

ಸರ್ಕಾರಿ ಕಚೇರಿಯಲ್ಲೇ ಮಹಿಳಾ ನೌಕರಿಗೆ ಮಾನಸಿಕ ಕಿರುಕುಳ ಆರೋಪ: ಸಮಗ್ರ ತನಿಖೆಗೆ ಒಕ್ಕಲಿಗರ ಸಂಘ ಆಗ್ರಹ
Allegations of mental harassment of a female employee within a government office: Vokkaligara Sangha demands a comprehensive investigation.

ತೊಂದರೆ ನೀಡುತ್ತಿರುವ ನೌಕರನ ವಿರುದ್ಧ ಕ್ರಮಕ್ಕೆ ಒತ್ತಾಯ – ಸಂತ್ರಸ್ತೆಗೆ ನ್ಯಾಯ ದೊರಕುವವರೆಗೂ ಬೆಂಬಲದ ಭರವಸೆ
ಹನೂರು: ಸರ್ಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರೆಯೊಬ್ಬರಿಗೆ ಸಹೋದ್ಯೋಗಿಯಿಂದ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರೆಯೊಬ್ಬರು ಸಹೋದ್ಯೋಗಿಯಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ನೇತೃತ್ವದಲ್ಲಿ ಹನೂರಿನ ಒಕ್ಕಲಿಗ ಮುಖಂಡರ ನಿಯೋಗವು ತಹಶೀಲ್ದಾರ್ ಚೈತ್ರಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಂತರ ಮಾತನಾಡಿದ ಗಂಗಾಧರ್, ಸರ್ಕಾರಿ ಸೇವೆಯನ್ನು ಜನಸೇವೆಯೆಂದು ಪರಿಗಣಿಸಿ ಕರ್ತವ್ಯ ನಿರ್ವಹಿಸಬೇಕಾದ ನೌಕರರಿಂದಲೇ ಸಹೋದ್ಯೋಗಿ ಮಹಿಳೆಗೆ ಮಾನಸಿಕ ಕಿರುಕುಳವಾಗುತ್ತಿದೆ ಎಂಬ ಆರೋಪ ಕಳವಳಕಾರಿ ಸಂಗತಿಯಾಗಿದೆ. ಮಹಿಳಾ ನೌಕರರ ಸುರಕ್ಷತೆ ಮತ್ತು ಗೌರವಕ್ಕೆ ಆದ್ಯತೆ ನೀಡಬೇಕು. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪ ಸಾಬೀತಾದಲ್ಲಿ ಸಂಬಂಧಪಟ್ಟ ನೌಕರನ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂತ್ರಸ್ತೆಯ ಅಹವಾಲು ಆಲಿಸಿ ನ್ಯಾಯ ಒದಗಿಸಬೇಕು. ಯಾವುದೇ ಕಾರಣಕ್ಕೂ ನೊಂದ ಮಹಿಳೆಗೆ ಅನ್ಯಾಯವಾಗಲು ಬಿಡುವುದಿಲ್ಲ. ನ್ಯಾಯ ದೊರಕುವವರೆಗೂ ಒಕ್ಕಲಿಗರ ಸಂಘ ಬೆಂಬಲವಾಗಿ ನಿಲ್ಲಲಿದೆ. ಅಗತ್ಯಬಿದ್ದರೆ ಪ್ರಕರಣವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೌಡೆಗೌಡ, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಗಿರೀಶ್, ಹರೀಶ್, ಒಕ್ಕಲಿಗ ಮುಖಂಡರಾದ ಮಂಜೇಶ್, ನಾಗೇಂದ್ರ, ನಟರಾಜು, ಒಕ್ಕಲಿಗರ ಸಂಘದ ನಿರ್ದೇಶಕ ಮಂಜೇಶ್, ಯುವ ಮುಖಂಡರಾದ ಮಹಾದೇಶ್, ಮಂಜು, ಸಂತೋಷ್, ಕಾರ್ತಿಕ್, ಚೇತನ್, ಶಂಕರ್, ಬಂಗಾರಪ್ಪ, ಅಭಿಲಾಷ್, ಸೋಮಣ್ಣ, ಹೊಂಬಾಳೆಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



