Inculcate patriotism in children
ಸೈನಿಕರಿಗೊಂದು ಸಲಾಂ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಡಿಸಿಎಂ, ಶಾಸಕರಾದ ಲಕ್ಷ್ಮಣ ಸಂ. ಸವದಿ
ಅಥಣಿ : ಪಟ್ಟಣದ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವತಿಯಿಂದ ಇಂದು ಆಯೋಜಿಸಿದ್ದ ಸೈನಿಕರಿಗೊಂದು ಸಲಾಂ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಪಾಲ್ಗೊಂಡು ಮಾತನಾಡಿದರು.
ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಮಕ್ಕಳಿಗೆ ಪಾಲಕರು ಹಾಗೂ ಶಿಕ್ಷಕರು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸುವುದು ಅಗತ್ಯವಿದೆ. ಎಷ್ಟೇ ಶಿಕ್ಷಣ ಕಲಿತರೂ ಸಂಸ್ಕಾರವಿಲ್ಲದಿದ್ದರೆ ವ್ಯರ್ಥ. ಶಿಕ್ಷಣ ಸಂಸ್ಕಾರದಿಂದ ಮಾತ್ರ ಒಬ್ಬ ವ್ಯಕ್ತಿ ಪರಿಪೂರ್ಣ ವ್ಯಕ್ತಿ ಆಗಬಲ್ಲ. ಶಿಕ್ಷಣ ಮತ್ತು ಸಂಸ್ಕಾರದಿಂದ ಕೂಡಿದ ವ್ಯಕ್ತಿಗೆ ಸಮಾಜದಲ್ಲಿ ಗೌರವ, ಮನ್ನಣೆ ಸಿಗಲು ಸಾಧ್ಯ ಎಂದು ಹೇಳಿದರು.
ಸೈನಿಕರಿಗೊಂದು ಸಲಾಂ ಕಾರ್ಯಕ್ರಮ ಆಯೋಜನೆ ಮೂಲಕ ಸೈನಿಕರನ್ನು ಗೌರವಿಸಿ ಅಭಿನಂದಿಸಿರುವ ಕಾರ್ಯ ಮಾಡಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಸೈನಿಕರಿಂದಾಗಿ ನಮ್ಮ ದೇಶವು ಸುರಕ್ಷಿತವಾಗಿದೆ. ದೇಶದ ಗಡಿ ಕಾಯುವ ನಮ್ಮ ಹೆಮ್ಮೆಯ ಯೋಧರನ್ನು ಪ್ರತಿಯೊಬ್ಬರೂ ಗೌರವಿಸಿ ಸ್ಮರಿಸಬೇಕು. ಮಕ್ಕಳು ಸೈನಿಕರಾಗಿ ಸೇವೆ ಸಲ್ಲಿಸಲು ಉತ್ತೇಜನ ನೀಡಲು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ದೇಶಭಕ್ತಿ ಬೆಳೆಸಬೇಕು ಎಂದು ಮಾನ್ಯ ಶಾಸಕರಾದ ಲಕ್ಷ್ಮಣ ಸವದಿಯವರು ಹೇಳಿದರು.
ಕಾರ್ಯಕ್ರಮದಲ್ಲಿ ವೀರೇಶ ಪಾಟೀಲ, ಗಟಿವಾಳಪ್ಪ ಗುಡ್ಡಾಪುರ, ಶ್ರೀಮಂತ ಸೋನಕರ್, ಶ್ರೀದೇವಿ ದರಬಾರೆ, ಎಸ್. ಎ. ಚಿಕ್ಕಟ್ಟಿ, ದಾವಲ ಮಕಾಂದಾರ, ಸದಾಶಿವ ಚಿಕ್ಕಟ್ಟಿ, ಟಿ.ಎ. ಮೊಗೇರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಸೈನಿಕರು, ಮಾಜಿ ಸೈನಿಕರು, ಪಾಲ್ಗೊಂಡಿದ್ದರು.