
Give a new look to the statue of Basavanna from the Chalukya Circle before Basava Jayanti: Request submitted to Chief Minister Siddaramaiah

ಬಸವಜಯಂತಿಗೂ ಮುನ್ನ ಚಾಲುಕ್ಯ ವೃತ್ತದ ಬಸವಣ್ಣನವರ ಪುತ್ಥಳಿಗೆ ಹೊಸ ಸ್ವರೂಪ ನೀಡಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಲ್ಲಿಸಿದ ಮನವಿ

ಕರ್ನಾಟಕ ರಾಜ್ಯ ಯುವ ಸಮೂಹ ಒತ್ತಾಯ
ಬೆಂಗಳೂರು, ಏ.16: ನಗರದ ಚಾಲುಕ್ಯ ವೃತ್ತದಲ್ಲಿರುವ ಕಾಯಕಯೋಗಿ ಬಸವಣ್ಣನವರ ಪುತ್ಥಳಿಗೆ ತುರ್ತುವಾಗಿ ನೂತನ ಸ್ವರೂಪ ನೀಡುವುದರ ಜೊತೆಗೆ ಸಮಗ್ರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಎಸ್. ಸಂಗಮೇಶ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಏಪ್ರಿಲ್ 20ರಂದು ನಾಡಿನೆಲ್ಲೆಡೆ ಬಸವ ಜಯಂತಿಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತಿದ್ದು, ಅದಕ್ಕೂ ಮುನ್ನ ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನವರ ಪುತ್ಥಳಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಬಣ್ಣ ಬಳಿದು, ನಳನಳಿಸುವಂತೆ ಸಜ್ಜುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.


ಆ ದಿನ ರಾಜ್ಯದ ಹಲವು ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ವಿಶ್ವಗುರು ಬಸವಣ್ಣನವರಿಗೆ ಪುಷ್ಪನಮನ ಸಲ್ಲಿಸಲಿರುವ ಹಿನ್ನೆಲೆ, ಪುತ್ಥಳಿಯ ಸೌಂದರ್ಯ ಮತ್ತು ಗೌರವ ಕಾಪಾಡುವುದು ಸರ್ಕಾರದ ತುರ್ತು ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಪುತ್ಥಳಿಯ ಬಣ್ಣ ಮಸುಕಾಗಿದ್ದು, ನಿರ್ವಹಣೆಯ ಕೊರತೆಯಿಂದ ಅದರ ವೈಭವ ಕುಂದಿದೆ. ರಾಜ್ಯದ ಅನೇಕ ಪ್ರಮುಖ ಸ್ಥಳಗಳಲ್ಲಿರುವ ಪುತ್ಥಳಿಗಳಿಗೆ ಆಕರ್ಷಕ ಬಣ್ಣ ಬಳಿಸಲಾಗಿರುವಂತೆ, ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನವರ ಪುತ್ಥಳಿಗೂ ಗೋಲ್ಡನ್ ಕಲರ್ ಬಳಸಿ ನೂತನ, ಭವ್ಯ ಹಾಗೂ ಸ್ಪಷ್ಟ ಸ್ವರೂಪ ನೀಡಬೇಕು ಎಂದು ಒತ್ತಾಯಿಸಲಾಗಿದೆ. ವಿಶೇಷವಾಗಿ ವಿಧಾನಸೌಧ ಮುಂಭಾಗದಲ್ಲಿರುವ ಪುತ್ಥಳಿಯ ಬಣ್ಣ ಮಾದರಿಯಂತೆ ಈ ಪುತ್ಥಳಿಗೂ ಅದೇ ರೀತಿಯ ಅಲಂಕಾರಿಕ ಬಣ್ಣ ನೀಡಿದರೆ ಅತ್ಯಂತ ಸುಂದರವಾಗಿ ಕಾಣುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ, ಪುತ್ಥಳಿಯ ಸುತ್ತಮುತ್ತ ಪ್ರದೇಶದಲ್ಲಿ ತುರ್ತು ಸ್ವಚ್ಛತೆ, ಸೌಂದರ್ಯೀಕರಣ ಹಾಗೂ ಹಸಿರೀಕರಣ ಕಾರ್ಯಗಳನ್ನು ಕೈಗೊಳ್ಳಬೇಕು. ಹೂವಿನ ಗಿಡಗಳು, ಅಲಂಕಾರಿಕ ಸಸ್ಯಗಳು, ಹೂವಿನ ಕುಂಡಗಳು ಮತ್ತು ಸಣ್ಣ ಪಾರ್ಕ್ ನಿರ್ಮಾಣದ ಮೂಲಕ ಸ್ಥಳವನ್ನು ಆಕರ್ಷಕವಾಗಿ ರೂಪಿಸಬೇಕು ಎಂದು ಮನವಿ ಮಾಡಲಾಗಿದೆ.
ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ಹಾಗೂ ಸಂಜೆ 5.30ರಿಂದ ರಾತ್ರಿ 10 ಗಂಟೆಯವರೆಗೆ ಧ್ವನಿವರ್ಧಕ ವ್ಯವಸ್ಥೆಯ ಮೂಲಕ ಬಸವಣ್ಣನವರ ವಚನಗಳ ಪ್ರಸಾರ ನಡೆಯುವಂತೆ ಶಾಶ್ವತ ವ್ಯವಸ್ಥೆ ಮಾಡಬೇಕು. ಈ ವ್ಯವಸ್ಥೆ ಬಸವ ಜಯಂತಿಗೆ ಮಾತ್ರ ಸೀಮಿತವಾಗದೆ, ಪ್ರತಿದಿನದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮುಂದುವರಿಯಬೇಕು ಎಂದು ಒತ್ತಾಯಿಸಲಾಗಿದೆ.
ಬಸವಣ್ಣನವರ ವಚನಗಳು ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಅಮೂಲ್ಯ ಸಂದೇಶಗಳಾಗಿರುವುದರಿಂದ, ಅವು ಜನಮಾನಸಕ್ಕೆ ಪ್ರತಿದಿನ ತಲುಪುವಂತೆ ಮಾಡುವುದು ಸರ್ಕಾರದ ಸಾಮಾಜಿಕ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಸಮರ್ಪಕ ಬೆಳಕು, ಸಿಸಿಟಿವಿ ಹಾಗೂ ಭದ್ರತಾ ವ್ಯವಸ್ಥೆ, ಕುಡಿಯುವ ನೀರು ಮತ್ತು ದಿನನಿತ್ಯ ನಿರ್ವಹಣೆಗೆ ಸಿಬ್ಬಂದಿ ನಿಯೋಜನೆ ಮಾಡಬೇಕು. ವಿಧಾನಸೌಧ, ಹೈಕೋರ್ಟ್ ಮತ್ತು ಲೋಕಭವನಕ್ಕೆ ಅತೀ ಸಮೀಪದಲ್ಲಿರುವ ಈ ಪ್ರತಿಷ್ಠಿತ ಸ್ಥಳವನ್ನು ಸರ್ಕಾರ ನಿರ್ಲಕ್ಷ್ಯ ಮಾಡದೆ, ನಗರದ ಗೌರವದ ಪ್ರತೀಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮನವಿ ಪತ್ರಕ್ಕೆ ಹನುಮೇಶ್ ಗುಂಡೂರ, ವಕೀಲ ನಿಂಗರಾಜ ಗುಳೆ, ಮಲ್ಲಿಕಾರ್ಜುನ್ ಬಾಂಬೇಕರ್, ಜಿ.ಎಂ. ಬಬಲಾದ, ಅಭಿಷೇಕ, ಭೀಮಾಶಂಕರ ಬಿಲ್ಲವ ಹಾಗೂ ಮಂಜುನಾಥ ಬಿ (ಗುತ್ತಿಗೆದಾರರು) ಸಹಿ ಮಾಡಿದ್ದಾರೆ.
