ಬೆಳಕಿನ ಹಬ್ಬ ದೀಪಾವಳಿ: ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಬದುಕಿನ ಪಯಣ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು
ಜಾಹೀರಾತು

Diwali, the Festival of Lights: A Life's Journey from Darkness Towards Light




ಬೆಳಕಿನ ಹಬ್ಬ ದೀಪಾವಳಿ: ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಬದುಕಿನ ಪಯಣ

ದೀಪಾವಳಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಸಡಗರ, ಸಂಭ್ರಮ ಮತ್ತು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ವರ್ಷವಿಡೀ ಆಚರಿಸುವ ಹಬ್ಬಗಳಲ್ಲೆಲ್ಲ ದೀಪಾವಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಭಾರತದಾದ್ಯಂತ ಆಚರಿಸುವ ಈ ಹಬ್ಬ ಎಲ್ಲರ ಮನದಲ್ಲೂ ಸಂತಸ, ಉತ್ಸಾಹ ಮತ್ತು ಹೊಸ ಭರವಸೆಯನ್ನು ಮೂಡಿಸುತ್ತದೆ.

ಜಾಹೀರಾತು

“ತಮಸೋಮಾ ಜ್ಯೋತಿರ್ಗಮಯ” ಅಂದರೆ ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯು ಎಂಬ ಉಪನಿಷತ್ತಿನ ಸಂದೇಶ ದೀಪಾವಳಿಯ ನಿಜವಾದ ಅರ್ಥವನ್ನು ಸಾರುತ್ತದೆ. ದೀಪಗಳ ಹಬ್ಬದ ವೈಶಿಷ್ಟ್ಯವೇ ಅಂಥದ್ದು. ದೀಪ + ಆವಳಿ = ದೀಪಾವಳಿ. ಎಲ್ಲಿ ಕತ್ತಲಿದೆಯೋ ಅಲ್ಲಿ ಬೆಳಕು ಇರಬೇಕು. ಇಲ್ಲಿ ಕತ್ತಲೆ ಎಂದರೆ ಅಜ್ಞಾನ, ಅಂಧಕಾರ ಮತ್ತು ಸೋಲಿನ ಸಂಕೇತವಾದರೆ, ಬೆಳಕು ಎಂದರೆ ಜ್ಞಾನ, ಯಶಸ್ಸು ಮತ್ತು ಗೆಲುವಿನ ಸಂಕೇತವಾಗಿದೆ. ಕತ್ತಲೆ ಕಷ್ಟಗಳ ಸಂಕೋಲೆಯಾದರೆ, ಬೆಳಕು ಅವುಗಳಿಂದ ಮುಕ್ತಿಯ ಸಂಕೇತವಾಗಿದೆ. ಹೀಗೆ ನಮ್ಮೊಳಗಿನ ಅಜ್ಞಾನವನ್ನು ತೊಡೆದುಹಾಕಿ ಜ್ಞಾನದ ಬೆಳಕನ್ನು ಪಸರಿಸುವ ಹಬ್ಬವೇ ದೀಪಾವಳಿ.

ದೀಪಾವಳಿ ಹಬ್ಬದಲ್ಲಿ ಅಮಾವಾಸ್ಯೆಯ ದಿನಕ್ಕೂ ವಿಶೇಷ ಮಹತ್ವವಿದೆ. ಅಂದು ಮನೆಮನೆಗಳಲ್ಲಿ ಲಕ್ಷ್ಮೀಪೂಜೆ ನೆರವೇರುತ್ತದೆ. ಸಂಪತ್ತು, ಸಮೃದ್ಧಿ ಮತ್ತು ಸೌಭಾಗ್ಯದ ಸಂಕೇತವಾದ ಲಕ್ಷ್ಮೀದೇವಿಯನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದೇ ಬದುಕಿನ ನಿಜವಾದ ಉದ್ದೇಶ ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಹೀಗಾಗಿ ದೀಪಾವಳಿಯಂದು ಜ್ಯೋತಿಸ್ವರೂಪಿಣಿಯಾದ ಲಕ್ಷ್ಮೀದೇವಿಗೆ ಭಯಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ.

ಹಬ್ಬದ ದಿನ ಬೆಳಗ್ಗೆ ಬೇಗನೆ ಎದ್ದು ಮನೆಯಂಗಳವನ್ನು ಸ್ವಚ್ಛಗೊಳಿಸಿ, ಸಗಣಿಯಿಂದ ಸಾರಿಸಿ, ದೀಪಗಳ ಚಿತ್ರಗಳ ರಂಗೋಲಿಗಳನ್ನು ಬಿಡಿಸಿ ಬಣ್ಣ ಮತ್ತು ಹೂವುಗಳಿಂದ ಅಲಂಕರಿಸುತ್ತಾರೆ. ಮನೆಯ ಹೊಸ್ತಿಲು, ದೇವರ ಕೋಣೆಗಳಿಗೆ ಮಾವಿನ ಎಲೆಗಳ ತಳಿರು ತೋರಣ ಹಾಗೂ ಹೂವುಗಳನ್ನು ಕಟ್ಟಿ ಸಿಂಗರಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸಿ ಬಂಧು-ಮಿತ್ರರು, ಸ್ನೇಹಿತರಿಗೆ ದೀಪಾವಳಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಮನೆಗಳಲ್ಲಿ ಪೂಜೆ-ಪುನಸ್ಕಾರಗಳು ನೆರವೇರಿದ ಬಳಿಕ ಸಿಹಿ ತಿನಿಸುಗಳನ್ನು ಹಂಚಿಕೊಂಡು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಮಕ್ಕಳು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ. ಮನೆಯ ಮುಂದೆ, ಅಂಗಳದಲ್ಲಿ ಹಾಗೂ ಸುತ್ತಮುತ್ತ ದೀಪಗಳನ್ನು ಬೆಳಗಿಸಿ, ವಿದ್ಯುತ್ ದೀಪಗಳ ಅಲಂಕಾರ ಮಾಡುತ್ತಾರೆ. ಎಲ್ಲೆಡೆ ದೀಪಗಳ ಬೆಳಕು ಹಬ್ಬದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ದೀಪಾವಳಿ ಕೇವಲ ದೀಪ ಹಚ್ಚುವ ಹಬ್ಬವಲ್ಲ; ಅದು ನಮ್ಮ ಬದುಕಿನ ಕಷ್ಟಗಳ ಕತ್ತಲೆಯನ್ನು ದೂರಮಾಡಿ ಹೊಸ ಭರವಸೆಯ ಬೆಳಕಿನೊಂದಿಗೆ ಬದುಕಿಗೆ ಹೊಸ ಮುನ್ನುಡಿ ಬರೆಯುವ ಹಬ್ಬವಾಗಿದೆ. ಮನೆಯ ಒಳಗೆ ಮತ್ತು ಹೊರಗೆ ದೀಪಗಳನ್ನು ಬೆಳಗಿಸುವುದರ ಜೊತೆಗೆ ನಮ್ಮ ಮನದೊಳಗೂ ಪ್ರೀತಿ, ವಿಶ್ವಾಸ, ಮಾನವೀಯತೆ ಮತ್ತು ಸೌಹಾರ್ದತೆಯ ದೀಪವನ್ನು ಹಚ್ಚಬೇಕು. ಈ ದೀಪದ ಬೆಳಕು ಮುಂದಿನ ದೀಪಾವಳಿಯವರೆಗೂ ನಮ್ಮ ಬದುಕಿನ ದಾರಿಯನ್ನು ತೋರಿಸಲಿ ಎಂಬ ಆಶಯ ನಮ್ಮದಾಗಬೇಕು.

ಜೀವನದಲ್ಲಿ ಏಳು-ಬೀಳುಗಳು ಸಹಜ. ಕಷ್ಟ-ಸುಖಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಷ್ಟದ ದಿನಗಳು ಶಾಶ್ವತವಲ್ಲ; ಸುಖದ ದಿನಗಳೂ ಸದಾ ಒಂದೇ ರೀತಿಯಾಗಿರುವುದಿಲ್ಲ. ಬದಲಾವಣೆಯ ನಿರೀಕ್ಷೆಯಲ್ಲಿ ತಾಳ್ಮೆ, ನಂಬಿಕೆ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳುವವರಿಗೆ ಬದುಕಿನ ಸುಂದರ ಕ್ಷಣಗಳು ದೊರೆಯುತ್ತವೆ.

ಬನ್ನಿ, ಎಲ್ಲರೂ ದೀಪ ಹಚ್ಚೋಣ. ದೀಪಾವಳಿ ತಂದಿರುವ ದಿವ್ಯ ಜ್ಯೋತಿಯ ಬೆಳಕಿನಲ್ಲಿ ನಮ್ಮ ಮನೆ-ಮನಗಳನ್ನು ಬೆಳಗಿಸೋಣ. ಆ ಬೆಳಕಿನಲ್ಲಿ ಬದುಕಿನ ಭರವಸೆಗಳನ್ನು ಬೆಳೆಸಿಕೊಳ್ಳೋಣ. ಅಜ್ಞಾನ, ಅಂಧಕಾರ, ದ್ವೇಷ ಮತ್ತು ಅಸೂಯೆಗಳನ್ನು ದೂರಮಾಡಿ ಜ್ಞಾನ, ಪ್ರೀತಿ, ಸಹೋದರತ್ವ ಹಾಗೂ ಸೌಹಾರ್ದತೆಯ ಬೆಳಕನ್ನು ಪಸರಿಸೋಣ.

ಸಡಗರ, ಸಂಭ್ರಮ ಮತ್ತು ಭರವಸೆಯೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸೋಣ.

ವಿ.ಎಂ.ಎಸ್. ಗೋಪಿ
ಲೇಖಕರು ಹಾಗೂ ಸಾಹಿತಿಗಳು, ಬೆಂಗಳೂರು.

Total Views: 0
ಜಾಹೀರಾತು
Share This Article
Leave a Comment