The Minister personally visited the Banantis and inquired about their well-being
ರಾಯಚೂರ ಗ್ರಾಮೀಣ ಪ್ರದೇಶದಲ್ಲಿ ಸಚಿವರ ಸಂಚಾರ
* ಮಾನ್ವಿ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ
ರಾಯಚೂರ ಜನವರಿ 22 (ಕ.ವಾ.): ರಾಯಚೂರ ಜಿಲ್ಲೆಯ ಪ್ರವಾಸದಲ್ಲಿದ್ದ ಆರೋಗ್ಯ ಸಚಿವರಾದ ದಿನೇಶ ಗುಂಡೂರಾವ್ ಅವರು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಅವರೊಂದಿಗೆ ಜನವರಿ 22ರಂದು ರಾಯಚೂರ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಮಾನ್ವಿ ತಾಲೂಕಿಗೆ ಭೇಟಿ ನೀಡಿದರು.
ಪೂರ್ವ ನಿಗದಿಯಂತೆ ಬೆಳಗ್ಗೆಯೇ ಮಾನ್ವಿ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಆಸ್ಪತ್ರೆಯಲ್ಲಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಇದೆ ವೇಳೆ ಸಚಿವರು, ಆಸ್ಪತ್ರೆಯ ವಾರ್ಡ್‌ಗಳಿಗೆ ಸಂಚರಿಸಿ ಬಾಣಂತಿಯರ ಆರೋಗ್ಯ ವಿಚಾರಿಸಿದರು.
ಪ್ರತಿ ದಿನ ನಿಮಗೆ ಸರಿಯಾದ ರೀತಿಯಲ್ಲಿ ಊಟ ನೀಡುತ್ತಾರೆಯೆ? ಚಿಕಿತ್ಸೆ ಮತ್ತು ಔಷಧಿಯನ್ನು ಸರಿಯಾಗಿ ಕೊಡುತ್ತಾರಾ? ಎಂದು ಕೇಳಿ ಬಾಣಂತಿಯರ ಯೋಗಕ್ಷೇಮ ವಿಚಾರಿಸಿದರು.
ಆಸ್ಪತ್ರೆಯಲ್ಲಿ ನಮಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿದೆ. ಎಲ್ಲ ವೈದ್ಯರು ನಮಗೆ ಉತ್ತಮ ಚಿಕಿತ್ಸೆ ಕೊಡುತ್ತಾರೆ. ರೋಗಿಗಳಿಗೆ ಸ್ಪಂದಿಸುತ್ತಾರೆ ಎಂದು ಇದೆ ವೇಳೆ ಬಾಣಂತಿಯರು ಸಚಿವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಆಸ್ಪತ್ರೆಯಲ್ಲಿನ ಅಲ್ಟ್ರಾ ಸೌಂಡ್ ಸೇರಿದಂತೆ ಇತರೆ ಉಪಕರಣಗಳನ್ನು ಪರಿಶೀಲಿಸಿದ ನಂತರ ಸಚಿವರು ಆಪರೇಷನ್ ಕೇರ್ ವಾರ್ಡ್ ನಲ್ಲಿರುವ ರೋಗಿಗಳಿಗೆ ಹಣ್ಣು ನೀಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.
ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ, ಲಭ್ಯವಿರುವ ಹಾಸಿಗೆಗಳ ಸಂಖ್ಯೆ ಹಾಗೂ ವೈದ್ಯರ ಲಭ್ಯತೆ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸಂಖ್ಯೆಯ ಬಗ್ಗೆ ಸ್ಥಳದಲ್ಲಿದ್ದ ವೈದ್ಯಾಧಿಕಾರಿಗಳಿಂದ
ಸಚಿವರು ಮಾಹಿತಿ ಪಡೆದುಕೊಂಡರು.
ರಾತ್ರಿ ವೇಳೆಯಲ್ಲೂ ಚಿಕಿತ್ಸೆ ನೀಡಿ: ಯಾವುದೇ ಗ್ರಾಮದಿಂದ ರಾತ್ರಿ ವೇಳೆಯಲ್ಲಿ ತುರ್ತು ಚಿಕಿತ್ಸೆ ಕೋರಿ ಬರುವ ಬಾಣಂತಿಯರಿಗೆ ವೈದ್ಯರು ಮತ್ತು ಆಸ್ಪತ್ರೆಯಲ್ಲಿನ ಸಿಬ್ಬಂದಿ ತಕ್ಷಣವೇ ಸ್ಪಂದನೆ ನೀಡಬೇಕು. ಯಾವುದೇ ನೆಪ ಹೇಳದೇ ಬೇರೆಡೆ ಕಳುಹಿಸಬಾರದು.
ಪ್ರಥಮ ಹಂತದ ಚಿಕಿತ್ಸೆಗೆ ಕ್ರಮವಹಿಸಿ, ಹೆಚ್ಚಿನ ಚಿಕಿತ್ಸೆಯ ಅವಶ್ಯವಿದ್ದರೆ ಮಾತ್ರ ಬೇರೆಡೆ ಕಳುಹಿಸಲು ಕ್ರಮವಹಿಸಬೇಕು ಎಂದು ಸಚಿವರು ಇದೆ ವೇಳೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಚಿವರಿಗೆ ಮನವಿ:
ನರ್ಸ್ ಸಿಬ್ಬಂದಿಯ ವೇತನ ಹೆಚ್ಚಳ ಮಾಡುವಂತೆ ಇದೆ ವೇಳೆ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ವೇತನ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಖಾಲಿ ಹುದ್ದೆಗಳ ಶೀಘ್ರ ಭರ್ತಿಗೆ ಕ್ರಮ: ಮಾನ್ವಿ ಸೇರಿದಂತೆ ಕೆಲವು ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ಕೊರತೆ ಇರುವುದು ಗಮನಕ್ಕೆ ಬಂದಿದೆ. ಶ್ರೀಘದಲ್ಲಿ ಭರ್ತಿಗೆ ಕ್ರಮ ವಹಿಸಲಾಗುವುದು. ಆಸ್ಪತ್ರೆಯಲ್ಲಿ ತುರ್ತ ಚಿಕಿತ್ಸೆಗೆ ಅನುಕೂಲವಾಗುವಂತೆ ಅವಶ್ಯಕತೆ ಇರುವ ಕಡೆಗಳಲ್ಲಿ ನಿಯಮಾನುಸಾರ ಹೊರಗುತ್ತಿಗೆ ಆಧಾರದ ಮೇಲೆ
ಸಿಬ್ಬಂದಿ ಪಡೆಯಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಹಂಪಯ್ಯ ನಾಯಕ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ ಸಿಇಓ
ರಾಹುಲ್ ತುಕಾರಾಮ ಪಾಂಡ್ವೆ,
ಮಾನ್ವಿ ಪುರಸಭೆ ಅಧ್ಯಕ್ಷೆ ಲಕ್ಷ್ಮೀ ವೆಂಕಟೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುರೇಂದ್ರಬಾಬು, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿ ಡಾ. ಶರಣಬಸವರಾಜ್, ಉಪ ಆರೋಗ್ಯಾಧಿಕಾರಿ ಅರವಿಂದ್ ಮತ್ತು ಸಹಾಯಕ ಆರೋಗ್ಯ ಅಧಿಕಾರಿ ಶರಣಪ್ಪ ಇದ್ದರು.