ಡಿಎಪಿ ಬದಲಿಗೆ ಸಂಯುಕ್ತ ರಸಗೊಬ್ಬರ ಬಳಕೆಗೆ ಸಲಹೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Suggestion to use compound fertilizer instead of DAP




ಡಿಎಪಿ ಬದಲಿಗೆ ಸಂಯುಕ್ತ ರಸಗೊಬ್ಬರ ಬಳಕೆಗೆ ಸಲಹೆ

ಜಾಹೀರಾತು


ಕೊಪ್ಪಳ ಮೇ 30 (ಕರ್ನಾಟಕ ವಾರ್ತೆ): ರೈತರು ಡಿಎಪಿ ಬದಲಿಗೆ ಸಂಯುಕ್ತ ರಸಗೊಬ್ಬರ ಬಳಕೆ ಮಾಡುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ ಅವರು ಸಲಹೆ ನೀಡಿದ್ದಾರೆ.
 ಆಧುನಿಕ ಕೃಷಿಯಲ್ಲಿ ರೈತರು ಸಾವಯವ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ, ಕೃತಕ ರಾಸಾಯನಿಕ ಗೊಬ್ಬರಗಳನ್ನು ಶಿಫಾರಸು ಪ್ರಮಾಣಕ್ಕಿಂತ ಹೆಚ್ಚಾಗಿ ಬಳಸುತ್ತಿರುವುದು ಕೃಷಿ ಉತ್ಪಾದನೆ ಹಾಗೂ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
 ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಹಾಗೂ ಬಿತ್ತನೆ ಕಾರ್ಯಗಳು ವೇಗ ಪಡೆದಿವೆ. ರೈತರ ಅನುಕೂಲಕ್ಕಾಗಿ ಅಗತ್ಯ ಪ್ರಮಾಣದ ರಸಗೊಬ್ಬರಗಳನ್ನು ವಿವಿಧ ದಾಸ್ತಾನು ಮಳಿಗೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಆದರೆ ರೈತರು ಒಂದೇ ಬಗೆಯ ರಸಗೊಬ್ಬರಕ್ಕೆ ಅಥವಾ ಒಂದೇ ಸಂಸ್ಥೆಯ ಉತ್ಪನ್ನಗಳಿಗೆ ಆದ್ಯತೆ ನೀಡದೆ, ಪರ್ಯಾಯ ಗೊಬ್ಬರಗಳನ್ನು ಬಳಕೆ ಮಾಡಬೇಕು.
 ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಗಳಿಗೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳ ಬಳಕೆ ಹೆಚ್ಚು ಪರಿಣಾಮಕಾರಿ ಆಗಲಿದೆ. ಮೆಕ್ಕೆಜೋಳ, ಹೆಸರು, ತೊಗರಿ, ಸಜ್ಜೆ, ಭತ್ತ, ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ 10:26:26, 12:32:16, 20:20:0:13, 19:19:19, 15:15:15 ಹಾಗೂ 17:17:17 ಅನುಪಾತದ ಸಂಯುಕ್ತ ರಸಗೊಬ್ಬರಗಳನ್ನು ಬಳಸುವಂತೆ ಶಿಫಾರಸು ಮಾಡಲಾಗಿದೆ. ಇದರೊಂದಿಗೆ ನ್ಯಾನೋ ಯೂರಿಯಾ ಬಳಕೆ ಮಾಡುವುದರಿಂದ ಪೋಷಕಾಂಶಗಳ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸಂಯುಕ್ತ ರಸಗೊಬ್ಬರಗಳಲ್ಲಿ ಪೊಟ್ಯಾಷ್ ಹಾಗೂ ಗಂಧಕದ ಅಂಶಗಳು ಇರುವುದರಿಂದ ಬೆಳೆಗಳ ಬೇರುಗಳ ಬೆಳವಣಿಗೆ ಉತ್ತಮಗೊಳ್ಳುತ್ತದೆ. ಅಲ್ಲದೆ, ಕೀಟ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ಸಮತೋಲನ ರಸಗೊಬ್ಬರಗಳ ಬಳಕೆಗೆ ಆದ್ಯತೆ ನೀಡಬೇಕು.
 ರೈತರು ಯೂರಿಯಾ ಖರೀದಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಎಫ್.ಐ.ಡಿ ಸಂಖ್ಯೆಯನ್ನು ಹೊಂದಿರಬೇಕು. ರಸಗೊಬ್ಬರ ಮಳಿಗೆಗಳಿಗೆ ತೆರಳುವಾಗ ಆಧಾರ್ ಕಾರ್ಡ್ ಪ್ರತಿಯನ್ನು ಹಾಗೂ ಒಟಿಪಿ ಸ್ವೀಕರಿಸಲು ಮೊಬೈಲ್ ಫೋನ್ ಅನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು ಎಂದು ಕೊಪ್ಪಳ ಜಿಲ್ಲಾ ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.

Total Views: 0
Share This Article