

Confer the ‘Sahakara Ratna’ award for selfless service in the cooperative sector
ಸಹಕಾರಿ ಕ್ಷೇತ್ರದ ನಿಸ್ವಾರ್ಥ ಸೇವೆಗೆ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ!

ಅಮರಯ್ಯ ಸ್ವಾಮಿ ಸಾಲಿಮಠ ಅವರ ಹೆಸರು ಪ್ರಶಸ್ತಿಗೆ ಪರಿಗಣಿಸಲು ಸಹಕಾರಿ ವಲಯದ ಒತ್ತಾಯ
ಕಾರಟಗಿ: ಸಹಕಾರಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ, ಸಹಕಾರಿ ಸಂಘಗಳ ನೌಕರರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಶ್ರೀ ಅಮರಯ್ಯ ಸ್ವಾಮಿ ಸಾಲಿಮಠ ಅವರಿಗೆ ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಸಹಕಾರ ರತ್ನ’ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಸಹಕಾರಿ ವಲಯದಿಂದ ಕೇಳಿಬಂದಿದೆ.
ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿರುವ ಅಮರಯ್ಯ ಸ್ವಾಮಿ ಸಾಲಿಮಠ ಅವರು, ಕರ್ನಾಟಕ ರಾಜ್ಯ ಸೌಹಾರ್ದ ಮತ್ತು ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ.), ಕಾರಟಗಿ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರಿ ಸಂಘಗಳ ನೌಕರರನ್ನು ಸಂಘಟಿಸುವುದು, ಅವರ ಸಮಸ್ಯೆಗಳಿಗೆ ಧ್ವನಿಯಾಗುವುದು, ಹಕ್ಕುಗಳ ರಕ್ಷಣೆ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿದ್ದಾರೆ.
ಸಹಕಾರಿ ನೌಕರರಲ್ಲಿ ಒಗ್ಗಟ್ಟು ಮೂಡಿಸುವುದರ ಜೊತೆಗೆ ಸಂಘಟನೆ ಬಲವರ್ಧನೆ, ನೌಕರರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ಅವರು ಕೈಗೊಂಡಿರುವ ಪ್ರಯತ್ನಗಳು ಗಮನಾರ್ಹವಾಗಿವೆ.
ಇವರ ಸಹಕಾರಿ ಸೇವೆಯನ್ನು ಗುರುತಿಸಿ 2025ರ ಅಕ್ಟೋಬರ್ 25ರಂದು ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ನ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ‘ಶ್ರೇಷ್ಠ ಸಹಕಾರಿ’ ಗೌರವ ನೀಡಿ ಅಭಿನಂದಿಸಿರುವುದು ಇವರ ಸೇವೆಗೆ ಸಂದ ಮಹತ್ವದ ಮನ್ನಣೆಯಾಗಿದೆ.
ಇದಲ್ಲದೆ, ಕೇಂದ್ರ ಸಹಕಾರ ಸಚಿವಾಲಯದ ಸ್ಥಾಪನಾ ದಿನಾಚರಣೆ ಸೇರಿದಂತೆ ಸಹಕಾರಿ ಕ್ಷೇತ್ರದ ವಿವಿಧ ಕಾರ್ಯಕ್ರಮಗಳ ಅಂಗವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ, ರಕ್ತ ಸಂಗ್ರಹಣೆಯಂತಹ ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸಹಕಾರಿ ಕ್ಷೇತ್ರದ ಸಂಘಟನೆಯ ಜೊತೆಗೆ ಸಾಮಾಜಿಕ ಸೇವೆಯಲ್ಲಿಯೂ ತಮ್ಮ ಕೊಡುಗೆ ನೀಡಿದ್ದಾರೆ.
ಸಹಕಾರಿ ಕ್ಷೇತ್ರದ ಅಭಿವೃದ್ಧಿ, ನೌಕರರ ಹಿತಾಸಕ್ತಿ, ಸಂಘಟನಾ ಸಾಮರ್ಥ್ಯ ಹಾಗೂ ಸಮಾಜಮುಖಿ ಸೇವೆಯನ್ನು ಪರಿಗಣಿಸಿ, ಅಮರಯ್ಯ ಸ್ವಾಮಿ ಸಾಲಿಮಠ ಅವರ ಹೆಸರನ್ನು ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಸಹಕಾರ ರತ್ನ’ ಪ್ರಶಸ್ತಿಗೆ ಆಯ್ಕೆ ಸಮಿತಿಯವರು ಪರಿಗಣಿಸಬೇಕು. ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಶಯವನ್ನು ಸಹಕಾರಿ ವಲಯದವರು ವ್ಯಕ್ತಪಡಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ನಿಷ್ಠೆ, ಬದ್ಧತೆ ಮತ್ತು ಸಮಾಜಮುಖಿ ಸೇವೆಗೆ ಸೂಕ್ತ ಗೌರವ ದೊರೆತಾಗ ಇತರರಿಗೂ ಪ್ರೇರಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಅಮರಯ್ಯ ಸ್ವಾಮಿ ಸಾಲಿಮಠ ಅವರಿಗೆ ‘ಸಹಕಾರ ರತ್ನ’ ಪ್ರಶಸ್ತಿ ದೊರೆಯಬೇಕೆಂಬುದು ಸಹಕಾರಿ ಕ್ಷೇತ್ರದ ಅಭಿಲಾಷೆಯಾಗಿದೆ.



