

Mandatory information boards missing at Navali Gram Panchayat; activists pull up the PDO.
“ಸರ್ಕಾರದ ಕೆಲಸ ದೇವರ ಕೆಲಸ” ಬರೀ ಬೋರ್ಡಿಗಷ್ಟೇ ಸೀಮಿತವೇ?
ನವಲಿ ಗ್ರಾ.ಪಂ.ನಲ್ಲಿ ಕಡ್ಡಾಯ ಮಾಹಿತಿ ಫಲಕಗಳಿಲ್ಲ; ಪಿಡಿಒಗೆ ಹೋರಾಟಗಾರರ ತರಾಟೆ
ನವಲಿ (ಕನಕಗಿರಿ ತಾಲೂಕು): ಗ್ರಾಮ ಪಂಚಾಯಿತಿ ಕಚೇರಿಯ ಹೊರಭಾಗದಲ್ಲಿ “ಸರ್ಕಾರದ ಕೆಲಸ ದೇವರ ಕೆಲಸ” ಎಂಬ ಘೋಷವಾಕ್ಯ ಕಾಣಿಸಿಕೊಂಡರೂ, ಕಚೇರಿಯಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಕಡ್ಡಾಯ ಮಾಹಿತಿ ಫಲಕಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ.
ನವಲಿ ಗ್ರಾಮ ಪಂಚಾಯಿತಿಗೆ ಸಾಮಾಜಿಕ ಹೋರಾಟಗಾರ ಹನುಮಂತಪ್ಪ ವಾಲೇಕರ್ ಹಾಗೂ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಭೇಟಿ ನೀಡಿ, ಪಂಚಾಯಿತಿಯಲ್ಲಿ ಸಾರ್ವಜನಿಕ ಮಾಹಿತಿಗಾಗಿ ಅಳವಡಿಸಬೇಕಾದ ಫಲಕಗಳ ಕುರಿತು ಪರಿಶೀಲನೆ ನಡೆಸಿದರು.
ಈ ವೇಳೆ ಕಚೇರಿಯಲ್ಲಿ ಇರಬೇಕಾದ ಮಾಹಿತಿ ಹಕ್ಕು ಅಧಿನಿಯಮದ ನಾಮಫಲಕ, ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡುವ ಫಲಕ ಹಾಗೂ ಸಿಬ್ಬಂದಿಗಳ ವಿವರಗಳ ಫಲಕ ಕಾಣದಿರುವುದನ್ನು ಪ್ರಶ್ನಿಸಲಾಯಿತು.
ಈ ಕುರಿತು ಪಿಡಿಒ ಈರಣ್ಣ ನಕ್ರಳ್ಳಿ ಅವರನ್ನು ಪ್ರಶ್ನಿಸಿದಾಗ, ಫಲಕಗಳನ್ನು ಅಳವಡಿಸದಿರುವುದು ತಪ್ಪಾಗಿದೆ ಎಂದು ಒಪ್ಪಿಕೊಂಡ ಅವರು, “2-3 ದಿನಗಳಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿ ಫಲಕಗಳನ್ನು ಅಳವಡಿಸಿ, ಜಿಪಿಎಸ್ ಫೋಟೋ ಸಮೇತ ಮಾಹಿತಿ ನೀಡಲಾಗುವುದು” ಎಂದು ಭರವಸೆ ನೀಡಿದ್ದಾರೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಮರಳು ಸಾಗಾಣಿಕೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಚರಂಡಿ ಸ್ವಚ್ಛತೆಯ ಕೊರತೆ ಕುರಿತು ಸಾರ್ವಜನಿಕರು ದೂರುಗಳನ್ನು ಸಲ್ಲಿಸಿದರು. ಪಂಚಾಯಿತಿ ಸಿಬ್ಬಂದಿಗಳು ಗುರುತಿನ ಚೀಟಿ (ಐಡಿ ಕಾರ್ಡ್) ಧರಿಸದೇ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೂ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಯನ್ನೇ “ನೀವ್ಯಾರು?” ಎಂದು ಪ್ರಶ್ನಿಸಿದ ಘಟನೆ ಕೂಡ ನಡೆಯಿತು.
“ಸರ್ಕಾರದ ಕೆಲಸ ದೇವರ ಕೆಲಸ” ಎಂಬ ಮಾತು ಕೇವಲ ಕಚೇರಿ ಗೋಡೆಯ ಮೇಲಿನ ಬೋರ್ಡಿಗೆ ಸೀಮಿತವಾಗದೆ, ಪಂಚಾಯಿತಿ ಆಡಳಿತದಲ್ಲೂ ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆ ಕಾಣಬೇಕು. ಜನರಿಗೆ ಅಗತ್ಯವಿರುವ ಮಾಹಿತಿಯನ್ನು ಕಚೇರಿಯಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ಹನುಮಂತಪ್ಪ ವಾಲೇಕರ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಆರ್ಎಸ್ ಪಕ್ಷದ ತಾಲೂಕು ಅಧ್ಯಕ್ಷ ರಾಜೇಶ್ ಸಿನ್ನೂರ್, ಉಪಾಧ್ಯಕ್ಷ ಹನುಮಂತಪ್ಪ, ಸಂತೋಷ್ ಯಮನೂರಪ್ಪ ಕರಡೋಣ ಹಾಗೂ ನಾಗಲಿಂಗಪ್ಪ ಕರಡೋಣ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಶರಣಯ್ಯ ಹಿರೇಮಠ,
ಕನಕಗಿರಿ ತಾಲೂಕು ವರದಿಗಾರ





