
Ph.D. Degree Conferred Upon Sociology Research Scholar S. Amaresh

ಸಮಾಜಶಾಸ್ತ್ರ ಸಂಶೋಧನಾರ್ಥಿ ಎಸ್. ಅಮರೇಶ್ಗೆ ಪಿಎಚ್.ಡಿ ಪದವಿ ಪ್ರದಾನ

ಎಂ.ಎ. ತತ್ವಶಾಸ್ತ್ರದಲ್ಲಿ ಪ್ರಥಮ ರ್ಯಾಂಕ್, ಚಿನ್ನದ ಪದಕದ ಸಾಧನೆಗೂ ಪಾತ್ರ

ಬೆಂಗಳೂರು, ನ. 7: ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಎಸ್. ಅಮರೇಶ್ ಅವರಿಗೆ ವಿಶ್ವವಿದ್ಯಾಲಯವು ಪಿಎಚ್.ಡಿ (ಡಾಕ್ಟರೇಟ್) ಪದವಿ ಪ್ರದಾನ ಮಾಡಿದೆ.
ಬೆಂಗಳೂರು ನಗರದ ಬಿ.ಟಿ.ಎಂ. ಲೇಔಟ್ ವಿಧಾನಸಭಾ ಕ್ಷೇತ್ರದ ಕೋರಮಂಗಲ ನಿವಾಸಿಗಳಾದ ಎಂ. ಶಂಕರಪ್ಪ ಮತ್ತು ಮುನಿಯಲ್ಲಮ್ಮ ದಂಪತಿಯ ಪುತ್ರರಾದ ಅಮರೇಶ್ ಅವರು, ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಕಲಾ ನಿಕಾಯದ ಡೀನ್ ಪ್ರೊ. ಸಿ. ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ “ಬೆಂಗಳೂರು ನಗರದಲ್ಲಿನ ಮಕ್ಕಳ ಅನಾಥಾಶ್ರಮಗಳ ಕುರಿತು ಒಂದು ಸಮಾಜಶಾಸ್ತ್ರೀಯ ಅಧ್ಯಯನ” ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು. ಈ ಸಂಶೋಧನೆಗೆ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
ಅಮರೇಶ್ ಅವರ ಈ ಶೈಕ್ಷಣಿಕ ಸಾಧನೆಗೆ ಕುಟುಂಬದವರು, ಗುರು-ಹಿರಿಯರು, ಸ್ನೇಹಿತರು, ಕೋರಮಂಗಲ ನಿವಾಸಿಗಳು ಹಾಗೂ ಸುತ್ತಮುತ್ತಲಿನ ಗಣ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಚಿನ್ನದ ಪದಕದ ಸಾಧನೆಯೂ ಹೆಮ್ಮೆ
ವಿಶೇಷವೆಂದರೆ, ಎಸ್. ಅಮರೇಶ್ ಅವರು ಇದೇ ಬೆಂಗಳೂರು ವಿಶ್ವವಿದ್ಯಾಲಯದ 48ನೇ ಘಟಿಕೋತ್ಸವದಲ್ಲಿ ಎಂ.ಎ. ತತ್ವಶಾಸ್ತ್ರ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ಇದೀಗ ಪಿಎಚ್.ಡಿ ಪದವಿಯನ್ನೂ ಗಳಿಸುವ ಮೂಲಕ ತಮ್ಮ ಶೈಕ್ಷಣಿಕ ಸಾಧನೆಗೆ ಮತ್ತೊಂದು ಗರಿ ಮೂಡಿಸಿದ್ದಾರೆ.



