ಸ್ಥಾನ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ಶೇ. 40ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ಆಯ್ದ 7 ಕಾಲೇಜುಗಳಲ್ಲಿ ಸಿಇಟಿ ಮತ್ತು ನೀಟ್ ತರಬೇತಿ ನೀಡಲಾಗುತ್ತಿದೆ. ಖಾಲಿ ಹುದ್ದೆಗಳಿಗೆ 252 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಪ್ರಾಚಾರ್ಯರರಾದ ಎಲ್.ಡಿ ಜೋಶಿ ಅವರು ಮಾತನಾಡಿ, ಯೂಟ್ಯೂಬ್ ಲೈವ್ ಮೂಲಕ ಶಿಕ್ಷಕರಿಗೆ ಪಾಠ ಆಧಾರಿತ ಮೌಲ್ಯಮಾಪನ ತರಬೇತಿ ನೀಡಲಾಗಿದ್ದು, ಜಿಲ್ಲೆಯ ಶೇ. 95ರಷ್ಟು ಸರ್ಕಾರಿ ಶಾಲೆಗಳು ಇದನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿವೆ. ದ್ವಿಭಾಷಾ ತರಗತಿಗಳ ವೀಕ್ಷಣೆ ನಡೆಸಲಾಗುತ್ತಿದ್ದು, ಶಿಕ್ಷಕರು ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 10 ಶೈಕ್ಷಣಿಕ ಸಂಶೋಧನೆಗಳನ್ನು ಕೈಗೊಳ್ಳಲಾಗಿದ್ದು, ಫೆಬ್ರವರಿ ಅಂತ್ಯಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಜಿಲ್ಲಾ ಡಯಟ್ ಕಾಲೇಜಿನಲ್ಲಿ ಕಲಬುರಗಿ ವಿಭಾಗದಲ್ಲೇ ಅತಿ ಹೆಚ್ಚು (89) ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಳೆದ ಐದು ವರ್ಷಗಳಿಂದ ಶೇ. 100ರಷ್ಟು ಫಲಿತಾಂಶ ದಾಖಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಟಿ.ಕೃಷ್ಣಮೂರ್ತಿ ಸೇರಿದಂತೆ ಬಿಇಒಗಳು, ಪ್ರಾಚಾರ್ಯರು ಹಾಗೂ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Total Views: 0
Share This Article
Leave a Comment