ಅಧಿವೇಶನದಲ್ಲಿ ಧ್ವನಿ ಎತ್ತಿ: ತುಂಗಭದ್ರಾ ಕಾರ್ಮಿಕರನ್ನು ಖಾಯಂಗೊಳಿಸಿ.ಗುತ್ತಿಗೆ ಪದ್ಧತಿ ರದ್ದುಪಡಿಸಿ ನೇರ ವೇತನ ಪಾವತಿಗೆ ಆಗ್ರಹಿಸಿ ಗಂಗಾವತಿ ಶಾಸಕರಿಗೆ ಮನವಿ

H.Mallikarjun
H.Mallikarjun - Kalyanasiri
2 Min Read
Raising the issue in the session: A memorandum was submitted to the Gangavathi MLA demanding the regularization of Tungabhadra workers, the abolition of the contract system, and the implementation of direct wage payments.




ಅಧಿವೇಶನದಲ್ಲಿ ಧ್ವನಿ ಎತ್ತಿ: ತುಂಗಭದ್ರಾ ಕಾರ್ಮಿಕರನ್ನು ಖಾಯಂಗೊಳಿಸಿ.ಗುತ್ತಿಗೆ ಪದ್ಧತಿ ರದ್ದುಪಡಿಸಿ ನೇರ ವೇತನ ಪಾವತಿಗೆ ಆಗ್ರಹಿಸಿ ಗಂಗಾವತಿ ಶಾಸಕರಿಗೆ ಮನವಿ

ಜಾಹೀರಾತು

ಗಂಗಾವತಿ: ತುಂಗಭದ್ರಾ ನೀರಾವರಿ ಯೋಜನೆಯಲ್ಲಿ ಕಳೆದ 25–30 ವರ್ಷಗಳಿಂದ ಖಾಯಂ ಸ್ವರೂಪದ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಿ, ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ನೇರ ವೇತನ ಪಾವತಿ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ವತಿಯಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರ ಕಛೇರಿಗೆ ಆಗಸ್ಟ್‌-10 ರಂದು ಮನವಿ ಸಲ್ಲಿಸಲಾಯಿತು.
ತುಂಗಭದ್ರಾ ಜಲಾಶಯದ ಮೂಲಕ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಲಕ್ಷಾಂತರ ಎಕರೆ ಕೃಷಿಭೂಮಿಗೆ ನೀರು ಹರಿಸುವ ಮಹತ್ವದ ಕಾರ್ಯದಲ್ಲಿ ಕಾರ್ಮಿಕರು ಸುಮಾರು ವರ್ಷಗಳಿಂದ ಹಗಲು–ರಾತ್ರಿ, ಮಳೆ–ಗಾಳಿ ಹಾಗೂ ಅಪಾಯಕಾರಿ ಪರಿಸ್ಥಿತಿಗಳಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದರೂ ಉದ್ಯೋಗ ಭದ್ರತೆಯಿಲ್ಲದೆ ಗುತ್ತಿಗೆ ಪದ್ಧತಿಯಡಿ ದುಡಿಯುತ್ತಿರುವುದು ಅನ್ಯಾಯವಾಗಿದೆ ಎಂದು ಸಂಘ ತಿಳಿಸಿದೆ. ಕಳೆದ 25–30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಕೂಡಲೇ ಖಾಯಂಗೊಳಿಸಬೇಕು, ನಕಲಿ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ನೇರ ವೇತನ ಪಾವತಿ ಜಾರಿಗೊಳಿಸಬೇಕು, ವರ್ಷಪೂರ್ತಿ ನಿರಂತರ ಕೆಲಸ ಹಾಗೂ ಉದ್ಯೋಗ ಭದ್ರತೆ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.
ಅಲ್ಲದೆ ಬಾಕಿ ವೇತನ, ಭವಿಷ್ಯ ನಿಧಿ (PF), ಇಎಸ್‌ಐ, ಕನಿಷ್ಠ ವೇತನದ ಬಾಕಿ, ತುಟ್ಟಿ ಭತ್ಯೆ ಹಾಗೂ ಇತರೆ ಕಾನೂನುಬದ್ಧ ಸೌಲಭ್ಯಗಳನ್ನು ಒದಗಿಸಬೇಕು. ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವೇತನ ನೀಡುವುದರ ಜೊತೆಗೆ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಸಾಧನಗಳು ಹಾಗೂ ಮೂಲಸೌಕರ್ಯ ಒದಗಿಸಿ, ಸರ್ಕಾರದ ನಿರ್ದೇಶನಗಳು ಮತ್ತು ನ್ಯಾಯಾಲಯದ ಆದೇಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಕಲ್ಯಾಣ ಕರ್ನಾಟಕದ ವಿಶೇಷ ಸ್ಥಾನಮಾನವಾದ ಸಂವಿಧಾನದ ಅನುಚ್ಛೇದ 371(ಜೆ)ಯ ಆಶಯಕ್ಕೆ ಅನುಗುಣವಾಗಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಮಸ್ಯೆಗಳನ್ನು ವಿಶೇಷವಾಗಿ ಪರಿಗಣಿಸಿ, ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಬೇಕು ಎಂದು ಸಂಘ ಮನವಿ ಮಾಡಿದೆ.
ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದು ನ್ಯಾಯ ಒದಗಿಸುವಂತೆ ಶಾಸಕ ಜನಾರ್ಧನರೆಡ್ಡಿಯವರಿಗೆ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಜೊತೆಗೆ ಆಗಸ್ಟ್ 19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ತುಂಗಭದ್ರಾ ನೀರಾವರಿ ಕಾರ್ಮಿಕರ ಬೃಹತ್ ಪ್ರತಿಭಟನೆಗೆ ಜನಪ್ರತಿನಿಧಿಗಳು ಬೆಂಬಲ ನೀಡಬೇಕು ಎಂದು ಸಂಘದ ಮುಖಂಡರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶರಣಬಸವ, ಪ್ರಧಾನ ಕಾರ್ಯದರ್ಶಿಯಾದ ಶಿವಕುಮಾರ ತಿಪ್ಪನಾಳ, ಕಾರ್ಯಕಾರಿ ಮಂಡಳಿಯವರಾದ ಚಾಂದಪಾಷಾ, ಗುಂಡಪ್ಪ ಮಸಾರಿ ಕ್ಯಾಂಪ್, ವೆಂಕಟೇಶ್ ಡಂಕನಕಲ್‌, ಲಕ್ಷ್ಮಣ ಸಿಂಗನಾಳ, ನಾಗೇಶ್ ಮಸಾರಿಕ್ಯಾಂಪ್, ಸೈಯದ್ ಹುಸೇನ್, ನಬಿ ಸಾಬ್, ಮೆಹಬೂಬ್ ಸಾಬ್, ಅಬ್ದುಲ್ ಸಾಬ್, ವಿರುಪಣ್ಣ ಹೇರೂರು ಸೇರಿದಂತೆ ಇತರರು ಹಾಜರಿದ್ದರು.

Total Views: 0
Share This Article