Breaking News

ಬಸವ ಜಯಂತಿ ನಮ್ಮ ಹೃದಯದಲ್ಲಿ ಭಕ್ತಿ ಮತ್ತು ಪ್ರೀತಿಯ ಕಂಪನಗಳನ್ನು ಹುಟ್ಟಿಸಲಿ

May Basava Jayanti instill vibrations of devotion and love in our hearts.

ಜಾಹೀರಾತು

ಗುರು ಬಸವಣ್ಣನವರ ೮೯೨ನೆಯ ಜಯಂತಿಯ ಶುಭಾಶಯಗಳು

ಸಚ್ಚಿದಾನಂದ ಪ್ರಭು ಚಟ್ನಳ್ಳಿ ,
ವಚನ:
ಬಯಲ ಮೂರ್ತಿಗೊಳಿಸಿದನೊಬ್ಬ ಶರಣ.
ಆ ಮೂರ್ತಿಯಲ್ಲಿ ಭಕ್ತಿ ಸ್ವಾಯತವ ಮಾಡಿದನೊಬ್ಬ ಶರಣ.
ಆ ಭಕ್ತಿಯನೆ ಸುಜ್ಞಾನ ಮುಖವ ಮಾಡಿದನೊಬ್ಬ ಶರಣ.
ಆ ಸುಜ್ಞಾನವನು ಲಿಂಗಮುಖವಾಗಿ ಧರಿಸಿದನೊಬ್ಬ ಶರಣ.
ಆ ಲಿಂಗವನೆ ಸರ್ವಾಂಗದಲ್ಲಿ ವೇಧಿಸಿಕೊಂಡನೊಬ್ಬ ಶರಣ.
ಆ ಸರ್ವಾಂಗವನೆ ನಿರ್ವಾಣ ಸಮಾಧಿಯಲ್ಲಿ ನಿಲಿಸಿದನೊಬ್ಬ ಶರಣ.
ನಾನು ನಿರ್ವಾಣದಲ್ಲಿ ನಿಂದು ಅಗಮ್ಯನಾದೆನೆಂದಡೆ,
ಭಕ್ತಿ ಕಂಪಿತನೆನಿಸಿ ಎನ್ನ ತನ್ನಲ್ಲಿಗೆ ಬರಿಸಿಕೊಂಡನೊಬ್ಬ ಶರಣ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದವ ಕಂಡು
ಶರಣೆಂದು ಬದುಕಿದೆನು
.

ಗುರು ಬಸವಣ್ಣನವರು ಈ ಜಗತ್ತಿನ ಮಹಾನ್ ಪ್ರವಾದಿ. ಶ್ರೇಷ್ಠವಾದ ಲಿಂಗಾಯತ ಧರ್ಮ ಸಂಸ್ಥಾಪಕರು. ಇತರ ಧರ್ಮದ ಧರ್ಮಗುರುಗಳು ಮತ್ತು ಲಿಂಗಾಯತ ಧರ್ಮಗುರು ಗುರು ಬಸವಣ್ಣನವರ ಜೀವನ ಸಾಧನೆ ಮತ್ತು ಸಂದೇಶಗಳಲ್ಲಿ ತುಂಬಾ ವ್ಯತ್ಯಾಸಗಳಿವೆ. ಅಂತಹ ಎರಡು ವ್ಯತ್ಯಾಸಗಳನ್ನು ಮೇಲಿನ ಗುರು ಅಲ್ಲಮ ಪ್ರಭುದೇವರ ವಚನದಲ್ಲಿ ಕಾಣಬಹುದು.

ಗುರು ಬಸವಣ್ಣನವರು ಇಷ್ಟಲಿಂಗವನ್ನು ಕಂಡುಹಿಡಿದು ಅದನ್ನು ಲಿಂಗದೇವರ ಕುರುಹೆಂದು ಅರುಹಿ, ಲಿಂಗದೇವನನ್ನೊಲಿಸಲು-ಲಿಂಗದೇವನನ್ನರಿಯಲು ಅದೊಂದು ಸಾಧನವನ್ನಾಗಿ ಮಾಡಿದರು. ಬಯಲ ಸ್ವರೂಪವಾದ ಲಿಂಗದೇವನನ್ನು ಇಷ್ಟಲಿಂಗ ರೂಪದಲ್ಲಿ ಮೂರ್ತಿಗೊಳಿಸಿದರು. ಇಷ್ಟಲಿಂಗವನ್ನು ಅರ್ತಿ(ಪ್ರೀತಿ)ಯಿಂದ ಅರ್ಚಿಸಲು ಕಲಿಸಿದರು.

ಆ ಪ್ರೀತಿಯನ್ನು ಭಕ್ತಿ ಮುಖೇನ ವ್ಯಕ್ತಪಡಿಸಲು ಕಲಿಸಿದರು. ಭಕ್ತಿಯ ಮೂಲಕವೇ ಲಿಂಗದೇವನನ್ನು ಅರಿಯುವ ಜ್ಞಾನ ಲಭಿಸುತ್ತದೆ ಎನ್ನುವುದನ್ನು ತಾವು ಅಪ್ರತಿಮ ಭಕ್ತರಾಗಿ ತೋರಿಸಿಕೊಟ್ಟರು. ಸುಜ್ಞಾನದಿಂದ ಅರಿತು ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸುವಂತಹ ತತ್ವವನ್ನು ನೀಡಿದರು.

ಲಿಂಗದೇವನನ್ನು ಸರ್ವಾಂಗಕ್ಕೂ ಅಳವಡಿಸಿಕೊಂಡರು. ಕಣ್ಣು-ಶಿವಲಿಂಗವಾಗಬೇಕು, ನಾಲಿಗೆ-ಗುರುಲಿಂಗವಾಗಬೇಕು, ಕಿವಿ – ಪ್ರಸಾದಲಿಂಗವಾಗಬೇಕು. ಮೂಗು-ಆಚಾರಲಿಂಗವಾಗಬೇಕು, ಚರ್ಮ ಜಂಗಮ ಲಿಂಗವಾಗಬೇಕು ಎನ್ನುವ ತತ್ವವನ್ನು ಕಲಿಸಿ, ತಾವು ಸಾಧಿಸಿ ಸರ್ವಾಂಗ ಲಿಂಗಿಯಾದರು.

ಲಿಂಗಮಯವಾದ ಸರ್ವಾಂಗವನು ನಿರ್ವಾಣ ಸಮಾಧಿಯಲ್ಲಿ ನಿಲ್ಲಿಸಿದರು. ಜೀವನ್ಮುಕ್ತಿಯನ್ನು ಗಳಿಸಿದರು. ಹಾಗೆ ನಾನು (ಅಲ್ಲಮ ಪ್ರಭುದೇವರು) ನಿರ್ವಾಣದಲ್ಲಿ ನಿಂದು ಜೀವನ್ಮುಕ್ತಿಯನ್ನು ಹೊಂದಿ ಲಿಂಗಸ್ವರೂಪನಾಗಿ ಅಗಮ್ಯನಾದೆನೆಂದು ಭಾವಿಸಿರಲು, ತನ್ನ ಭಕ್ತಿಯ ಕಂಪನಗಳಿಂದ ಎನ್ನನ್ನು ತನ್ನಲ್ಲಿಗೆ ಬರಿಸಿಕೊಂಡರು. ಭಕ್ತಿಯ ಶಕ್ತಿಯಿಂದಲೇ ಏನೆಲ್ಲವನ್ನೂ ಸಾಧಿಸಿದ ಗುರು ಬಸವಣ್ಣನವರ ಶ್ರೀಪಾದ(ಜ್ಞಾನ) ವನ್ನು ಕಂಡು ಶರಣೆಂದು ಬದುಕಿಕದೆನು ಎಂದು ಗುರು ಅಲ್ಲಮಪ್ರಭುದೇವರು ಗುರು ಬಸವಣ್ಣನವರ ಭಕ್ತಿಯನ್ನು ಕುರಿತು ಅತ್ಯಂತ ಅನುಭಾವಪೂರಿತವಾಗಿ ಹೇಳಿದ್ದಾರೆ.

ಇತರ ಧರ್ಮದ ಪ್ರವಾದಿಗಳು ಮತ್ತು ಭಕ್ತಿ ಪಂಥಗಳ ಪ್ರವರ್ತಕರು ದೇಶದಾದ್ಯಂತ ಸಂಚರಿಸಿ ತಮ್ಮ ಧರ್ಮ ಮತ್ತು ಪಂಥಗಳನ್ನು ಪ್ರಚಾರ ಮಾಡಿರುವುದನ್ನು ಇತಿಹಾಸದಿಂದ ಅರಿಯುತ್ತೇವೆ. ಆದರೆ ಗುರು ಬಸವಣ್ಣನವರು ತಾವು ಕಾಯಕ ಜೀವಿಯಾಗಿ ಕಲ್ಯಾಣದಲ್ಲಿ ನೆಲೆ ನಿಂತು ಅಸಂಖ್ಯಾತರನ್ನು ತಮ್ಮೆಡೆಗೆ ಬರಿಸಿಕೊಂಡರು. ಗುರು ಬಸವಣ್ಣನವರು ತಾವೇ ಸ್ವತಃ ಸಂಚರಿಸಿ ಧರ್ಮಪ್ರಚಾರ ಮಾಡಲಿಲ್ಲ ಬದಲಿಗೆ ಗುರು ಬಸವಣ್ಣನವರ ತತ್ತ್ವಗಳಿಗೆ ಮಾರು ಹೋಗಿ ಭರತ ಖಂಡದ ಹಲವಾರು ಭಾಗಗಳಿಂದ ಎಲ್ಲಾ ವರ್ಗದ ಜನರು ಕಲ್ಯಾಣದೆಡೆಗೆ ಹರಿದು ಬಂದರು. ಹೀಗೆ ಹರಿದು ಬರಬೇಕಾದರೆ, ಭಕ್ತಿಯ ಮೂಲಕ ಪ್ರೀತಿ ವಾತ್ಸಲ್ಯಗಳನ್ನು ಬಿತ್ತಿದ ಗುರು ಬಸವಣ್ಣನವರ ಕೀರ್ತಿ ದೆಸೆದೆಸೆಗೆ ಪಸರಿಸಿದುದೇ ಕಾರಣವಾಗಿದೆ.

ಗುರು ಬಸವಣ್ಣನವರು ನೀಡಿದ ಲಿಂಗಾಯತ ಧರ್ಮಕ್ಕೆ ಭಕ್ತಿಯೇ ಮೂಲ ತಳಹದಿ. ಭಕ್ತಿವಂತನಾಗದ ವ್ಯಕ್ತಿ ಈ ಧರ್ಮದ ಅನುಯಾಯಿಯಾಗಲಾರ. ಭಕ್ತಿವಂತನು ಹೃದಯದಲ್ಲಿಯ ಕ್ರೂರತೆಯನ್ನು ತೊಡೆದುಕೊಂಡು ವೀರತನದಿಂದ ಕೂಡಿದ ಹದುಳಿಗತನವನ್ನು ತುಂಬಿಕೊಳ್ಳುತ್ತಾನೆ. ಗುರು ಬಸವಣ್ಣನವರು ವೀರತನದಿಂದ ಕೂಡಿದ ಹದುಳಿಗತನವನ್ನು ಹೊಂದಿದ್ದರು ಎನ್ನುವುದು ಅವರ ಈ ಕೆಳಗಿನ ವಚನದಿಂದ ಅರಿವಿಗೆ ಬರುತ್ತದೆ.

ವಚನ:
ಆನೆ ಅಂಕುಶಕ್ಕೆ ಅಂಜುವುದೆ ಅಯ್ಯಾ
ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ.
ಆನೀ ಬಿಜ್ಜಳಂಗಜುವೆನೆ ಅಯ್ಯಾ?
ಕೂಡಲ ಸಂಗಯ್ಯ,
ನೀನು ಸರ್ವಜೀವದಯಾಪಾರಿಯಾದ ಕಾರಣ
ನಿನಗಂಜುವೆನಲ್ಲದೆ.

(ಅಂಕುಶ =ಆನೆಯನ್ನು ಹತೋಟಿಯಲ್ಲಿಡಲು ಉಪಯೋಗಿಸುವ ಚೂಪಾದ ಒಂದು ಸಾಧನ; ಮಾಣದೆ = ಗೊತ್ತಿಲ್ಲದೆ; ನಖ = ಉಗುರು; ಕೂಡಲ ಸಂಗಯ್ಯ = ಲಿಂಗದೇವಾ)

ಗುರು ಬಸವಣ್ಣನವರು ಯಾರಿಗೂ ಅಂಜುವವರಲ್ಲ. ಪರಮಾತ್ಮನಿಗೆ ಮಾತ್ರ ಅಂಜುತ್ತಾರೆ. ಏಕೆಂದರೆ ಲಿಂಗದೇವನು ಎಲ್ಲರನ್ನೂ ಸೃಷ್ಟಿಸಿರುವವನು ಮತ್ತು ಸರ್ವ ಜೀವಿಗಳ ಮೇಲೆ ಅಪಾರವಾದ ದಯೆಯನ್ನು ಹೊಂದಿದ್ದಾನೆ. ದಯಾಭರಿತ ಭಕ್ತಿ, ಶೌರ್ಯಪೂರಿತ ಭಕ್ತಿ ಗುರುಬಸವಣ್ಣನವರು ಮಾಡಕಲಿಸಿದ ಭಕ್ತಿಯ ವೈಶಿಷ್ಟ್ಯ.

ಭಕ್ತಿಯಿಂದ ವ್ಯಕ್ತಿಯಲ್ಲಿರುವ ದುರ್ಗುಣ, ದುರ್ನಡತೆ ಮತ್ತು ದುಷ್ಟ ಸ್ವಾಭಾವಗಳು ಮೆಲ್ಲಮೆಲ್ಲನೆ ಮಾಯವಾಗುತ್ತವೆ.

ವಚನ:
ವಾಸನೆ ಕಾರಣ ನೊಣವಿನ ಮಲ ಜೇನುತುಪ್ಪವೆಂದೆನಿಸಿತ್ತು,
ಪರಿಮಳ ಕಾರಣ ಕೋಣನ ಮಾಂಸ ವಾಣಿಜ್ಯತೆ ಇಂಗು ಎನಿಸಿತ್ತಯ್ಯಾ,
ಭಕ್ತಿ ಕಾರಣ ಎನ್ನಲುಳ್ಳ ಅವಗುಣ ಹಿಂಗಿತ್ತು ಕಾಣಾ,
ಕೂಡಲಸಂಗಯ್ಯ.
(ಕೋಣನ ಮಾಂಸ = ಪ್ರಾಣಿಜನ್ಯವಾದ ಕೊಬ್ಬು; ಕೂಡಲಸಂಗಯ್ಯ = ಲಿಂಗದೇವಾ)

ಜೇನು ತುಪ್ಪವು ಜೇನುಹುಳುವಿನ ಮಲವಾದರೂ ಕೂಡ ಅದರಲ್ಲಿರುವ ಮಧುರವಾದ ಸುವಾಸನೆಯಿಂದಾಗಿ ಅದು ಜೇನುತುಪ್ಪವಾಗಿ ಆಹಾರವಾಗಿ ಪರಿಣಮಿಸಿದೆ. ಪ್ರಾಣಿಜನ್ಯವಾದ ಕೊಬ್ಬು (ಕೋಣನ ಮಾಂಸ) ದುರ್ವಾಸನೆ ತುಂಬಿದ ಮಾಂಸದಿಂದ ತೆಗೆದರೂ ಅದರಲ್ಲಿರುವ ಪರಿಮಳದಿಂದ ಅದು ಇಂಗು ಎನಿಸಿಕೊಳ್ಳುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಅವಗುಣಗಳೆಂಬ ದುರ್ವಾಸನೆ ಭಕ್ತಿಯೆಂಬ ಪರಿಮಳದಿಂದ ದೂರವಾಗುತ್ತದೆ. ಅದಕ್ಕಾಗಿ ವ್ಯಕ್ತಿ ಭಕ್ತಿವಂತನಾಗಬೇಕು. ಭಕ್ತಿಯೇ ಲಿಂಗಾಯತ ಧರ್ಮದ ತಳಹದಿ. ಭಕ್ತಿಯಿಲ್ಲದೆ ವ್ಯಕ್ತಿಯಿಂದ ಯಾವುದೇ ರೀತಿಯ ಸಮಾಜ ಪರಿವರ್ತನೆ ಸಾಧ್ಯವಿಲ್ಲ. ಭಕ್ತಿವಂತರು ಮಾತ್ರ ಯಾರನ್ನೂ ದ್ವೇಷಿಸದೇ ಎಲ್ಲರನ್ನೂ ಇಂಬಿಟ್ಟುಕೊಳ್ಳುವರು. ಅದಕ್ಕಾಗಿಯೇ ಭಕ್ತಿಯಿಲ್ಲದವರನ್ನು ಲಿಂಗದೇವನು ಒಲ್ಲನು ಎಂದು ಈ ಕೆಳಗಿನ ವಚನದಲ್ಲಿ ಹೇಳಿದ್ದಾರೆ.

ವಚನ:
ಸದಾಚಾರ ಸದ್ಭಕ್ತಿಯಿಲ್ಲದವರನೊಲ್ಲನಯ್ಯಾ,
ಅವರಾರಾಧನೆ ದಂಡ.
ನಿಚ್ಚ ನಿಚ್ಚ ಪ್ರಾಯಶ್ಚಿತ್ತರನು ಒಲ್ಲ
ಕೂಡಲಸಂಗಯ್ಯ , ಭೂಮಿಭಾರಕರ.
(ಆರಾಧನೆ=ಪೂಜೆ; ಕೂಡಲಸಂಗಯ್ಯ = ಲಿಂಗದೇವಾ)

ಭಕ್ತಿಯೆನ್ನುವುದೂ ಕೂಡ ಒಂದು ಸಂಪತ್ತು. ಅದು ಒಂದು ನಿಧಿ ಇದ್ದ ಹಾಗೆ ಅಂತಹ ಭಕ್ತಿಯೆಂಬ ನಿಧಾನ ಪಡೆಯಲು ಕಣ್ಣಿಗೆ ಶಿವ ಪ್ರೇಮ (ಸಕಲ ಜೀವಿಗಳ ಮೇಲಿನ ಪ್ರೇಮ ದಯೆ) ವೆಂಬ ಅಂಜನ ಕಣ್ಣಿಗೆ ಹಚ್ಚಿಕೊಳ್ಳಬೇಕು. ಸಕಲರನ್ನೂ ಪ್ರೀತಿ ಪ್ರೇಮದಿಂದ ಆದರಿಸುವ ಗುಣ ಇದ್ದವರಲ್ಲಿ ಮಾತ್ರ ಭಕ್ತಿಯಳವಡುತ್ತದೆ.

ವಚನ:
ಭಕ್ತಿಯೆಂಬ ನಿಧಾನವ ಸಾಧಿಸುವಡೆ
ಶಿವಪ್ರೇಮವೆಂಬ ಅಂಜನವನಚ್ಚಿಕೊAಬುದು,
ಭಕ್ತನಾದವಂಗೆ ಇದೇ ಪಥವಾಗಿರಬೇಕು.
ನಮ್ಮ ಕೂಡಲಸಂಗನ ಶರಣರ ಅನುಭಾವ ಗಜವೈದ್ಯ.
(ನಿಧಾನ = ಭೂಮಿಯಲ್ಲಿ ಹುದುಗಿದ ಸಂಪತ್ತು; ಶಿವಪ್ರೇಮ = ಲಿಂಗದೇವನ ಭಕ್ತಿ; ಅಂಜನ= ಭೂಮಿಯಲ್ಲಿರುವ ನಿಧಾನ ಕಾಣಲು ಕಣ್ಣಿಗೆ ಹಚ್ಚಿಕೊಳ್ಳುವ ಕಾಡಿಗೆ; ಕೂಡಲ ಸಂಗ = ಲಿಂಗದೇವಾ
)

ಭಕ್ತಿವಂತರು ಮಾತ್ರ ಅನುಭಾವಿಗಳಾಗುತ್ತಾರೆ. ಅಂತಹ ಅನುಭಾವಿಗಳ ಅನುಭಾವ ಅಷ್ಟಮದಗಳೆಂಬ ಮತ್ತೇರಿದ ಆನೆಯನ್ನು ಸಾಧುಗೊಳಿಸಬಲ್ಲ ಗಜವೈದ್ಯನಾಗಿ ಕಾರ್ಯ ಮಾಡುತ್ತದೆ.
ಹೀಗೆ ಬಸವ ಜಯಂತಿಯ ಆಚರಣೆಯು ಪ್ರತಿಯೊಬ್ಬರ ಮನದಲ್ಲಿ ಭಕ್ತಿ ಮತ್ತು ಪ್ರೀತಿಯ ಕಂಪನಗಳನ್ನುಂಟು ಮಾಡಲಿ.

ಕೆಲವರು ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರತಿಷ್ಠೆಗಾಗಿ, ಸ್ಪರ್ಧೆಗಾಗಿ ಮಾಡುತ್ತಾರೆ. ಕಾರ್ಯಕ್ರಮದಲ್ಲಿ ಜ್ಞಾನದಾಸೋಹಕ್ಕಿಂತ ತಮ್ಮ ಅಹಂಮ್ಮಿನ ಪ್ರದರ್ಶನವೇ ಎದ್ದು ಕಾಣುತ್ತಿರುತ್ತದೆ. ಇಂತಹ ಕಾರ್ಯಕ್ರಮಗಳು ಯಾವುದೇ ಜ್ಞಾನವನ್ನು ಕೊಡುವುದಿಲ್ಲ. ಬಸವ ಜಯಂತಿ ಕಾರ್ಯಕ್ರಮ ಮಾಡಲು ಸಾರ್ವಜನಿಕರಿಂದ ಭಕ್ತರಿಂದ ಕಾಣಿಕೆ ಸಂಗ್ರಹ ಮಾಡಿ ಯಾವುದೇ ಜ್ಞಾನದಾಸೋಹ ಮಾಡದಿದ್ದರೆ ಅದು ಎಂತಹ ಕಾರ್ಯಕ್ರಮ? ಗುರು ಬಸವ ಜಯಂತಿ ಅವರಿವರನ್ನು ತೆಗಳಿ ತನ್ನನ್ನು ಹೊಗಳಿಕೊಳ್ಳುವಂತಹ ಆತ್ಮಸ್ತುತಿ ಪರನಿಂದೆಯ ಕಾರ್ಯಕ್ರಮವಾಗದಿರಲಿ.

ಗುರು ಬಸವಣ್ಣನವರು ಸದ್ಗುಣ ಸುಜ್ಞಾನ ಮತ್ತು ಸದ್ಭಕ್ತಿ ಸದ್ವರ್ತನೆ ಸದಾಚಾರ ಸತ್ ಚಿಂತನೆಗಳ ಪ್ರತಿರೂಪ. ಆದ್ದರಿಂದ ಗುರು ಬಸವಣ್ಣನವರ ಜಯಂತಿ ಆಚರಣೆ ಸಮಾಜದಲ್ಲಿ ಸುಜ್ಞಾನ ಸದ್ಭಕ್ತಿಗಳನ್ನು ಬಿತ್ತಿ ಮರ್ತ್ಯಲೋಕವನ್ನು ಸುಂದರಗೊಳಿಸುವ ಪ್ರಯತ್ನಗಳಾಗಲಿ.

ಕೆಲವರು ಮಾಡುವ ಕಾರ್ಯಕ್ರಮ ಮತ್ತು ಇತ್ತೀಚಿನ ಕೆಲ ದೊಡ್ಡ ದೊಡ್ಡ ಕಾರ್ಯಕ್ರಮಗಳು ಗೀಜಗನ ಗೂಡು, ಕೋಡಗದಣಲ ಸಂಚ ಬಾದುಮನ ಮದುವೆಗಳಂತಾಗುತ್ತಿವೆ.

ವಚನ:
ಗೀಜಗನ ಗೂಡು, ಕೋಡಗದಣಲ ಸಂಚ,
ಬಾದುಮನ ಮದುವೆ, ಬಾವಲ ಬಿದ್ದಿನಂತೆ, ಜೂಜುಗಾರನ ಮಾತು.
ಬೀದಿಯ ಗುಂಡನ ಸೊಬಗು,
ಓಡಿನೊಳಗಗೆಯ ಹೊಯ್ದಂತೆ ಕಾಣಿರೋ.
ಶಿವನಾದಿ ಅಂತುವನರಿಯದವನ ಭಕ್ತಿ
ಸುಖಶೋಧನೆಗೆ ಮದ್ದ ಕೊಂಡಂತೆ, ಕೂಡಲಸಂಗಮದೇವಾ.

(ಕೋಡಗ=ಕೋತಿ; ಅಣಲು=ದವಡೆ; ಸಂಚ=ಸಂಗ್ರಹಣೆ; ಬಾದುಮ=ಗೊಂಬೆ; ಬಾವಲ=ಬಾವಲಿ; ಓಡು=ಹೆಂಚು; ಅಗೆ=ಸಸಿ; ಶಿವ=ಲಿಂಗದೇವ; ಕೂಡಲ ಸಂಗಮದೇವಾ=ಲಿಂಗದೇವಾ)

ಗೀಜಗವೆನ್ನುವ ಪಕ್ಷಿ ಬಹು ಸುಂದರವಾಗಿ ತನ್ನ ಗೂಡನ್ನು ನೇಯುತ್ತದೆ. ಅದಕ್ಕಾಗಿ ಅದು ತುಂಬಾ ಕಷ್ಟಪಡುತ್ತದೆ. ಹಾಗೆ ಕಟ್ಟಿದ ಗೂಡು ಅದು ತನ್ನ ಹೆಂಡತಿ ಮಕ್ಕಳಿಗೆ ಸಾಕಲಿಕ್ಕಾಗುತ್ತದೆಯೇ ಹೊರತು ಅದು ಮಹಾಮನೆಯಾಗುವುದಿಲ್ಲ. ಅದೇರೀತಿ ಕೆಲವರ ಕಾರ್ಯಕ್ರಮಗಳ ವೇದಿಕೆಗಳು ಬಹಾಳ ಭವ್ಯವಾಗಿರುತ್ತವೆ ಆದರೆ ಅವುಗಳು ತಮ್ಮ ಆಡಂಬರ ಶ್ರೀಮಂತಿಕೆ ಪ್ರದರ್ಶನಕ್ಕೆ ಇರುತ್ತವೆಯೇ ಹೊರತು ಜ್ಞಾನದಾಸೋಹಕ್ಕೆ ಉಪಯೋಗವಾಗುವುದಿಲ್ಲ. ಕೆಲವರ ಮಠ ಪೀಠ ಪ್ರತಿಷ್ಠಾನಗಳನ್ನು ತುಂಬಾ ಚೆನ್ನಾಗಿ ಕಟ್ಟಿಕೊಂಡಿರುತ್ತಾರೆ. ಅವುಗಳು ತಾನು ಮತ್ತು ತನ್ನವರಿಗೆ ಉಪಯೋಗವಾಗುತ್ತವೆಯೇ ಹೊರತು. ಶರಣರಿಗೆ ಮಹಾಮನೆಗಳಾಗಿರುವುದಿಲ್ಲ.

ಕೋತಿಗೆ ಜಾಸ್ತಿ ಆಹಾರ ಸಿಕ್ಕಾಗ ಅದನ್ನು ತನ್ನ ದವಡೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಹೀಗೆ ಸಂಗ್ರಹಿಸಲ್ಪಟ್ಟ ಆಹಾರ ತಾನು ಮಾತ್ರ ಉಪಯೋಗಿಸುತ್ತದೆಯೇ ಹೊರತು, ದಾಸೋಹಕ್ಕಾಗಿಯಾಗಲೀ ಇತರರ ಹಸಿವೆಯನ್ನು ತಣಿಸಲು ಉಪಯೋಗಿಸುವುದಿಲ್ಲ. ಅದೇ ರೀತಿ ಕೆಲವರು ಬಸವ ಜಯಂತಿ ಮಾಡುತ್ತೇನೆ, ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು ಎಂದು ಹೇಳಿ ಸಮಾಜದ ಭಕ್ತರಿಂದ ಅತಿಯಾದ ಕಾಣಿಕೆ ಸಂಗ್ರಹ ಮಾಡುತ್ತಾರೆ ಮತ್ತು ಅದನ್ನು ತನಗಾಗಿ ತನ್ನವರಿಗಾಗಿ ಕೂಡಿಡುತ್ತಾರೆಯೇ ಹೊರತು ಸಮಾಜದ ಭಕ್ತರ ಸೌಕರ್ಯಕ್ಕಾಗಿ ಉಪಯೋಗಿಸುವುದಿಲ್ಲ. ಅಲ್ಲಿ ಜ್ಞಾನ ದಾಸೋಹ ನಡೆಯುವುದಿಲ್ಲ ಬರೀ ಹಾರ ತುರಾಯಿ ಬಿರುದು ಬಾವಲಿ ಪೀಠಾರೋಹಣ, ಇತರರನ್ನು ತೆಗಳವುದು ಇದೇ ನಡೆಯುತ್ತದೆ. ಅಪಾರ ಹಣ, ದವಸ ಧಾನ್ಯ ಸಂಗ್ರಹ ಮಾಡಿ ಭಕ್ತರಿಗೆ ಅಲ್ಪ ದಾಸೋಹ ಮಾಡಿ ಉಳಿದಿದ್ದನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿ ಮತ್ತಷ್ಟು ಧನ ಸಂಗ್ರಹ ಮಾಡುತ್ತಾರೆ. ಇದು ಕೋಡಗ ತನ್ನ ದವಡೆಯಲ್ಲಿ ಆಹಾರ ಸಂಗ್ರಹಿಸಿಟ್ಟುಕೊಂಡಂತೆ.

ಗೊಂಬೆಗಳ ಮದುವೆಯಿಂದ ಯಾರಿಗೂ ಸುಖವಿಲ್ಲ ಮತ್ತು ಅಲ್ಲಿ ಯಾರಿಗೂ ಊಟ/ಪ್ರಸಾದ ಕೊಡುವುದಿಲ್ಲ. ಹಾಗೆಯೇ ಕೆಲವರು ಆಚರಣೆ ಮಾಡುವ ಬಸವ ಜಯಂತಿಗಳು ನಿಜವಾದ ಮದುವೆಯಂತಾಗದೆ ಗೊಂಬೆಗಳ ಮದುವೆಯಂತೆ ಇರುತ್ತವೆ. ಎತ್ತುಗಳ ಮೆರವಣಿಗೆಯಿಂದ ಕೂಡಿರುತ್ತವೆ. ಅಲ್ಲಿ ಗುರುಬಸವಣ್ಣನವರ ನಿಜವಾದ ತತ್ತ್ವಗಳ ಚಿಂತನೆಯಾಗುವುದಿಲ್ಲ. ವಚನಗಳನನ್ನು ಮತ್ತು ಗುರು ಬಸವಣ್ಣನವರ ತತ್ತ್ವಗಳನ್ನು ಹೇಳಿದಂತೆ ಮಾಡುತ್ತಾರೆ ಆದರೆ ಅವುಗಳು ಅವರಲ್ಲಿ ಅಳವಟ್ಟಿರುವುದಿಲ್ಲ. ತನ್ನಲ್ಲೇ ಅಳವಡದ ತತ್ತ್ವ ಬೋಧನೆ ಇತರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇನ್ನು ಕೆಲವರಂತೂ ಗುರು ಬಸವ ಜಯಂತಿಯ ಸಭೆಯಲ್ಲೂ ಗಣಪತಿ ಸ್ತೋತ್ರ ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಾರೆ. ವಚನಗಳು ಅವರ ಬಾಯಿಯಲ್ಲಿ ಬರುವುದೇ ಇಲ್ಲ. ಗೊಂಬೆಗಳ ಮದುವೆ ಮಾಡಿದಂತೆ ಇವರ ಭಾಷಣಗಳಿರುತ್ತವೆ. ಆಡುವ ಮಾತಿಗೂ ಬಸವ ಜಯಂತಿಗೂ ಯಾವುದೇ ಸಂಬಂಧವೇ ಇರುವುದಿಲ್ಲ.

ಜೂಜುಗಾರನ ಮಾತು ನಂಬಲರ್ಹವಾಗಿರುವುದಿಲ್ಲ. ಅದೇ ರೀತಿ ಅನುಭಾವ ಮತ್ತು ಭಕ್ತಿಯಳವಡದ ಜ್ಞಾನಿಗಳಿಂದ ಭಾಷಣಗಳನ್ನು ಮಾಡಿಸುತ್ತಿರುತ್ತಾರೆ. ಇಂತಹವರ ಮಾತುಗಳನ್ನು ಕೇಳಿ ಆಮೇಲೆ ಜನ ತಾನೆ ಲಿಂಗ ಧರಿಸಿಲ್ಲ, ವಿಭೂತಿ ರುದ್ರಾಕ್ಷಿ ಧರಿಸಿಲ್ಲ ಲಿಂಗಾಯತ ಧರ್ಮದ ಬಗ್ಗೆ ಮಾತಾಡುತ್ತಾರೆ ಎಂದು ಹಿಂದೆ ಆಡಿಕೊಳ್ಳುವುದನ್ನು ನಾನು ಅನೇಕ ಬಾರಿ ಕೇಳಿದ್ದೇನೆ. ಇಂಥವರನ್ನು ಕಾರ್ಯಕ್ರಮಕ್ಕೆ ಕರೆಯುವವರಿಗೂ ಬಂದ ಭಕ್ತರಿಗೆ ಜ್ಞಾನ ಕೊಡಬೇಕು ಎಂಬ ಹಂಬಲ ಇರುವುದಿಲ್ಲ. ಮಠ ಪೀಠ ಪ್ರತಿಷ್ಠಾನಧೀಶರು ಭಕ್ತರಿಗೆ ಕೇವಲ ಮನೋರಂಜನೆ ನೀಡಿ, ಆದಷ್ಟು ಅವರನ್ನು ಜ್ಞಾನದಿಂದ ವಂಚನೆ ಮಾಡುವ ಉದ್ದೇಶ ಹೊಂದಿರುತ್ತಾರೆ.

ಕೆಲವು ಬೀದಿಯ ಗುಂಡರು ತುಂಬಾ ಫ್ಯಾಶನ್ ಮಾಡಿಕೊಂಡು ಓಡಾಡುತ್ತಿರುತ್ತಾರೆ. ಅಂಥವರಿಗೆ ಯಾರೂ ಕರೆದು ಗೌರವ ಕೊಡುವುದಿಲ್ಲ. ಅವರು ತಮ್ಮಷ್ಟಕ್ಕೆ ತಾವೇ ದೊಡ್ಡವರು ಎಂದು ಭಾವಿಸಿರುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳಲ್ಲೂ ಕೆಲವರ ವರ್ತನೆ ಹೀಗೇ ಇರುತ್ತದೆ. ಎಲ್ಲದರಲ್ಲೂ ಸುಮ್ಮನೇ ಮೂಗು ತೂರಿಸುತ್ತಿರುತ್ತಾರೆ.

ಇಂತಹ ಮೇಲಿನ ವಿಚಾರಗಳು ಹೆಂಚಿನೊಳಗೆ ಹಣ್ಣಿನ ಸಸಿ ನೆಟ್ಟ ಹಾಗಾಗುತ್ತದೆ. ಅದು ಕೆಳಗೆ ಬೇರು ಬಿಡುವುದಿಲ್ಲ ಮೇಲೆ ಫಲ ಕೋಡುವುದಿಲ್ಲ. ಕೆಲವರ ಮಾತುಗಳು ಕಾರ್ಯಕ್ರಮಗಳು ಹೀಗೆಯೇ ಇರುತ್ತವೆ. ತಮ್ಮಲ್ಲಿ ಸದ್ಭಕ್ತಿ ಮತ್ತು ಸದಾಚಾರವೆಂಬ ಬೇರು ಆಳವಾಗಿ ಬಿಟ್ಟಿರುವುದಿಲ್ಲ ಮತ್ತು ಅವರ ಬೋಧನೆ ಯಾರಿಗೂ ಫಲ ಕೊಡುವುದಿಲ್ಲ.

ದೇವರ ನೆಲೆಕಲೆಗಳನ್ನು ಅರಿಯದೇ, ಹೃದಯದಲ್ಲಿ ಹದುಳಿಗತನ ತುಂಬಿದ ಭಕ್ತಿವಂತನಾಗದಿದ್ದರೆ. ಮಾಡುವ ಕ್ರಿಯೆಗಳೆಲ್ಲವೂ ಸುಖ ಹೊಂದಲು ಮದ್ದನ್ನು ಕುಡಿದಂತೆ, ಆನಂದಕ್ಕಾಗಿ ಔಷಧಿಯನ್ನು ಸೇವಿಸಿದಂತೆ ಆಗುತ್ತದೆ.

ಗುರು ಬಸವ ಜಯಂತಿ ಆಚರಣೆ ಕೇವಲ ತೋರಿಕೆ ಗೆ ಆಗದೆ ಭಕ್ತಿಯ ಕಂಪನಗಳು ಗುರುಬಸವ ಜಯಂತಿಯ ಆಚರಣೆಯಲ್ಲಿ ಹೊರಹೊಮ್ಮಲಿ ಆಗ ಯಾರು ಬೇಕಾದರೂ ಗುರು ಬಸವಣ್ಣನವರ ಶ್ರೀಪಾದವ ಕಂಡು ಶರಣೆಂದು ಬದುಕುತ್ತಾರೆ, ಧನ್ಯರಾಗುತ್ತಾರೆ. ಅದಕ್ಕಾಗಿ ನಾವು ಮಾಡುವ ಕಾರ್ಯಕ್ರಮಗಳು ಮತ್ತು ಗುರು ಬಸವಣ್ಣನವರ ಜಯಂತಿಯ ಆಚರಣೆ, ಭಕ್ತಿ ಪ್ರಧಾನವಾಗಿರಲಿ, ಅನುಭಾವಪೂರ್ಣವಾಗಿರಲಿ, ಗುರು ಬಸವಣ್ಣನವರನ್ನು ಏಕವಚನದಲ್ಲಿ ಸಂಬೋಧಿಸದಂತೆ ನಡೆಯಲಿ. ಗುರು ಬಸವಣ್ಣನವರ ತತ್ತ್ವ ಸಂದೇಶಗಳು ಆ ಕಾಯ್ರಕ್ರಮಗಳಲ್ಲಿ ಮೊಳಗಲಿ, ಎಂದು ಆಶಿಸುತ್ತ ಮತ್ತೊಮ್ಮೆ ಎಲ್ಲರಿಗೂ ೮೯೨ನೆಯ ಗುರು ಬಸವ ಜಯಂತಿಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಶರಣು ಶರಣಾರ್ಥಿಗಳು

ಸಚ್ಚಿದಾನಂದ ಪ್ರಭು ಚಟ್ನಳ್ಳಿ
ಹಿರಿಯ ಅಭಿಯಂತರರು ನೈಋತ್ಯ ರೈಲ್ವೆ
ಬೆಂಗಳೂರು, ಮೊ:9886694454

About Mallikarjun

Check Also

ರಾಜೂರನಲ್ಲಿಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಬಾಬುಜಗಜೀವನ್ ರಾಮ್ ಜಯಂತಿ ಆಚರಣೆ.

Dr. B.R. Ambedkar and Dr. Babu Jagjivan Ram Jayanti celebrations in Rajur. ಮಹಾನ್ ನಾಯಕರನ್ನು ಕೇವಲ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.