
Best Indira Canteen Award: Karatagi Town Municipal Council secures second place in the Kalaburagi division.

ಅತ್ಯುತ್ತಮ ಇಂದಿರಾ ಕ್ಯಾಂಟೀನ್ ಪ್ರಶಸ್ತಿ: ಕಲಬುರಗಿ ವಿಭಾಗದಲ್ಲಿ ಕಾರಟಗಿ ಪುರಸಭೆಗೆ ದ್ವಿತೀಯ ಸ್ಥಾನ
ಕೊಪ್ಪಳ, ನವೆಂಬರ್ 20, : ನಗರಾಭಿವೃದ್ಧಿ ಇಲಾಖೆಯ ರಾಜ್ಯ ಮಟ್ಟದ ಸಮಿತಿಯು ಕೊಪ್ಪಳ ಜಿಲ್ಲೆಯ ಕಾರಟಗಿ ಪುರಸಭೆಯ ಇಂದಿರಾ ಕ್ಯಾಂಟೀನ್ ಅನ್ನು ಕಲಬುರಗಿ ವಿಭಾಗದ ವ್ಯಾಪ್ತಿಯಲ್ಲಿ ದ್ವಿತೀಯ ಸ್ಥಾನಕ್ಕೆ ಆಯ್ಕೆ ಮಾಡಿ, ಅತ್ಯುತ್ತಮ ಇಂದಿರಾ ಕ್ಯಾಂಟೀನ್ ಪ್ರಶಸ್ತಿಯನ್ನು ಘೋಷಿಸಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ಗಳನ್ನು ಗುರುತಿಸಿ, ಸ್ವಚ್ಛತೆ, ನೈರ್ಮಲ್ಯ, ಆಹಾರ ಗುಣಮಟ್ಟ ಹಾಗೂ ಸಮರ್ಪಕ ನಿರ್ವಹಣೆ ಕುರಿತು ತಂಡಗಳನ್ನು ರಚಿಸಿ, ಉತ್ತಮ ಸೇವೆ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಗಳಿಗೆ ಅತ್ಯುತ್ತಮ ಇಂದಿರಾ ಕ್ಯಾಂಟೀನ್ ಪ್ರಶಸ್ತಿಯನ್ನು ನೀಡಲು ಸರ್ಕಾರವು ಉದ್ದೇಶಿಸಿದಂತೆ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು.
ಕೊಪ್ಪಳ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 8-ಇಂದಿರಾ ಕ್ಯಾಂಟೀನ್ ಗಳನ್ನು ಪರಿಶೀಲಿಸಲಾಗಿ, ಪುರಸಭೆ ಕಾರಟಗಿ, ನಗರಸಭೆ ಕೊಪ್ಪಳ ಹಾಗೂ ಪಟ್ಟಣ ಪಂಚಾಯಿತಿ ಕುಕನೂರು ಇಂದಿರಾ ಕ್ಯಾಂಟೀನ್ ಗಳನ್ನು ರಾಜ್ಯ ಮಟ್ಟಕ್ಕೆ ನಾಮನಿರ್ದೇಶನ ಮಾಡಲಾಗಿತ್ತು.
ಮಾಜಿ ಪ್ರಧಾನಿಗಳಾದ ದಿವಂಗತ ಇಂದಿರಾ ಗಾಂಧಿಯವರ ಜನ್ಮ ದಿನೋತ್ಸವದಂದು ಮಾನ್ಯ ಸರ್ಕಾರದ ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರು ಹಾಗೂ ಪೌರಾಡಳಿತ ಸಚಿವರು ನವೆಂಬರ್ 19 ರಂದು ಕಾರಟಗಿ ಪುರಸಭೆಯ ಇಂದಿರಾ ಕ್ಯಾಂಟೀನ್ ಗೆ ಅತ್ಯುತ್ತಮ ಇಂದಿರಾ ಕ್ಯಾಂಟೀನ್ ಎಂದು ಪ್ರಶಸ್ತಿಯನ್ನು ವಿತರಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಕಾರಟಗಿ ಪುರಸಭೆಯ ಅಧ್ಯಕ್ಷರಾದ ಮಂಜುನಾಥ ಮೇಗೂರು, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಕಾರ್, ಕಾರಟಗಿ ಪುರಸಭೆಯ ಸದಸ್ಯರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರಟಗಿ ಪುರಸಭೆಗೆ ಅತ್ಯುತ್ತಮ ಇಂದಿರಾ ಕ್ಯಾಂಟೀನ್ ಪ್ರಶಸ್ತಿ ಲಭ್ಯವಾಗಿರುವ ಪ್ರಯುಕ್ತ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಶಸ್ತಿಗೆ ಪಾತ್ರವಾಗಿರುವವರನ್ನು ಅಭಿನಂದಿಸಿದ್ದಾರೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.


