
Organizer - Enthusiastic journalist, editor H. Mallikarjuna
ಜೂನ್-01 ರಂದು ಹೆಚ್. ಮಲ್ಲಿಕಾರ್ಜುನ ಅವರ 70ನೇ ವರ್ಷದ ಸಂಭ್ರಮದ ನಿಮಿತ್ತ ಲೇಖನ


ಸಂಘಟಕ – ಉತ್ಸಾಹಿ ಪತ್ರಕರ್ತ, ಸಂಪಾದಕ ಹೆಚ್.ಮಲ್ಲಿಕಾರ್ಜುನ






ಗಂಗಾವತಿ: ಬಸವದಳ ಮೂಲಕ ಲಿಂಗಾಯತ ಸಮಾಜದ ಸಂಘಟನೆ ಜೊತೆ ಪತ್ರಿಕೆ ವರದಿಗಾರ, ಸಂಪಾದಕನಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವುದು ಸುಲಭವಲ್ಲ, ಆದರೆ ಈ ಕಾರ್ಯವನ್ನು ಸುಲಭವಾಗಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಇತರರಿಗೆ ಮಾದರಿಯಾದ ವ್ಯಕ್ತಿಯೊಬ್ಬರು ಗಂಗಾವತಿಯಲ್ಲಿದ್ದಾರೆ.
ಯಾವುದೇ ಸಮಾಜದ ಜನರನ್ನು ಒಗ್ಗೂಡಿಸುವ ಕಾರ್ಯ ಮಾಡಲು ಸಂಘಟನಾ ಶಕ್ತಿ, ಸಮನ್ವಯತೆ, ಸಮಾಜ ಒಗ್ಗೂಡಿಸುವ ಕುರಿತು ಮನವರಿಕೆ ಮಾಡುವ ತಿಳುವಳಿಕೆ, ನಿರ್ದಿಷ್ಟ ಗುರಿ ಮತ್ತು ಸಂಘಟನಾ ಜ್ಞಾನ ಇರಬೇಕು. ಅಲ್ಲದೇ ಶ್ರದ್ಧೆ, ಚತುರತೆ ಬೇಕು. ಪತ್ರಕರ್ತನಾಗಿ ಸುದ್ದಿ ಸಂಗ್ರಹಣೆ ಕೆಲಸವನ್ನು ಉತ್ಸಾಹದಿಂದ ನಿರ್ವಹಿಸುವ ಚಾಣಾಕ್ಷತನ ಹೊಂದಿರಬೇಕು. ಸಂಪಾದಕ ಜವಾಬ್ದಾರಿ ಮಹತ್ವದ್ದಾಗಿದ್ದು ತೊಂದರೆ ಎದುರಾದರೂ ಧೈರ್ಯ ಕಳೆದುಕೊಳ್ಳದೆ ಪತ್ರಿಕೆ ಪ್ರಕಟಿಸಿ ಹೊರ ತರುವ ನಿಪುಣತನ ಇರಬೇಕು.mallikarjun
ಲಿಂಗಾಯತ ಸಮಾಜ ಒಗ್ಗೂಡಿಸುವ ಕಾರ್ಯದಲ್ಲಿ ಮತ್ತು ವರದಿಗಾರ, ಸಂಪಾದಕನಾಗಿ ಯಶಸ್ವಿಗೊಂಡ ಹಿರಿಯ ಅನುಭವಿ ಹೆಚ್. ಮಲ್ಲಿಕಾರ್ಜುನ ಅವರನ್ನು ಪರಿಚಯಿಸುವ ಉದ್ದೇಶವೇ ಈ ಬರಹ. 1956 ರಲ್ಲಿ ಅಮರಪ್ಪ ಮತ್ತು ಏಕಾಂಬರಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಏಳು ಮಕ್ಕಳಲ್ಲಿ ನಾಲ್ಕನೇಯವರು. ತಂದೆ ಶಾಲಾ ಶಿಕ್ಷಕರಾಗಿ ವರ್ಗಾವಣೆಗೊಂಡು ಗಂಗಾವತಿ ತಾಲೂಕಿನ ಹೊಸ್ಕೇರ ಗ್ರಾಮದಲ್ಲಿ ನೆಲೆಸಿದ್ದರಿಂದ ಪ್ರಾಥಮಿಕ ಶಿಕ್ಷಣ ಇಲ್ಲಿಯೇ ಪೂರ್ಣಗೊಳಿಸಿ ನಂತರ ಗಂಗಾವತಿಯಲ್ಲಿ ಪ್ರೌಢ ಮತ್ತು ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದಾರೆ. SSLC ಮುಗಿದ ಮೇಲೆ ರೂ 80 ಸಂಬಳದಲ್ಲಿ ಪೊಸ್ಟ್ ಆಪಿಸ್ ನಲ್ಲಿ EDA ಆಗಿ ಐದು ವರ್ಷ ಕೆಲಸ ಮಾಡುತ್ತಾ PUC ಮುಗಿಸಿದರು.
ಪಿಯರಲೆಸ್ ಮತ್ತು ಜೀವನ ವಿಕಾಸ ಜೀವ ವಿಮಾ ಕಂಪನಿಗಳಲ್ಲಿ ಡೆವಲಪ್ ಮೆಂಟ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಜೀವನ ನಿರ್ವಹಣೆಗೆ ಅನಿಲ್ ಏಜೆನ್ಸಿಯಿಂದ ರಾಜ್ಯಾದ್ಯಂತ ತಮ್ಮ ‘ಕರ್ನಾಟಕ’ ಹೆಸರಿನ ಹಪ್ಪಳ, ಆಟೋ ಮತ್ತಿತರ ವಾಹನಗಳಲ್ಲಿ ಊರುಗಳಿಗೆ ಸಂಚರಿಸಿ ಸಿಹಿ ತಿಂಡಿ, ದಿನಸಿ, ರೊಟ್ಟಿ, ಚಟ್ನಿ ಪುಡಿ ಮಾರಾಟ ಮಾಡಿದ್ದಾರೆ. ಸೈಕಲ್ ತುಳಿದು ಪತ್ರಿಕೆ ಹಂಚಿದ್ದಾರೆ. ಎಲ್ಲ ಬಗೆಯ ಕೆಲಸ ಕಾರ್ಯಗಳನ್ನು ಸಂಕೋಚವಿಲ್ಲದೇ ಇವರು ಮಾಡಿದ್ದು ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತು ಅನ್ವಯವಾಗುವಂತೆ ಬದುಕು ಸಾಗಿಸಿದ್ದಾರೆ.









ಇವರು ನಿಷ್ಠುರವಾಗಿ ಮಾತನಾಡುವ ಸ್ವಭಾವ ಹೊಂದಿದ್ದು, ಸಾಧಿಸುವ ಛಲ ಇವರಲ್ಲಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಮಾಜ ಸಂಘಟನೆ ಮತ್ತು ಪತ್ರಿಕೆ ಪ್ರಕಟಿಸುತ್ತಿರುವ ಕಾರ್ಯ ಎಲ್ಲರ ಕಣ್ಮುಂದಿದೆ. ಮೊದಲು ಬಸವ ದಳದಿಂದ ಲಿಂಗಾಯತ ಸಮಾಜದ ಸಂಘಟನೆ ತೊಡಗಿದ್ದ ಇವರು 1987ರಲ್ಲಿ ಸುವರ್ಣ ಗಿರಿ ಪತ್ರಿಕೆಗೆ ವರದಿಗಾರನಾಗಿ, ವಿತರಕರಾಗಿ ನಿಯೋಜನೆಗೊಂಡು ಸುದ್ದಿ ಸಂಗ್ರಹಣೆ ಮಾಡಿದರು. ನಂತರ ಪ್ರಜಾಪ್ರಪಂಚ ಪತ್ರಿಕೆ ಸಂಪಾದಕ ಹೆಚ್.ಆರ್. ಇರಕಲ್ ರ ಪರಿಚಯವಾದ ಮೇಲೆ ಅವರ ಸಂಪಾದಕತ್ವದಲ್ಲಿ ಪ್ರಜಾದರ್ಶಿ ಪತ್ರಿಕೆ ಆರಂಭಿಸಿ ಒಂದು ವರ್ಷ ಪ್ರಕಟಿಸಿ ಹೊರತಂದರು. ನಂತರ ಪ್ರಜಾಪ್ರಪಂಚ ಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸಿದರು.
2008 ರಲ್ಲಿ ವಿಜಯನಗರ ಸಂಜೆ, 2008 ರಿಂದ 2014 ವರಗೆ ಬಳ್ಳಾರಿಯ ಈ ನಮ್ಮ ಕನ್ನಡ ನಾಡು ಪತ್ರಿಕೆಗಳಲ್ಲಿ, ಗಡಿಕನ್ನಡಿಗ ಪತ್ರಿಕೆಯಲ್ಲಿ ವರದಿಗಾರನಾಗಿ

ಕಾರ್ಯನಿರ್ವಹಿಸಿ 2014 ರಿಂದ ಸಂಪಾದಕರಾಗಿ ಕಲ್ಯಾಣ ಸಿರಿ ದಿನ ಪತ್ರಿಕೆ ಮತ್ತು ಕಲ್ಯಾಣ ಸಿರಿ ವೆಬ್ ನ್ಯೂಸ್ ಆರಂಭಿಸಿ ತಮ್ಮದೇ ಛಾಪು ಮೂಡಿಸುತ್ತಾ ಪತ್ರಿಕಾ ರಂಗದಲ್ಲಿ ಮುಂದುವರೆದಿದ್ದಾರೆ.
ಲೇಖನಗಳ ಸಂಗ್ರಹ ಪುಸ್ತಕ ‘ಬಸವ ಪ್ರಭೆ’ ಪ್ರಕಟಿಸಿ ಗಂಗಾವತಿಯಲ್ಲಿ ನಡೆದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದ 2011 ರಲ್ಲಿ ಬಿಡುಗಡೆಗೊಳಿಸಿದ್ದಾರೆ. 2014ರಲ್ಲಿ ಕಲ್ಯಾಣ ಸಿರಿ ಪತ್ರಿಕೆ ಸಂಪಾದಕನಾಗಿ ತಮ್ಮದೇ ನೇತೃತ್ವದಲ್ಲಿ ಕ್ಷೌರಿಕ, ಚಪ್ಪಲಿ ಹೊಲಿಯುವ, ಕುಂಬಾರಿಕೆ ಕಾಯಕ ಮಾಡುವವರು, ಹಣ್ಣು, ಗಿರಮಿಟ್ ಮಾರುವವರು, ಪತ್ರಿಕೆ ಹಂಚುವ, ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ನಿರ್ವಹಿಸುವವರು, ಪೌರಕಾರ್ಮಿಕರನ್ನು ಗುರುತಿಸಿ ಅವರಿಗೆ ‘ಕಾಯಕ ಸಿರಿ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ.
ಕರ್ನಾಟಕ ಪತ್ರಕರ್ತರ ಸಂಘದಲ್ಲಿ ರಾಜ್ಯ ಸಮಿತಿ ಸದಸ್ಯ, ಸಂಘಟನಾ ಕಾರ್ಯದರ್ಶಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇದೇ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾಗಿದ್ದರು, ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಲ್ಲಿ ರಾಜ್ಯ ಸಮಿತಿ ಸದಸ್ಯರಾಗಿ ಪತ್ರಕರ್ತರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಗಂಗಾವತಿ ತಾಲೂಕು ರಾಷ್ಟ್ರೀಯ ಬಸವದಳದಲ್ಲಿ ಅಧ್ಯಕ್ಷ, ಗೌರವಾಧ್ಯಕ್ಷ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷನಾಗಿ ಹಿಂದುಳಿದ ವರ್ಗಗಳ ಬಾಂಧವರ ಅಭಿವೃದ್ಧಿಗೆ ಯತ್ನಿಸಿದ್ದಾರೆ. ಅಲ್ಲದೇ ಒಕ್ಕೂಟದ ಜಿಲ್ಲಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡು ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ.
2011 ರಲ್ಲಿ ಬಸವ ಪ್ರಭೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇವರನ್ನು ಸನ್ಮಾನಿಸಿದ್ದಾರೆ. ಇವರ ಸೇವೆ ಪರಿಗಣಿಸಿ 2015 ರಲ್ಲಿ ಕೊಪ್ಪಳ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪದಿಂದ ಸನ್ಮಾನಿತ ಗೊಂಡಿದ್ದಾರೆ. 2025 ರಲ್ಲಿ ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ‘ಮಾಧ್ಯಮ ಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಷ್ಟೇ ಅಲ್ಲದೇ ವಿವಿಧ ಸ್ಥಳಗಳಲ್ಲಿ ನೂರಕ್ಕೂ ಹೆಚ್ಚು ಬಾರಿ ಸನ್ಮಾನಿತರಾಗಿದ್ದಾರೆ.
ಇವರು ವಹಿಸಿಕೊಂಡ ಕೆಲಸವನ್ನು ಮುತುವರ್ಜಿ ಮತ್ತು ಛಲದಿಂದ ನಿರ್ವಹಿಸುತ್ತಾರೆ. ನಿಷ್ಠುರವಾಗಿ ಮಾತನಾಡುವ, ಅನ್ಯಾಯ ಕಂಡರೆ ಪ್ರತಿಭಟಿಸುವ ಮನೋಭಾವ ಇವರದ್ದು. ಕಷ್ಟದಲ್ಲಿ ಜೀವನ ನಡೆಸಿದ ಇವರಿಗೆ ಅರಿತು ನಡೆವ ಪತ್ನಿ ಇದ್ದು ಮೂವರು ಮಕ್ಕಳಿದ್ದಾರೆ. ಇಬ್ಬರು ಪುತ್ರಿಯರಿಗೆ ಮದುವೆ ಮಾಡಿದ್ದಾರೆ. ಪುತ್ರ ಅನಿಲ್ ವಿವಾಹವಾಗಿದ್ದು ಸೊಸೆ ಮತ್ತು ಮಗ, ಮೊಮ್ಮಗ ಆಸ್ಟ್ರೇಲಿಯಾ ದೇಶದ ಸಿಡ್ನಿಯಲ್ಲಿದ್ದು ಉದ್ಯೋಗದಲ್ಲಿದ್ದಾರೆ.






ಸಂಬಂಧಿಕರು, ಆತ್ಮೀಯರ ಜೊತೆ ಉತ್ತಮ ಬಾಂಧವ್ಯವಿರಿಸಿಕೊಂಡು ಜೀವನದ ಪಯಣದಲ್ಲಿ ಸಾಗಿದ್ದಾರೆ. ಎಲ್ಲರ ಮಾತು ಆಲಿಸುವ ಇವರು ತಮ್ಮ ಮನಸ್ಸಿಗೆ ಸರಿ ಎನಿಸುವ ಮಾರ್ಗದಲ್ಲಿ ಹೆಜ್ಜೆಯನ್ನಿಡುತ್ತಾರೆ. ಇವರು ಮಾತುಗಳು ಒರಟು ಎನಿಸಿದರೂ ಮನಸು ಬಹಳ ಮೃದು. ಕಷ್ಟಕ್ಕೆ ಮಿಡಿಯುವ ಹೃದಯ ಇವರದು. ಸ್ಪಂದಿಸುವ ಗುಣ ಇವರಲ್ಲಿದ್ದು ಎಲ್ಲರಿಗೂ ಸಲಹೆ, ಸಹಕಾರ ನೀಡುತ್ತಾರೆ.
ಹೆಚ್. ಮಲ್ಲಿಕಾರ್ಜುನ ಅವರು ಯಶಸ್ವಿ ಸಂಘಟಕ, ಪತ್ರಕರ್ತ, ಸಂಪಾದಕ ಎಂಬ ಮಾತಿನಲ್ಲಿ ಸಂಶಯವಿಲ್ಲ. ಈ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಇವರು ಲೈಫ್ ಸ್ಟೈಲ್ ವಿಶೇಷವಾಗಿದ್ದು ಉತ್ತಮ ಚಾರಿತ್ರ್ಯವುಳ್ಳ ಇವರು ಅಪರೂಪದ ವ್ಯಕ್ತಿ.

ಲೇಖನ:
ಪರಶುರಾಮ ಪ್ರಿಯ
ಗಂಗಾವತಿ
ಮೊ: 6366694264
