ಎಪಿಎಸ್ ಶಿಕ್ಷಣ ಸಂಸ್ಘೆಗಳ ಸಂಸ್ಥಾಪಕ ಪ್ರೊ. ಎನ್. ಅನಂತಾಚಾರ್ ಅವರ 50ನೇ ಪುಣ್ಯಸ್ಮರಣೆ: ಅಂಚೆ ಚೀಟಿ ಬಿಡುಗಡೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Founder of APS Education Association Prof. N. Anantachar's 50th Commemoration: Postage stamp release




ಎಪಿಎಸ್ ಶಿಕ್ಷಣ ಸಂಸ್ಘೆಗಳ ಸಂಸ್ಥಾಪಕ ಪ್ರೊ. ಎನ್. ಅನಂತಾಚಾರ್ ಅವರ 50ನೇ ಪುಣ್ಯಸ್ಮರಣೆ: ಅಂಚೆ ಚೀಟಿ ಬಿಡುಗಡೆ

ಜಾಹೀರಾತು


ಬೆಂಗಳೂರು,ಏ.18: ಆಚಾರ್ಯ ಪಾಠಶಾಲಾ ಎಜುಕೇಷನಲ್ ಟ್ರಸ್ಟ್ ತನ್ನ ಸಂಸ್ಥಾಪಕರಾದ ದಿವಂಗತ ಪ್ರೊ. ಎನ್. ಅನಂತಾಚಾರ್ ಅವರ 50ನೇ ಪುಣ್ಯಸ್ಮರಣೆಯನ್ನು ಏಪ್ರಿಲ್ 21 ರಂದು ಆಚರಿಸುತ್ತಿದ್ದು, ಅಂದು ಅವರ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆ ಬಿಡುಗಡೆಯಾಗಲಿದೆ.
ಎನ್.ಆರ್. ಕಾಲೋನಿಯ ಅನಂತಾಚಾರ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ದಾರ್ಶನಿಕ ಶಿಕ್ಷಣತಜ್ಞ ಪ್ರೊ. ಅನಂತಾಚಾರ್ ಅವರ ಪರಂಪರೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಅವರ ಜೀವನ, ಆದರ್ಶಗಳು ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಅವರ ಸ್ಮರಣಾರ್ಥ “ವಾಕ್ ಎವೇ” ಎಂಬ ಪುಸ್ತಕವನ್ನು ಸಂಸದ ತೇಜಸ್ವಿಸೂರ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿಎ ಡಾ. ವಿಷ್ಣು ಭರತ್ ಅಲಂಪಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಎಪಿಎಸ್ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್, ಅಂಚೆ ಸೇವೆಗಳ ನಿರ್ದೇಶಕರಾದ ವಿ. ತಾರಾ ಮತ್ತು ಅಂಚೆ ಅಧೀಕ್ಷರಾದ ಗಜೇಂದ್ರ ಕುಮಾರ್ ಮೀನಾ ಮತ್ತಿತರರು ಭಾಗವಹಿಸಲಿದ್ದಾರೆ.
ಅನಂತಾಚಾರ್ ಅವರು ನರಸಿಂಹಮೂರ್ತಿ ಚಾರ್ ಮತ್ತು ತುಳಸಮ್ಮ ದಂಪತಿಯ ಆರು ಮಕ್ಕಳಲ್ಲಿ ಹಿರಿಯ ಮಗನಾಗಿ ಜನಿಸಿದರು. ಪದವಿ ಶಿಕ್ಷಣವೇ ಅಪರೂಪವಾಗಿದ್ದ ಆ ಕಾಲದಲ್ಲಿ, ಇವರ ಕುಟುಂಬದ ಎಲ್ಲ ಗಂಡು ಮಕ್ಕಳು ಪದವೀಧರರಾಗಿದ್ದು ಅವರ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ. ಅನಂತಾಚಾರ್ ಅವರು ಮೈಸೂರಿನಲ್ಲಿ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
1933ರಲ್ಲಿ ಉದ್ಯೋಗ ಹುಡುಕುತ್ತಾ ಬೆಂಗಳೂರಿಗೆ ಬಂದ ಅವರಿಗೆ ಅವಕಾಶಗಳು ಸುಲಭವಾಗಿ ಸಿಗಲಿಲ್ಲ. ಆದರೆ ಅವರು ಎದೆಗುಂದದೆ, ತಮಗಾಗಿ ಮತ್ತು ಇತರರಿಗಾಗಿ ತಾವೇ ಅವಕಾಶಗಳನ್ನು ಸೃಷ್ಟಿಸಲು ನಿರ್ಧರಿಸಿದರು. ಕೇವಲ ಮೂವರು ವಿದ್ಯಾರ್ಥಿಗಳೊಂದಿಗೆ ಆರಂಭವಾದ ಇವರ ಶಿಕ್ಷಣದ ಹಣತೆ ಇಂದು ಸಾವಿರಾರು ಜನರ ಬಾಳಿನಲ್ಲಿ ಬೆಳಕು ನೀಡುತ್ತಿದೆ.
ಸರ್ಕಾರ ನೀಡಿದ ಐದು ಎಕರೆ ಕಲ್ಲುಬಂಡೆಗಳಿಂದ ಕೂಡಿದ ಜಮೀನನ್ನು ಅನಂತಾಚಾರ್ ಅವರು ಸ್ವತಃ ತಮ್ಮ ಕೈಗಳಿಂದಲೇ ಕಲ್ಲುಗಳನ್ನು ಕೆತ್ತಿ, ಕಟ್ಟಡ ನಿರ್ಮಿಸಿ ಸಂಸ್ಥೆಯ ಬುನಾದಿ ಹಾಕಿದರು. ಗ್ರಾಮೀಣ ಭಾಗದ ಜನರಿಗೂ ಶಿಕ್ಷಣ ತಲುಪಿಸಬೇಕೆಂಬ ಉದ್ದೇಶದಿಂದ ಕನಕಪುರ ರಸ್ತೆಯ ಸೋಮನಹಳ್ಳಿಯಲ್ಲಿ 104 ಎಕರೆ ಪ್ರದೇಶದಲ್ಲಿ ಬೃಹತ್ ಶೈಕ್ಷಣಿಕ ಸಂಕೀರ್ಣವನ್ನು ನಿರ್ಮಿಸಿದರು.
ಅನಂತಾಚಾರ್ ಅವರು ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಒಳಗೊಳ್ಳುವ ಸಮಾನತೆಯ ತತ್ವವನ್ನು ಸಂಸ್ಥೆಯಲ್ಲಿ ಅಳವಡಿಸಿದರು. ಇಂದು ಅವರ ಪುತ್ರರಾದ ದಿವಂಗತ ಎ.ಜಿ. ಆಚಾರ್ಯ, ಎ.ಪಿ. ಆಚಾರ್ಯ, ಎ.ಆರ್. ಆಚಾರ್ಯ, ಎ. ಮುರಳೀಧರ ಮತ್ತು ಎ. ರಾಮ್ಪ್ರಸಾದ್ ಅವರು ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಮೂವರು ವಿದ್ಯಾರ್ಥಿಗಳಿಂದ ಆರಂಭವಾದ ಈ ಪಯಣ ಇಂದು ಬೃಹತ್ ಶಿಕ್ಷಣ ಸಮೂಹವಾಗಿ ಬೆಳೆದು ನಿಂತಿದೆ. ಇದು ಕೇವಲ ಕಲ್ಲಿನಿಂದ ಕಟ್ಟಿದ ಕಟ್ಟಡವಲ್ಲ, ಬದಲಾಗಿ ಸಾವಿರಾರು ಜನರ ಭವಿಷ್ಯವನ್ನು ರೂಪಿಸುತ್ತಿರುವ ಪವಿತ್ರ ದೇಗುಲವಾಗಿದೆ.

Total Views: 0
Share This Article