
15th Koppal District Kannada Literary Conference in Karatagi on Nov 21 & 22

ನ. 21 & 22ರಂದು ಕಾರಟಗಿಯಲ್ಲಿ ಕೊಪ್ಪಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕೊಪ್ಪಳ, ನವೆಂಬರ್ 20 (ಕರ್ನಾಟಕ ವಾರ್ತೆ): ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಪ್ಪಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ 21 ಮತ್ತು 22ರಂದು (ಶನಿವಾರ ಮತ್ತು ಭಾನುವಾರ) ಕಾರಟಗಿ ಪಟ್ಟಣದ ನವಲಿ ರಸ್ತೆಯಲ್ಲಿರುವ ಕೆ.ಪಿ.ಎಸ್. (ಪ್ರೌಢಶಾಲೆ) ಶ್ರೀ ಸಿದ್ದೇಶ್ವರ ರಂಗಮಂದಿರ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ಸಂಶೋಧಕರು ಹಾಗೂ ಚಿಂತಕರಾದ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಆಧ್ಯಾತ್ಮ ಕವಿ, ರಾಜಯೋಗಿ ಶ್ರೀ ಚಿದಾನಂದ ಅವಧೂತರ ಮಹಾಮಂಟಪ ಹಾಗೂ ಸಾಹಿತ್ಯ ಪ್ರೇಮಿ ರಾಜಾ ಹಿರೇರಂಗಪ್ಪ ನಾಯಕ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರ ಸ್ಮರಣಾರ್ಥ 17 ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ನ. 21ರ ಶನಿವಾರ ಮೊದಲ ದಿನದ ಪ್ರಮುಖ ಕಾರ್ಯಕ್ರಮಗಳು ಇಂತಿವೆ.
*ಧ್ವಜಾರೋಹಣ:* ಕೊಪ್ಪಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ನ. 21ರ ಬೆಳಿಗ್ಗೆ 7:30ಕ್ಕೆ ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್ ಹೇರೂರು ಅವರು ಪರಿಷತ್ತು ಧ್ವಜಾರೋಹಣ ಹಾಗೂ ಕಾರಟಗಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಶರಣಪ್ಪ ಕೋಟ್ಯಾಳ ಅವರು ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ. ಕಾರಟಗಿ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಪಥಸಂಚಲನವನ್ನು ತಹಶೀಲ್ದಾರರಾದ ಎಂ. ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದಾರೆ.
*ಭವ್ಯ ಮೆರವಣಿಗೆ:* ಕೊಪ್ಪಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭವ್ಯ ಮೆರವಣಿಗೆಯು ನ. 21ರಂದು ಬೆಳಿಗ್ಗೆ 9 ಗಂಟೆಗೆ ಜರುಗಲಿದ್ದು, ಶ್ರೀ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬು ಅವರು ಉದ್ಘಾಟಿಸಲಿದ್ದಾರೆ. ವಿಶೇಷ ಎಪಿಎಂಸಿ ಮಾರುಕಟ್ಟೆ ಮುಖ್ಯದ್ವಾರದಿಂದ ಆರಂಭಗೊಂಡು ಆರ್.ಜಿ ಮುಖ್ಯ ರಸ್ತೆಯ ಮೂಲಕ ಕನಕದಾಸ ವೃತ್ತ, ಹೇಮರೆಡ್ಡಿ ಮಲ್ಲಮ್ಮ ವೃತ್ತ, ದಲಾಲಿ ಬಜಾರ್ ಮೂಲಕ ಕೆ.ಪಿ.ಎಸ್. (ಪ್ರೌಢಶಾಲೆ) ಶ್ರೀ ಸಿದ್ದೇಶ್ವರ ರಂಗಮಂದಿರದ ಮುಖ್ಯ ವೇದಿಕೆಯವರೆಗೆ ನಡೆಯುವ ಈ ಮೆರವಣಿಗೆಯಲ್ಲಿ ಸಿದ್ದಿ ಕುಣಿತ, ಹಗಲುವೇಷ, ಡೊಳ್ಳು ಕುಣಿತ, ಲಂಬಾಣಿ ನೃತ್ಯ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ.
*ಉದ್ಘಾಟನಾ ಸಮಾರಂಭ:* ಕೊಪ್ಪಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭವು ಇದೇ ನವೆಂಬರ್ 21ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ಕಾರಟಗಿಯ ಆಧ್ಯಾತ್ಮ ಕವಿ, ರಾಜಯೋಗಿ ಶ್ರೀ ಚಿದಾನಂದ ಅವಧೂತರ ಮಹಾಮಂಟಪದ ಸಾಹಿತ್ಯ ಪ್ರೇಮಿ ರಾಜಾ ಹಿರೇರಂಗಪ್ಪ ನಾಯಕ ವೇದಿಕೆಯಲ್ಲಿ ನಡೆಯಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾರಟಗಿಯ ಶ್ರೀ ವೇ|| ಮೂ|| ಮರುಳಸಿದ್ದಯ್ಯಸ್ವಾಮಿ ಹಿರೇಮಠ ಸ್ವಾಮೀಜಿ ಹಾಗೂ ಶ್ರೀ ವೀರಭದ್ರ ಶರಣರು ತಲೇಖಾನ ಹಿರೇಮಠ ಸ್ವಾಮೀಜಿ ಅವರು ವಹಿಸಲಿದ್ದಾರೆ. ಕೊಪ್ಪಳ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಶರಣೇಗೌಡ ಪೊಲೀಸ್ಪಾಟೀಲ್ ಹೇರೂರು ಅವರು ಸ್ವಾಗತ ನುಡಿಗಳನ್ನಾಡಲಿದ್ದು, ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸಚಿವರಾದ ಬಸವರಾಜ ರಾಯರೆಡ್ಡಿ ಅವರು ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಸಮ್ಮೇಳನವನ್ನು ಉದ್ಘಾಟಿಸಿ, ಉದ್ಘಾಟಕರ ನುಡಿಗಳನ್ನಾಡಲಿದ್ದಾರೆ.
ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರದಲ್ಲಿ ನಡೆದ 14ನೇ ಸಮ್ಮೇಳನದ ಸರ್ವಾಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ್ ಅವರು ಧ್ವಜ ಹಸ್ತಾಂತರ ಮಾಡಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಮುಖ್ಯ ಅತಿಥಿಗಳ ನುಡಿಗಳನ್ನಾಡಲಿದ್ದಾರೆ.
ಯರಡೋಣಾ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ರಾಘವೇಂದ್ರ ಕಂತಿ ಅವರು ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿಕೊಡಲಿದ್ದು, ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ ಅವರು ಸಮ್ಮೇಳನಾಧ್ಯಕ್ಷರ ನುಡಿಹೊತ್ತಿಗೆಯನ್ನು ಬಿಡುಗಡೆ ಮಾಡಲಿದ್ದಾರೆ. ನಂತರ ಕೊಪ್ಪಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಹಾಗೂ ಕಾರಟಗಿ ತಾಲೂಕಾ ಘಟಕದಿಂದ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ.
ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್
ಬಯ್ಯಾಪುರ ಅವರು ಸಮ್ಮೇಳನಾಧ್ಯಕ್ಷರ ಪರಿಚಯ ಗ್ರಂಥ ಹಾಗೂ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಿದ್ದು, ವಚನ ಟಿವಿ ಸಂಪಾದಕರಾದಸಿದ್ದು ಯಾಪಲಪರವಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ.
*ಮಳಿಗೆಗಳ ಉದ್ಘಾಟನೆ:* ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಎಚ್. ಪಾಟೀಲ್ ಅವರು ವಾಣಿಜ್ಯ ಮಳಿಗೆಗಳನ್ನು, ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ಪುಸ್ತಕ ಮಳಿಗೆಗಳನ್ನು ಹಾಗೂ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಕರಕುಶಲ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಜಾನಪದ ಅಕಾಡೆಮಿ ಸದಸ್ಯರು ಹಾಗೂ ಶಿಕ್ಷಕರಾದ ಮಹೆಬೂಬ್ ಕಿಲ್ಲೇದಾರ್ ನಾಡಗೀತೆಯನ್ನು ಮತ್ತು ಕಾರಟಗಿಯ ಗಾಯಕರಾದ ಎಂ. ಅಮರೇಶಗೌಡ ರೈತ ಗೀತೆಯನ್ನು ಹಾಡಲಿದ್ದಾರೆ. ಸಮಾರಂಭದಲ್ಲಿ ರಾಜ್ಯೋತ್ಸವ ಹಾಗೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಐವರು ಸಾಧಕರಿಗೆ ವಿಶೇಷ ಗೌರವ ಸನ್ಮಾನ ನೆರವೇರಲಿದೆ.
ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಕೊಪ್ಪಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ


