A protest and submission of a memorandum by the Kayakajeevi Construction Workers' Union, opposing corruption within the Construction Workers' Welfare Board and demanding the implementation of worker-friendly schemes.
ಕಾಯಕಜೀವಿ ಕಟ್ಟಡ ಕಾರ್ಮಿಕ ಸಂಘದಿಂದ
ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿನ ಭ್ರಷ್ಟಾಚಾರ ವಿರೋಧಿಸಿ ಮತ್ತು ಕಾರ್ಮಿಕರ ಪರ ಯೋಜನೆಗಳ ಜಾರಿಗಾಗಿ ಆಗ್ರಹಿಸಿ ಪ್ರತಿಭಟಿಸಿ ಮನವಿ.

ಗಂಗಾವತಿ: ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ರಚನೆಯಾಗಿ, ಕಾರ್ಮಿಕರ ಭದ್ರತೆಗಾಗಿ ಮತ್ತು ಕಲ್ಯಾಣಕ್ಕಾಗಿ 19 ಸೌಲಭ್ಯಗಳನ್ನು ಘೋಷಿಸಿದೆ. ಅದರಲ್ಲಿ 11 ಮಾತ್ರವೇ ಜಾರಿಯಲ್ಲಿವೆ. 1996ರ ಕಾಯ್ದೆಯನ್ವಯ ಎಲ್ಲಾ ಉದ್ದೇಶವು ಇನ್ನೂ ಕೂಡ ಇಡೇರಿಲ್ಲ ಎಂಬುದು ವಾಸ್ತವ ಸಂಗತಿಯಾಗಿದ್ದು, ಮಂಡಳಿಯ ಹಣವನ್ನು ಇತರೆ ಯೋಜನೆಗಳಿಗೆ ವ್ಯಯ ಮಾಡಿ ಕಾರ್ಮಿಕರಿಗೆ ಅನ್ಯಾಯವೆಸಗಲಾಗುತ್ತಿದೆ, ಇದರೊಟ್ಟಿಗೆ ಮಂಡಳಿಯಲ್ಲಿನ ಅಧಿಕಾರಿಗಳ ಭ್ರಷ್ಟಾಚಾರ ಕೂಡಾ ಮಿತಿಮೀರಿದೆ ಎಂದು ಕಾಯಕಜೀವಿ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಚನ್ನಮ್ಮ ಜಾಲಗಾರ ಅವರು ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವರು ಜೂನ್-15 ಬುಧವಾರ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿನ ಭ್ರಷ್ಟಾಚಾರ ವಿರೋಧಿಸಿ ಮತ್ತು ಕಾರ್ಮಿಕರ ಪರ ಯೋಜನೆಗಳ ಜಾರಿಗಾಗಿ ಆಗ್ರಹಿಸಿ, ಗಂಗಾವತಿ ಕಾರ್ಮಿಕ ನಿರೀಕ್ಷಕರಾದ ಅಶೋಕ ರವರ ಮುಖಾಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಕಾರ್ಯದರ್ಶಿಗಳು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರುರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಕಳೆದ ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಂ ಹೆಬ್ಬಾರ್ ಅವರು ಟಿವಿಗಳು, ಕಂಪ್ಯೂಟರ್‌ಗಳು ಇನ್ನೋವಾ ಕಾರುಗಳು, ಐಷಾರಾಮಿ ಕಛೇರಿಯ ಒಳವಿನ್ಯಾಸ, ಜಾಹೀರಾತು, ಕ್ಯಾಲೆಂಡರ್ ಇತ್ಯಾದಿಗಳ ಹೆಸರಿನಲ್ಲಿ ಕೋಟ್ಯಾಂತರ ಹಣ ವ್ಯಯ ಮಾಡಿದರು. ಮುಂದುವರೆದು ಕಾರ್ಮಿಕರ ಹೆಸರಿನಲ್ಲಿ ಟೂಲ್ ಕಿಟ್, ರೇಷನ್ ಕಿಟ್, ಬೂಸ್ಟರ್ ಕಿಟ್, ಸ್ಕೂಲ್ ಕಿಟ್, ಲ್ಯಾಪ್‌ಟಾಪ್, ವೈದ್ಯಕೀಯ ತಪಾಸಣೆ, ಆಂಬ್ಯುಲೆನ್ಸ್ ಇನ್ನಿತ್ಯಾದಿಗಳ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಮಾಡಿ ಮಂಡಳಿಯ ಹಣವನ್ನು ಪೋಲು ಮಾಡುವಲ್ಲಿ ಮಂತ್ರಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ. ಮುಂದುವರೆದು ಈಗಿನ ಸರ್ಕಾರದಲ್ಲಿ ಮಕ್ಕಳ ಸ್ಕಾಲರ್‌ಶಿಪ್ ಬರುತ್ತಿಲ್ಲ, ಎಲ್ಲಾ ಸೌಲಭ್ಯಗಳನ್ನು ನಿಲ್ಲಿಸಿ ಕಾರ್ಮಿಕರ ನೋಂದಣಿಗೂ ಹತ್ತಾರು ಅಡ್ಡಿವೊಡ್ಡಿದ್ದು, ಕಾರ್ಮಿಕರ ಹೆಸರಿನಲ್ಲಿ ಮತ್ತೆ ಲ್ಯಾಪ್ ಟಾಪ್ ಖರೀದಿ, ಖಾಸಗಿ ಆಸ್ಪತ್ರೆಗಳಿಂದ ವೈದ್ಯಕೀಯ ತಪಾಸಣೆ, ಪೌಷ್ಟಿಕಾಂಶ ಕಿಟ್ ಖರೀದಿಯಲ್ಲಿ ನೂರಾರು ಕೋಟಿ ರೂಪಾಯಿ ಖರ್ಚಾಗಿ ಹೋಗಿದೆ. ಇದರಲ್ಲಿ ಕಾರ್ಮಿಕರಿಗೆ ದಕ್ಕಿದ್ದು ತಿಂದುಳಿದ ಎಲುಬು ಮಾತ್ರ. ಕಾರ್ಮಿಕರಿಗೆ ಇ.ಎಸ್.ಐ ಜಾರಿಮಾಡುವ ಬದಲಾಗಿ 200 ಆಂಬ್ಯುಲೆನ್ಸ್ ಖರೀದಿ ಮಾಡಿ ಕಟ್ಟಡ ಕಾರ್ಮಿಕರ ಬೆವರಿನ ಹಣಕ್ಕೆ ಮತ್ತೇ ಕನ್ನ ಹಾಕಲಾಗಿದೆ. ಕಟ್ಟಡ ಕಾರ್ಮಿಕರಿಗೆ ಶೈಕ್ಷಣಿಕ ಸವಲತ್ತು ಮಾಡಿದರೆ ಕಲ್ಯಾಣ ಮಂಡಳಿಯ ಹಣವು ಉಳಿಯಲಿದೆ, ಇ.ಎಸ್.ಐ ಆಸ್ಪತ್ರೆಗಳಿಂದ ಕಾರ್ಮಿಕರ ಇಡೀ ಕುಟುಂಬಕ್ಕೆ ಆರೋಗ್ಯದ ಸುರಕ್ಷೆ ಸಿಗಲಿದೆ, ಮೊಬೈಲ್ ಕ್ಲಿನಿಕ್ ನಿಂದ ಯಾವ ಕಟ್ಟಡ ಕಾರ್ಮಿಕರ ಆರೋಗ್ಯವು ಸುಧಾರಿಸುವುದಕ್ಕಿಂತ ಹೆಚ್ಚಾಗಿ ಮಂಡಳಿಯ ಹಣ ಪೋಲಾಗಿದ್ದೇ ಹೆಚ್ಚು..
ಮೇಷನ್ ಟೂಲ್ ಕಿಟ್ ಹಗರಣ: ಕಳೆದ 2024ರಲ್ಲಿ ರಾಜ್ಯದ ಕಟ್ಟಡ ಕಾರ್ಮಿಕರಿಗೆ ನೀಡಲು ಖರೀದಿಸಿದ 67,380 ಮೇಸನ್ ಕಿಟ್ ಖರೀದಿಯಲ್ಲಿ 1,379 ರೂ ಬೆಲೆಯ ಕಿಟ್ ಗೆ 3,300 ರೂ.ಗಳನ್ನು ಪಾವತಿಸಿ 12,91,99,840/-ರೂಪಾಯಿಗಳನ್ನು ನುಂಗಿ ನೀರು ಕುಡಿದಿರುವುದು ಕಣ್ಣಮುಂದೆಯೇ ಇದೆ. ಈ ಹಗರಣದಲ್ಲಿ ಶಾಮೀಲಾದ ಡಿ. ಭಾರತಿ ಮತ್ತು ಸಂಗಪ್ಪ ಉಪಾಧ್ಯ ಅವರ ಮೇಲೆ ಆರೋಪವಿದ್ದರೂ ಕೂಡ ಇದುವರೆಗೂ ಕೂಡ ಮಂಡಳಿಯಿಂದ ಯಾವುದೇ ಕ್ರಮಕೈಗೊಳ್ಳದಿರುವುದು ಅನುಮಾನಾಸ್ಪದವಾಗಿದೆ.
ಈ ಎಲ್ಲಾ ಸಮಸ್ಯೆಗಳ ಜೊತೆಗೆ ಇನ್ನೂ ಹತ್ತಾರು ಸಮಸ್ಯೆಗಳು ಭ್ರಷ್ಟಾಚಾರಗಳು ತುಂಬಿತುಳುಕುತ್ತಿವೆ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕಲ್ಯಾಣ ಯೋಜನೆಗಳನ್ನು ಇನ್ನೂ ಸಕ್ರಿಯವಾಗಿ ಅನುಷ್ಠಾನಗೊಳಿಸಬೇಕಾಗಿದೆ. ಅದಕ್ಕಾಗಿ ಎಲ್ಲಾ ರಾಜ್ಯ ಮಟ್ಟದ ಕಟ್ಟಡ ಕಾರ್ಮಿಕ ಸಂಘಟನೆಗಳು ಮತ್ತು ಮಂಡಳಿಯ ಅಧಿಕಾರಿಗಳ ಜೊತೆಗೆ ವರ್ಷಕ್ಕೆ ಒಂದು ಬಾರಿ ಮತ್ತು ಜಿಲ್ಲಾ ಮಟ್ಟದಲ್ಲಿ 4 ತಿಂಗಳಿಗೊಮ್ಮೆ ಕಾರ್ಮಿಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಗತ್ಯ ಚರ್ಚೆಗಳನ್ನು ನಡೆಸಿ ಮಂಡಳಿಯ ಯೋಜನೆಗಳು ತಳಮಟ್ಟದಲ್ಲಿರುವ ಕಟ್ಟಡ ಕಾರ್ಮಿಕರವರೆಗೂ ತಲುಪುವಂತೆ ಕ್ರಮಕೈಗೊಳ್ಳಬೇಕಾಗಿದೆ.
ಹಕ್ಕೊತ್ತಾಯಗಳು: ಶೈಕ್ಷಣಿಕ ಸಹಾಯಧನ ಕಡಿತದ ಆದೇಶ ವಾಪಾಸ್ ಪಡೆಯಬೇಕು, 2022-23 ರಿಂದ 2025-26ನೇ ಸಾಲಿನವರೆಗಿನ ಶೈಕ್ಷಣಿಕ ಸಹಾಯಧನ ಪಾವತಿಸಬೇಕು ಮತ್ತು 2026-27ನೇ ಸಾಲಿನ ಶೈಕ್ಷಣಿಕ ಅರ್ಜಿಯನ್ನು ಎಸ್.ಎಸ್.ಪಿ ಪೋರ್ಟಲ್‌ನಲ್ಲಿ ರದ್ದುಪಡಿಸಿ ಕಲ್ಯಾಣ ಮಂಡಳಿಯ ವೆಬ್‌ಸೈಟ್ ನಲ್ಲಿ ಅರ್ಜಿಗಳನ್ನು ಹಾಕಲು ಕ್ರಮಕೈಗೊಳ್ಳಬೇಕು. ಮಂಡಳಿಯಲ್ಲಿ ಎಲ್ಲಾ ತರಹದ ಕಿಟ್‌ಗಳ ವಿತರಣೆಯನ್ನು ರದ್ದುಪಡಿಸಬೇಕು ಮತ್ತು ಮೇಷನ್ ಕಿಟ್ ಹಗರಣದಲ್ಲಿ ಶಾಮೀಲಾಗಿರುವ ಡಿ. ಭಾರತಿ ಮತ್ತು ಸಂಗಪ್ಪ ಉಪಾಧ್ಯ ಅವರ ಮೇಲೆ ಸೂಕ್ತ ವಿಚಾರಣೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು. ಕಲ್ಯಾಣ ಮಂಡಳಿಯಿಂದಲೇ ಕಟ್ಟಡ ಕಾರ್ಮಿಕರಿಗೆ ಇ.ಎಸ್.ಐ ಸೌಲಭ್ಯವನ್ನು ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು. ಕಟ್ಟಡ ಕಾರ್ಮಿಕರು ನಿವೃತ್ತಿಹೊಂದುವ ಮೊದಲೇ ಮೃತರಾದರೆ ಅವಲಂಬಿತ ಕಾರ್ಮಿಕ ಕುಟುಂಬಕ್ಕೆ ಕುಟುಂಬ ಪಿಂಚಣಿಯನ್ನು ಜಾರಿಗೊಳಿಸಬೇಕು. ಸೌಲಭ್ಯಗಳ ಅರ್ಜಿಗಳನ್ನು ವಿಳಂಬ ಮಾಡದೇ 3 ತಿಂಗಳ ಒಳಗೆ ಸಹಾಯಧನ ಹಣ ಬಿಡುಗಡೆ ಮಾಡಬೇಕು ಹಾಗೂ ಮನೆ ಇಲ್ಲದ ಕಟ್ಟಡ ಕಾರ್ಮಿಕರಿಗೆ ಮಂಡಳಿಯಿಂದಲೇ ಮನೆ ಖರೀದಿ/ನಿರ್ಮಾಣಕ್ಕೆ 5 ಲಕ್ಷದವರೆಗೆ ಸಹಾಯಧನವನ್ನು ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಯಕಜೀವಿ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರಾದ ಎಂ.ಡಿ ಸಿರಾಜ್, ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಗಂಗಾವತಿ ತಾಲೂಕ ಅಧ್ಯಕ್ಷ ಚಾಂದಪಾಷಾ, ಕಾರ್ಯದರ್ಶಿಯಾದ ನಿರುಪಾದಿ ಭೋವಿ, ಸದಸ್ಯರಾದ ಟೈಲ್ಸ್ ರಸೂಲ್, ಶಾಮೀದ್, ದಾವಲಭಾಷ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಯಮುನಾ ಚಳ್ಳೂರು ವಕೀಲರು, ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾದ ದುರುಗೇಶ ಬರಗೂರು, ನಗರಸಭೆ ಹೊರಗುತ್ತಿಗೆ ವಾಹನ ಚಾಲಕರಾದ ಬಾಬರ್, ರಮೇಶ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.


