Breaking News

“ವಿಶ್ವ ರೈತ ಚೇತನ ಪ್ರೊ. ಎಂಡಿಎನ್”

“Vishwa Raitha Chetana Prof. mdn”

ಜಾಹೀರಾತು

‘ಪ್ರೊಫೆಸರ್’ ಅಂದ್ರೆ ‘ಎಂಡಿಎನ್’ ಅನ್ನುವಷ್ಟರ ಮಟ್ಟಿಗೆ “ಶ್ರೀ ಮಹಾಂತ ದೇವರು ನಂಜುಂಡಸ್ವಾಮಿ” ಯವರು ಜನಾನುರಾಗಿಯಾಗಿದ್ದರು.
ಪ್ರೊಫೆಸರ್ ಎಂಡಿಎನ್ ೧೯೩೬ ಫೆಬ್ರವರಿ ೧೩ ರಂದು ಮೈಸೂರಿನ ತಿರುಮಕೂಡಲು ನರಸೀಪುರದ ಮಾಡ್ರಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀ ಮಹಾಂತ ದೇವರು ಆಗಿನ ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರಾಗಿದ್ದರು. ತಾಯಿ ಶ್ರೀಮತಿ ರಾಜಮ್ಮಣ್ಣಿ. ಮೈಸೂರಿನ ಹಾರ್ಡ್ವಿಕ್ ಶಾಲೆಯಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ. ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯಟ್. ೧೯೫೪ ರಲ್ಲಿ ಮೈಸೂರು ವಿವಿಯಿಂದ ಬಿಎಸ್ಸಿ ಪದವಿ. ೧೯೫೬ ರಲ್ಲಿ ಕಾನೂನು ಪದವಿ. ೧೯೬೧ ರಲ್ಲಿ ಕಾನೂನು ವಿವಿಯಿಂದ ಪ್ರಥಮ ದರ್ಜೆಯಲ್ಲಿ ಎಲ್ ಎಲ್ ಎಂ ಪದವಿ.
೧೯೬೨-೬೨ ರಲ್ಲಿ ನೆದರ್ ಲ್ಯಾಂಡಿನ `ಹೇಗ್ ಅಕಾಡೆಮಿ ಆಫ್ ಇಂಟರ್ ನ್ಯಾಷನಲ್ ಲಾ’ ಸಂಸ್ಥೆಯಲ್ಲಿ ಫೋಡರ್ ಫೌಂಡೇಷನ್ ಸ್ಕಾಲರ್ಶಿಫ್ ಪಡೆದು ಪೋಸ್ಟ್ ಮಾಸ್ಟರ್ ಸಂಶೋಧನೆ ಮುಗಿಸಿದರು. ಪಿಎಚ್ಡಿ ಮುಗಿಯುವ ಹಂತದಲ್ಲಿ ಮಾರ್ಗದರ್ಶಕರೊಂದಿಗೆ ಉಂಟಾದ ತಾತ್ವಿಕ ಭಿನ್ನಾಭಿಪ್ರಾಯಗಳಿಂದಾಗಿ ಅಧ್ಯಯನ ಕೈಬಿಟ್ಟು ೧೯೬೫ ರಲ್ಲಿ ಭಾರತಕ್ಕೆ ವಾಪಸ್ ಬಂದರು.

ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿಯವರು ತಮ್ಮ ಕೊನೆಯ ಉಸಿರಿರುವರೆಗೂ ನಮ್ಮ ನಾಡಿನ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಅಪಾಯಕಾರಿಯಾಗಿ ಹಬ್ಬಿರುವ ಕ್ಯಾನ್ಸರಿಗೆ ಅವರು ಚಿಕಿತ್ಸೆ ನೀಡುತ್ತಿದ್ದರು. ಶೈಕ್ಷಣಿಕ ಕ್ಯಾನ್ಸರ್, ಆರ್ಥಿಕ ಕ್ಯಾನ್ಸರ್, ಸಾಂಸ್ಕೃತಿಕ, ಧಾರ್ಮಿಕ, ಕೃಷಿ ಅಥವಾ ಸಾಮಾಜಿಕ ಕ್ಷೇತ್ರದ ಕ್ಯಾನ್ಸರ್ ಗಳಾಗಲಿ ಅವಕ್ಕೆಲ್ಲ ತಮ್ಮ ಅಸಾಧಾರಣ ಜ್ಞಾನದ ಮೂಲಕ ಶಾಕ್ ಟ್ರೀಟ್ ಮೆಂಟ್ ಕೊಡುತ್ತಿದ್ದರು. ಹೀಗೂ ಯೋಚನೆ ಮಾಡಬಹುದೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತಿದ್ದರು. ರಾಜ್ಯಾಂಗ, ನ್ಯಾಯಾಂಗ, ಆಡಳಿತಾಂಗಗಳಲ್ಲಿರುವವರು ನಾಗರಿಕರಿಗೆ ಉಪಕಾರಿಯಲ್ಲದ ತೀರ್ಮಾನಗಳನ್ನು ತೆಗೆದುಕೊಂಡರೆ ಈ ಚಿಕಿತ್ಸಕ ಜಾಗೃತರಾಗುತ್ತಿದ್ದರು. ಅತಿ ಶೀಘ್ರದಲ್ಲಿಯೇ ಅಪಾಯವನ್ನು ತಡೆಯುವ ತಮ್ಮ ಯೋಜನೆಗಳನ್ನು ರೂಪಿಸುತ್ತಿದ್ದರು. ತಮ್ಮ ಕೃಶ ಶರೀರಕ್ಕೊದಗಿದ್ದ ಕ್ಯಾನ್ಸರಿನ ಚಿಕಿತ್ಸೆಗೆ ಇಂಗ್ಲಿಷ್ ಔಷಧವನ್ನು ನಿರಾಕರಿಸಿ ಆಯುರ್ವೇದ, ಹೋಮಿಯೋಪತಿ ಮುಂತಾದ ದೇಸಿ ಚಿಕಿತ್ಸೆಗಳಿಗೆ ಅವರು ಮೊರೆ ಹೋದರು. ಜೀವನವಿಡೀ ಸ್ವದೇಶಿ ಪ್ರಚಾರ ಮಾಡಿದ್ದ ಎಂಡಿಎನ್, ಸಾವು ಬಂದೆರಗಿ ಪ್ರತಿಕ್ಷಣ ಕುಕ್ಕಿ ಘಾಸಿಗೊಳಿಸುತ್ತಿದ್ದರೂ ಹಟಮಾರಿಯಾಗಿದ್ದರು. ಅಲೋಪತಿಯನ್ನು ನಿಷ್ಠುರವಾಗಿ ನಿರಾಕರಿಸಿಬಿಟ್ಟಿದ್ದರು.
ಅವರು ತಮ್ಮ ಹಟಮಾರಿತನದಿಂದ ಎಷ್ಟನ್ನು ಸಾಧಿಸಿದರೋ ಅಷ್ಟನ್ನೂ ಕಳೆದುಕೊಂಡುಬಿಟ್ಟರು. ತಾವು ಅತಿಯಾಗಿ ಪ್ರೀತಿಸುತ್ತಿದ್ದ ಬದುಕನ್ನೂ ಕಳೆದುಕೊಂಡರು. ಯಾವ ವಿಚಾರದಲ್ಲೂ ಅವರು ರಾಜಿ ಮಾಡಿಕೊಳ್ಳುವುದನ್ನು ಕಲಿತೇ ಇರಲಿಲ್ಲ. ಅಷ್ಟೇ ಅಲ್ಲ, ತಮಗೆ ಅಂತ್ಯವಿಲ್ಲವೆಂದೇ ಅವರು ನಂಬಿ ಬಿಟ್ಟಿದ್ದರು. ಅದು ಅವರ ನಂಬಿಕೆಯಷ್ಟೇ ಆಗಿರಲಿಲ್ಲ. ಅವರನ್ನು ಬಲ್ಲ ಅನೇಕ ಗೆಳೆಯರು, ಶಿಷ್ಯರು, ಸಹಚಳವಳಿಗಾರರೆಲ್ಲರ ನಂಬಿಕೆಯಾಗಿತ್ತು.
ಆದರೆ ಎಂಡಿಎನ್ ಫೆಬ್ರವರಿ 3, 2004 ರ ಮುಂಜಾನೆ ಪ್ರೀತಿಯ ಮಗಳು ಚುಕ್ಕಿಯ ಹೆಸರು ಹೇಳುತ್ತಾ ಶಾಶ್ವತವಾಗಿ ಮಲಗಿಬಿಟ್ಟರಂತೆ. ಎಪ್ಪತ್ತರ ದಶಕವೇ ಹಾಗಿತ್ತು. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸ್ವಾತಂತ್ರ್ಯಾನಂತರದ ಭ್ರಮನಿರಸನಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಬೇಕಾದಂಥ ಕಾಲವಾಗಿತ್ತು. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಹಲವು ವಿಚಾರಶೀಲರು ಮಾತು, ಬರವಣಿಗೆಗಳಲ್ಲಿ ತೊಡಗಿದ್ದರು. ಅದೇ ಹೊತ್ತಿಗೆ ಪೊಫೆಸರ್ ಎಂಡಿಎನ್ ಜರ್ಮನಿಯಲ್ಲಿ ಕಾನೂನು ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದು ಬಂದಿದ್ದರು. ಮೈಸೂರಿನಲ್ಲಿ ‘ಸಮಾಜವಾದಿ ಯುವಜನ ಸಭಾ’ವನ್ನು ಹುಟ್ಟುಹಾಕಿ ಅದನ್ನು ಬೆಂಗಳೂರಿಗೆ ಹಬ್ಬಿಸಲು 1970 ರಿಂದಲೇ ಪ್ರಯತ್ನಶೀಲರಾಗಿದ್ದರು. ಬೆಂಗಳೂರಿನಲ್ಲಿ ಅವರ ಪಟ್ಟಶಿಷ್ಯರಾದವರು ಡಾ|| ಲಕ್ಷ್ಮೀಪತಿಬಾಬು ಮತ್ತು ಡಾ|| ರಾ ನ ವೆಂಕಟಸ್ವಾಮಿ. ಇವರಿಬ್ಬರೂ ತಮ್ಮ ವೈದ್ಯಕೀಯ ಶಿಕ್ಷಣವನ್ನು ನಿರ್ಲಕ್ಷಿಸಿ ಸಮಾಜವಾದಿ ಚಳವಳಿಗೆ ತೊಡಗಿಸಿಕೊಳ್ಳುವಷ್ಟರ ಮಟ್ಟಿಗೆ ಎಂಡಿಎನ್ ಪ್ರಭಾವಶಾಲಿಯಾಗಿದ್ದರು. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಆಗ ತಾನೇ ಓದು ಪ್ರಾರಂಭಿಸಿದ್ದ ನಮ್ಮ ಗುಂಪು ಸಹಜವಾಗಿಯೇ ಹಲವಾರು ಬಗೆಯ ಚಳುವಳಿಗಳಿಗೆ ಆಕರ್ಷಿತವಾಯಿತು. ನಮ್ಮ ಗುಂಪಿನಲ್ಲಿ ದಲಿತ ಕವಿ ಸಿದ್ಧಲಿಂಗಯ್ಯ, ಡಿ ಆರ್ ನಾಗರಾಜ್, ಕಥೆಗಾರ ಕರಿಗೌಡ ಬೀಚನಹಳ್ಳಿ, ಕಲ್ಲೂರು ಮೇಘರಾಜ, ಗಂಗಣ್ಣ ಮುಂತಾದವರಿದ್ದೆವು. ನಮ್ಮಲ್ಲೂ ಬಣಗಳಿದ್ದವು! ಮಾರ್ಕ್ಸ್‌ವಾದಿಗಳದ್ದು, ಲೋಹಿಯಾವಾದಿಗಳದ್ದು, ಗಾಂಧಿವಾದಿಗಳದ್ದು… ಹೀಗೇ. ಎಪ್ಪತ್ತರ ದಶಕದಲ್ಲಿ ನಡೆದ ಚಳುವಳಿಗಳಿಗೆ ಲೆಕ್ಕವಿಲ್ಲ. ಸಮಾಜವಾದಿ ಯುವಜನ ಸಭಾದ ಪ್ರಾರಂಭ, ವಿದ್ಯಾರ್ಥಿ, ಕಾರ್ಮಿಕರ ಚಳುವಳಿಗಳು, ಜಾತಿವಿನಾಶ ಸಮ್ಮೇಳನ, ಬರಹಗಾರರ ಕಲಾವಿದರ ಒಕ್ಕೂಟ, ಪೆರಿಯಾರ್, ದಲಿತ-ಬಂಡಾಯ ಚಳುವಳಿ, ಕೋವೂರ್ ಆಗಮನ, ತುರ್ತು ಪರಿಸ್ಥಿತಿ, ಕೇಂದ್ರದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ, ಬರೋಡ ಡೈನಮೈಟ್ ಪ್ರಕರಣ, ಆನಂತರ ಪ್ರಬಲವಾಗಿ ಬೆಳೆದ ರೈತ ಚಳವಳಿ ಇತ್ಯಾದಿ ನೂರಾರು. ಇವೆಲ್ಲ ಚಳುವಳಿಗಳ ಜೊತೆಗೆ ಜೆಪಿಯವರ ಸಂಪೂರ್ಣಕ್ರಾಂತಿ ದೇಶಾದ್ಯಂತ ಹಬ್ಬಿತು. ಕರ್ನಾಟಕದಲ್ಲಿ ನಾಟಕ ಕ್ಷೇತ್ರದ ‘ಸಮುದಾಯ’, ಹಾವನೂರು ಆಯೋಗ, ಭಾಷಾ ಚಳುವಳಿ ಇವೆಲ್ಲವುಗಳ ಪರಿಣಾಮವಾಗಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚನೆ- ಹೀಗೆ ಎಪ್ಪತ್ತರ ದಶಕ ಸಂಕ್ರಮಣ ಕಾಲವಾಗಿತ್ತು. ಇವೆಲ್ಲ ಚಳವಳಿಗಳ ಹಿಂದೆ ಒಂದಲ್ಲ ಒಂದು ರೀತಿಯಲ್ಲಿ ಪ್ರಚೋದಕ ಶಕ್ತಿಯಾಗಿದ್ದವರು ಪೊಫೆಸರ್ ನಂಜುಂಡಸ್ವಾಮಿ. ತಮ್ಮ ಪ್ರಖರ ವಿಚಾರ ಲಹರಿ, ಖಚಿತ ಅಂಕಿ ಅಂಶಗಳ ಭಾಷಣ, ಅದ್ಭುತ ಕನ್ನಡ ಭಾಷಾಬಳಕೆ, ಭಾರತದ ಜಾತಿ ವ್ಯವಸ್ಥೆ ಮತ್ತು ನ್ಯಾಯಾಂಗದ ಬಗೆಗೆ ಗಳಿಸಿದ್ದ ಪಾಂಡಿತ್ಯ, ಆಧುನಿಕ ಜೀವನ ಶೈಲಿಯ ಜೊತೆಗೆ ಲೋಹಿಯಾ ಹಾಗೂ ಗಾಂಧೀವಾದದ ಆಳವಡಿಕೆ ಮುಂತಾದುವುಗಳಿಂದ ಯುವಕ ಯವತಿಯರು ಪ್ರೇರಣೆ ಪಡೆದ ಅವರ ಹಿಂದೆ ಹಿಂದೆ ಹೋಗುತ್ತಿದ್ದರು..

ಎಂಡಿಎನ್ ಅಂದ್ರೆ ಸಂಚಲನ:
ಕೈಯಲ್ಲೊಂದು ಉರಿಯುವ ಸಿಗರೇಟು, ಹೆಗಲ ಮೇಲೊಂದು ಹಸಿರು ಶಾಲು, ಕುರುಚಲು ಗಡ್ಡ, ನೀಳ ಕಾಯದ ಆವ್ಯಕ್ತಿ ಸರಕಾರಿ ಕಚೇರಿ ಪ್ರವೇಶಿಸಿತು ಎಂದರೆ ಅಲ್ಲಿ ಸಂಚಲನವುಂಟಾಗುತ್ತಿತ್ತು. ವಿಧಾನಸೌಧ ಪ್ರವೇಶಿಸಿದರೆ ಸ್ವತಃ ಮುಖ್ಯಮಂತ್ರಿಯೇ ಕಂಪಿಸಿಬಿಡುತ್ತಿದ್ದರು. ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರ ಹೆಸರು ಕೇಳಿದರೆ ಸಾಕು, ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಕಂಪಿಸುತ್ತಿದ್ದರು.
ಎರಡು ದಶಕಕ್ಕೂ ಹೆಚ್ಚು ಕಾಲ ಈ ನಾಡಿನ ರೈತ ಸಮುದಾಯದ ಧ್ವನಿಯಾಗಿದ್ದ ಅವರು ಹಾಕಿಕೊಟ್ಟ ಹೋರಾಟದ ಮಾರ್ಗದಲ್ಲಿ ಈಗ ಯಾಕೋ ಕಸ ಹರಡುತ್ತಿದೆ ಎನ್ನುವ ತಳಮಳ ಎಲ್ಲರದ್ದು. 80 ರ ದಶಕದ ಆರಂಭದಲ್ಲಿ ಮಾರ್ಗದರ್ಶಕರಿಲ್ಲದೆ ತಳಮಳಿಸುತ್ತಿದ್ದ ರೈತ ಸಂಘವನ್ನು ನಂಜುಂಡಸ್ವಾಮಿ ಒಟ್ಟುಗೂಡಿಸಿ, ಅದಕ್ಕೆ ರಾಜ್ಯ ರೈತ ಸಂಘ ವೆಂದು ನಾಮಕರಣ ಮಾಡಿ ಬೆಳೆಸಿದರು.

ಜಾಗತೀಕರಣ ದೇಶಕ್ಕೆ ಕಾಲಿಡುವ ಮೊದಲೇ ಅದರ ದುಷ್ಪರಿಣಾಮಗಳ ಬಗ್ಗೆ ರೈತ ಸಮುದಾಯವನ್ನು ಎಚ್ಚರಿಸಿದ್ದರು. ಆಧುನಿಕ ಕೃಷಿ, ಕುಲಾಂತರಿ ಬೀಜಗಳು, ವಿದೇಶಿ ಕೀಟನಾಶಕಗಳು ಕಾಲಿಟ್ಟರೆ ನಾವು ಬೆಳೆದ ಬೆಳೆಗೆ ವಿದೇಶದವರೇ ಬೆಲೆ ನಿಗದಿ ಮಾಡಬೇಕಾಗುತ್ತದೆ. ಆದ್ದರಿಂದ ರೈತರು ಸಾಂಪ್ರದಾಯಿಕ ಕೃಷಿಗೆ ಮರಳಬೇಕು ಎಂದು ಅವರಲ್ಲಿ ಜಾಗೃತಿ ಮೂಡಿಸಿ ಎರಡು ದಶಕಕ್ಕೂ ಹೆಚ್ಚು ಕಾಲ ರೈತ ಸಮುದಾಯದ ಬೌದ್ಧಿಕ ನಾಯಕತ್ವ ವಹಿಸಿದ್ದರು.
ಹಸಿರು ಶಾಲಿನ ಹರಿಕಾರ ಎಂದೇ ಖ್ಯಾತರಾಗಿದ್ದ ಅವರನ್ನು ಹಿಟ್ಲರ್‌, ಅಹಂಕಾರಿ, ಸಿಡುಕ ಎಂದು ದ್ವೇಷಿಸಿದರಿದ್ದರು. ದ್ವೇಷಿಸುತ್ತಲೇ ಪ್ರೀತಿಸುವವರಿದ್ದರು. ಆದರೆ ಅವರಿಗಿದ್ದ ರೈತಪರ ಕಾಳಜಿಯನ್ನು ಪ್ರಶ್ನಿಸುವ ತಾಕತ್ತು ಯಾರಿಗೂ ಇರಲಿಲ್ಲ. ಕಾರಣ ಅವರ ಅಂತರಂಗದಲ್ಲಿ ಪ್ರಜ್ವಲಿಸುತ್ತಿದ್ದ ರೈತಪರ ಪ್ರೀತಿ.
ವ್ಯಕ್ತಿಯಾಬ್ಬ ರೈತ ವಿರೋಧಿ ಎಂದು ಗೊತ್ತಾದರೆ ಅವರು ಅಯಾಚಿತವಾಗಿ ಬಳಸುತ್ತಿದ್ದ ಪದ ‘ಅವಿವೇಕಿ’. ಅದು ಮಂತ್ರಿಯೇ ಇರಬಹುದು, ಮುಖ್ಯಮಂತ್ರಿಯೇ ಇರಬಹುದು.! 2001 ರಲ್ಲಿ ಸರಕಾರ ನೀರಾ ಮಾರಾಟಕ್ಕೆ ಅನುಮತಿ ನೀಡಿರಲಿಲ್ಲ. ಆಗ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಪ್ರೊಫೆಸರ್‌, 224 ಅವಿವೇಕಿಗಳು ನಮ್ಮನ್ನಾಳುತ್ತಿವೆ ಎಂದು ಇಡೀ ವಿಧಾನಸೌಧದಲ್ಲಿದ್ದವರನ್ನು ಸಾರಾಸಗಟಾಗಿ ಲೇವಡಿ ಮಾಡಿದ್ದರು. ಒಂದು ದಿನ ವಿಧಾನ ಸಭೆಯಲ್ಲಿ ಡಂಕಲ್‌ ಪ್ರಸ್ತಾವದ ಬಗ್ಗೆ ಪ್ರೊಫೆಸರ್‌ ದಾಖಲೆಗಳ ಸಮೇತ ವಿವರ ನೀಡುತ್ತಿದ್ದರು. ಇಡೀ ಸಭೆ ಏಕಚಿತ್ತದಿಂದ ಆಲಿಸುತ್ತಿತ್ತು. ನಡುವೆ ಧ್ವನಿ ಎತ್ತಿದ ಅಂದಿನ ಕೃಷಿ ಸಚಿವ, ನಮಗೂ ‘ಡೆಂಕನ್‌’ ಗೊತ್ತು ಎಂದುಬಿಟ್ಟರು. ಕೆಂಡಾಮಂಡಲವಾದ ಎಂಡಿಎನ್‌- ಅವಿವೇಕಿ, ಡೆಂಕನ್ನೂ ಅಲ್ಲ, ಲಿಂಕನ್ನೂ ಅಲ್ಲ. ಅದು ಡಂಕಲ್‌. ಸರಿಯಾಗಿ ಅಧ್ಯಯನ ಮಾಡಿ ಮಾತನಾಡು, ಎಂದು ಗದರಿದ್ದರು.
ಒಮ್ಮೆ ತುಮಕೂರು ಜಿಲ್ಲೆಯ ಹಳ್ಳಿಯಾಂದರಲ್ಲಿ ವಿದ್ಯುತ್‌ ಸಮಸ್ಯೆ ಬಗ್ಗೆ ಚರ್ಚಿಸಲು ಹೋದ ಪ್ರೊಫೆಸರ್‌ ಮೇಲೆ ಇಂಜಿನಿಯರ್‌ ಒಬ್ಬ ಎಗರಾಡಿದ್ದ. ಆತನ ಕೆನ್ನೆಗೆ ಎರಡು ಬಾರಿಸಿದರು. ಅದನ್ನೇ ದೊಡ್ಡದು ಮಾಡಿದ ಆತ ರಾಜ್ಯ ಸಂಘದ ಬೆಂಬಲ ಪಡೆದು ರೈತ ಸಂಘದ ವಿರುದ್ಧ ರಾಜ್ಯಾದ್ಯಂತ ಚಳವಳಿ ಮಾಡುವುದಾಗಿ ಘೋಷಿಸಿದ್ದರು. ಅದೇ ಸಂಜೆ ಪತ್ರಿಕಾಗೋಷ್ಠಿ ಕರೆದ ಎಂಡಿಎನ್‌ ಅಧಿಕಾರಿಗಳ ವಿರುದ್ಧ ಕಪಾಳಮೋಕ್ಷ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಘೋಷಿಸಿದರು. ಇದಕ್ಕೆ ಹೆದರಿದ ಅಧಿಕಾರಿಗಳು ತಣ್ಣಗಾದರು.
ಸವಾಲು ಎಸೆದರೆ ಅದಕ್ಕೆ ಪ್ರತಿ ಸವಾಲೊಡ್ಡುವುದು, ರೈತರ ವಿರುದ್ಧ ಸೊಲ್ಲು ಎತ್ತಿದರೆ ಅದನ್ನು ಅಡಗಿಸುವುದು ಹೇಗೆಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು.
ಸರಕಾರವೇನಾದರೂ ರೈತ ವಿರೋಧಿ ನಿಲುವು ತಾಳಿದರೆ, ಸರಕಾರದ ವಿರುದ್ಧ ಬಾರ್‌ಕೋಲು ಚಳವಳಿ, ಸಗಣಿ ಚಳವಳಿ, ಮೆಟ್ಟಿನ ಚಳವಳಿ ಆರಂಭಿಸುವುದಾಗಿ ಹೇಳಿ ನಡುಕ ಹುಟ್ಟಿಸುತ್ತಿದ್ದರು. ಚಳವಳಿಗೆ ಅವರು ಬಳಸುತ್ತಿದ್ದ ಭಾಷೆ ಅನ್ನದಾತನ ಬೆವರಿನಿಂದ ಬರುತ್ತಿತ್ತು. ಅದರಲ್ಲಿ ಕಲ್ಮಶವಿರುತ್ತಿರಲಿಲ್ಲ. ಬದಲಾಗಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಆಕ್ರೋಶ ಮಡುಗಟ್ಟಿರುತ್ತಿತ್ತು.

ಹೀಗೆ ರೈತ ಹೋರಾಟಕ್ಕೊಂದು ಹೊಸ ಭಾಷ್ಯ ಬರೆದ ನಂಜುಂಡಸ್ವಾಮಿ ರೈತರ ರಾಜ್ಯ ನಿರ್ಮಾಣದ ಬಹಳ ದೊಡ್ಡ ಕನಸು ಕಂಡಿದ್ದರು. ಅದು ನನಸಾಗುವ ಮೊದಲೇ, ಫೆ.3, 2004 ರಂದು ಚಿರನಿದ್ರೆಗೆ ಜಾರಿದರು. ಅವರು ಹಾಕಿಕೊಟ್ಟ ಹೋರಾಟ ಮಾರ್ಗದಲ್ಲಿ ಸಾಗಿದರೆ ರೈತ ಚಳವಳಿ ಮತ್ತಷ್ಟು ಬಲಿಷ್ಠವಾದೀತು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.