ವಿದೇಶದಲ್ಲಿ ಅಧ್ಯಯನ–2026’: ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಪೋಸ್ಟರ್ ಬಿಡುಗಡೆ

H.Mallikarjun
H.Mallikarjun - Kalyanasiri
2 Min Read
‘Studying Abroad–2026’: Poster released by Koppal District Commissioners
ವಿದೇಶದಲ್ಲಿ ಅಧ್ಯಯನ–2026’: ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಪೋಸ್ಟರ್ ಬಿಡುಗಡೆ
ಕೊಪ್ಪಳ ಸೆಪ್ಟೆಂಬರ್ 01 (ಕರ್ನಾಟಕ ವಾರ್ತೆ): ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆವಿಟಿ &ಎಸ್‌ಡಿಸಿ) ವತಿಯಿಂದ ಇದೇ ಸೆಪ್ಟೆಂಬರ್ 6 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ವಿದೇಶದಲ್ಲಿ ಅಧ್ಯಯನ–2026’ ಕಾರ್ಯಕ್ರಮದ ಅಧಿಕೃತ ಪ್ರಚಾರ ಪೋಸ್ಟರ್ ಅನ್ನು ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಇಟ್ನಾಳ ಅವರು ಸೋಮವಾರ (ಆ. 31ರಂದು) ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಪೋಸ್ಟರ್ ಬಿಡುಗಡೆಗೊಳಿಸಿದ ಬಳಿಕ ಜಿಲ್ಲಾಧಿಕಾರಿಗಳು ಮಾತನಾಡಿ, “ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ಆಸಕ್ತಿಯಿರುವ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ವಿದ್ಯಾರ್ಥಿಗಳಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಿ, ನೋಂದಾಯಿಸುವಂತೆ ಅವರಿಗೆ ಪ್ರೇರೇಪಿಸಲು ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಪ್ರಾಚಾರ್ಯರು ಅಗತ್ಯ ಕ್ರಮವಹಿಸಬೇಕು. ‘ವಿದೇಶದಲ್ಲಿ ಅಧ್ಯಯನ–2026’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವ ಮೂಲಕ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ಗುಂಡೂರು, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ ಜಿ. ಬೆಲ್ಲದ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
*ಕಾರ್ಯಕ್ರಮದ ಪ್ರಮುಖ ವಿವರಗಳು:* ‘ವಿದೇಶದಲ್ಲಿ ಅಧ್ಯಯನ–2026’ ಕಾರ್ಯಕ್ರಮವು ಸೆಪ್ಟೆಂಬರ್ 06 ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಗೇಟ್ ನಂ. 04, ಗಾಯತ್ರಿ ಗ್ರಾಂಡ್, ಗಾಯತ್ರಿ ವಿಹಾರ, ಅರಮನೆ ಮೈದಾನ, ಬೆಂಗಳೂರಿನಲ್ಲಿ ನಡೆಯಲಿದ್ದು, 10ಕ್ಕೂ ಹೆಚ್ಚು ವಿದೇಶಗಳ, 75ಕ್ಕೂ ಅಧಿಕ ಜಾಗತಿಕ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಉನ್ನತ ಶಿಕ್ಷಣದ ಅವಕಾಶಗಳು, ಪ್ರವೇಶ ಪ್ರಕ್ರಿಯೆ (Admissions), ವಿದ್ಯಾರ್ಥಿ ವೀಸಾ ಮಾರ್ಗದರ್ಶನ ಹಾಗೂ ಸ್ಕಾಲರ್‌ಶಿಪ್ (ವಿದ್ಯಾರ್ಥಿ ವೇತನ) ಕುರಿತ ಸಮಗ್ರ ಮಾಹಿತಿ ಒಂದೇ ಸೂರಿನಡಿ ಸಿಗಲಿದೆ. ವಿದೇಶಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡಲಿಚ್ಛೀಸುವ ಅರ್ಹ ವಿದ್ಯಾರ್ಥಿಗಳು ಅಧಿಕೃತ ನೋಂದಣಿ ವೆಬ್‌ಸೈಟ್: https://studyabroad.ksdckarnataka.com/ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
Total Views: 0
ಜಾಹೀರಾತು
Share This Article