ಬೇಡಿಕೆ ಇಡುವುದಲ್ಲ, ಕ್ಷೇತ್ರಕ್ಕಾಗಿ ಹೋರಾಡಲಿ ಶಾಸಕ ಜನಾರ್ಧನ ರೆಡ್ಡಿ!ಪ್ರಜಾ ಸೇವಾ ಆಂದೋಲನದ ವೇದಿಕೆಯಲ್ಲಿ ಸಚಿವರ ಮುಂದೆ ಬೇಡಿಕೆಗಳ ಸರಮಾಲೆ: ಮ್ಯಾಗಳಮನಿ ಕಿಡಿ

H.Mallikarjun
H.Mallikarjun - Kalyanasiri
2 Min Read

MLA Janardhana Reddy should fight for the constituency, not just make demands!
Magalamani lashes out over the barrage of demands placed before ministers at the ‘Praja Seva Andolana’ platform.

ಜಾಹೀರಾತು
 

ಬೇಡಿಕೆ ಇಡುವುದಲ್ಲ, ಕ್ಷೇತ್ರಕ್ಕಾಗಿ ಹೋರಾಡಲಿ ಶಾಸಕ ಜನಾರ್ಧನ ರೆಡ್ಡಿ!
ಪ್ರಜಾ ಸೇವಾ ಆಂದೋಲನದ ವೇದಿಕೆಯಲ್ಲಿ ಸಚಿವರ ಮುಂದೆ ಬೇಡಿಕೆಗಳ ಸರಮಾಲೆ: ಮ್ಯಾಗಳಮನಿ ಕಿಡಿ


ಗಂಗಾವತಿ, ಸೆ.21: “ಪ್ರಜಾ ಸೇವಾ ಆಂದೋಲನದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕೇ ಹೊರತು, ಶಾಸಕರೇ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಸಚಿವರ ಮುಂದೆ ಪಟ್ಟಿ ಮಾಡಿ ಬೇಡಿಕೆ ಇಡುವ ವೇದಿಕೆಯಾಗಬಾರದು. ನಿಜವಾಗಿಯೂ ಗಂಗಾವತಿಯ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯಲಿ” ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಆಗ್ರಹಿಸಿದ್ದಾರೆ.
ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರ ಮುಂದೆ ವಿವಿಧ ಬೇಡಿಕೆಗಳನ್ನು ಪ್ರಸ್ತಾಪಿಸಿರುವುದಕ್ಕೆ ಮ್ಯಾಗಳಮನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಶಾಸಕರು ಕೇಳುವ ಸ್ಥಾನದಲ್ಲಿರಬೇಕೇ? ಜನರ ಪರವಾಗಿ ಕೇಳುವವರಾಗಬೇಕೇ?” ಎಂಬ ಪ್ರಶ್ನೆ ಈಗ ಗಂಗಾವತಿಯ ಜನರ ಮುಂದಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾ ಸೇವಾ ಆಂದೋಲನವು ಜನರ ಅಹವಾಲುಗಳನ್ನು ಆಲಿಸಿ, ಸ್ಥಳೀಯ ಮಟ್ಟದಲ್ಲೇ ಪರಿಹಾರ ಕಲ್ಪಿಸುವ ಉದ್ದೇಶದ ಕಾರ್ಯಕ್ರಮವಾಗಿದೆ. ಇಂತಹ ವೇದಿಕೆಯಲ್ಲಿ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಮುಂದೆ ಮತ್ತೆ ಬೇಡಿಕೆಯ ರೂಪದಲ್ಲಿ ಇಡುವುದಕ್ಕಿಂತ, ತಮ್ಮ ಅಧಿಕಾರ ಮತ್ತು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಸಮಸ್ಯೆಗಳ ಪರಿಹಾರಕ್ಕೆ ಒತ್ತಡ ಹೇರಬೇಕು ಎಂದು ಮ್ಯಾಗಳಮನಿ ತಿಳಿಸಿದ್ದಾರೆ.
“ಅನುದಾನ ಬೇಕು ಎಂದರೆ ಕೇಳಲಿ; ಆದರೆ ಕೇಳುತ್ತಲೇ ಕೂರುವುದೇಕೆ? ವಿಧಾನಸಭೆಯಲ್ಲಿ ಧ್ವನಿ ಎತ್ತಲಿ, ಸರ್ಕಾರದ ಮೇಲೆ ಒತ್ತಡ ತರಲಿ, ಅಗತ್ಯವಿದ್ದರೆ ಕ್ಷೇತ್ರದ ಜನರನ್ನು ಸಂಘಟಿಸಿ ಹೋರಾಟ ಮಾಡಲಿ” ಎಂದು ಅವರು ಸವಾಲು ಹಾಕಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸದಿದ್ದರೆ ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ, ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವ ಅವಕಾಶ ಶಾಸಕರಿಗಿದೆ. ಅದೂ ಫಲಿಸದಿದ್ದರೆ ಗಂಗಾವತಿಯ ಜನರೊಂದಿಗೆ ಪಾದಯಾತ್ರೆ, ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯುವ ಧೈರ್ಯ ತೋರಿಸಲಿ ಎಂದು ಮ್ಯಾಗಳಮನಿ ಒತ್ತಾಯಿಸಿದ್ದಾರೆ.
“ಬಳ್ಳಾರಿ ಚಲೋಗೆ ಇರುವ ಉತ್ಸಾಹ ಗಂಗಾವತಿಯ ಸಮಸ್ಯೆಗಳ ಹೋರಾಟದಲ್ಲೂ ಇರಲಿ”
ತಮಗೆ ಸಂಬಂಧಿಸಿದ ಕ್ಷೇತ್ರದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸುವ ಬದಲು, ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸಿರುವುದು ಏಕೆ? ಎಂದು ಮ್ಯಾಗಳಮನಿ ಪ್ರಶ್ನಿಸಿದ್ದಾರೆ.
“ರಾಜಕೀಯ ಕಾರ್ಯಕ್ರಮಗಳಿಗೆ ತೋರಿಸುವ ಉತ್ಸಾಹವನ್ನು ಗಂಗಾವತಿಯ ರಸ್ತೆ, ಕುಡಿಯುವ ನೀರು, ಮೂಲಸೌಕರ್ಯ ಹಾಗೂ ಜನರ ಸಮಸ್ಯೆಗಳಿಗಾಗಿ ತೋರಿಸಲಿ. ಕ್ಷೇತ್ರದ ಜನರ ಪರವಾಗಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಶಾಸಕ ಜನಾರ್ಧನ ರೆಡ್ಡಿ ಅವರು ಮುಂದಾದರೆ, ನಾವು ಮಾತ್ರವಲ್ಲ, ಗಂಗಾವತಿಯ ಜನತೆ ಹಾಗೂ ವಿವಿಧ ಸಂಘಟನೆಗಳು ಬೆಂಬಲ ನೀಡಲು ಸಿದ್ಧ” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 1
ಜಾಹೀರಾತು
Share This Article