ಶ್ರೀ ವಿಶ್ವಕರ್ಮ ಜಯಂತಿ:ಶಿಲ್ಪಕಲೆಯ ಶ್ರೀಮಂತಿಕೆಗೆ ವಿಶ್ವಕರ್ಮರ ಕೊಡುಗೆ ಅಪಾರ: ಪಿ. ಸುಜ್ಞಾನಮೂರ್ತಿ

H.Mallikarjun
H.Mallikarjun - Kalyanasiri
3 Min Read

Sri Vishwakarma Jayanti: Vishwakarma’s contribution to the richness of art and craftsmanship is immense: P. Sujjanamurthy

ಶ್ರೀ ವಿಶ್ವಕರ್ಮ ಜಯಂತಿ:ಶಿಲ್ಪಕಲೆಯ ಶ್ರೀಮಂತಿಕೆಗೆ ವಿಶ್ವಕರ್ಮರ ಕೊಡುಗೆ ಅಪಾರ: ಪಿ. ಸುಜ್ಞಾನಮೂರ್ತಿ
ಕೊಪ್ಪಳ ಸೆಪ್ಟೆಂಬರ್ 21 (ಕರ್ನಾಟಕ ವಾರ್ತೆ): ಶಿಲ್ಪಕಲೆಯ ಶ್ರೀಮಂತಿಕೆಗೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ರಾಜ್ಯಾಕ್ಷರಾದ ಪಿ.ಸುಜ್ಞಾನಮೂರ್ತಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಸೋಮವಾರ (ಸೆ. 21ರಂದು) ಆಯೋಜಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವಕರ್ಮ ಸಮುದಾಯದ ಯುವಜನರು ಕೇವಲ ಸಾಂಪ್ರದಾಯಿಕ ಕುಲಕಸುಬಿಗೆ ಸೀಮಿತವಾಗದೆ ಆಧುನಿಕ ತಂತ್ರಜ್ಞಾನ, ಸಿಎನ್‌ಸಿ ಮಷಿನ್‌ಗಳು, ಡಿಜಿಟಲ್ ಹಾಗೂ ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಂಡು ಉದ್ಯಮಿಗಳಾಗಿ ಬೆಳೆಯಬೇಕು. ವಿಶ್ವಕರ್ಮ ಅಭಿವೃದ್ಧಿ ನಿಗಮದ ವತಿಯಿಂದ ಸಮುದಾಯದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ನೇರ ಸಾಲ ಯೋಜನೆ ಅಡಿಯಲ್ಲಿ ಸಬ್ಸಿಡಿ ಸೌಲಭ್ಯಗಳು ಲಭ್ಯವಿವೆ. ಅರಿವು ಯೋಜನೆಯಡಿ ಸಿಇಟಿ ಹಾಗೂ ನೀಟ್ ಮೂಲಕ ಉನ್ನತ ಶಿಕ್ಷಣ ಇಂಜಿನಿಯರಿಂಗ್, ವೈದ್ಯಕೀಯ ಇತ್ಯಾದಿ ವ್ಯಾಸಂಗಕ್ಕೆ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 1 ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಎಂಎಸ್/ಮಾಸ್ಟರ್ಸ್ ಮಾಡಲು ಇಚ್ಛಿಸುವ ಸಮುದಾಯದ ವಿದ್ಯಾರ್ಥಿಗಳಿಗೆ ರೂ. 50 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯವಿದೆ. ಸುವರ್ಣ ಮಹೋತ್ಸವ ವಿದ್ಯಾರ್ಥಿವೇತನ ಯೋಜನೆಯಡಿ ಐಟಿಐ, ಜಿಟಿಟಿಸಿ ಹಾಗೂ ವುಡ್ ಟೆಕ್ನಾಲಜಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ರೂ. 15,000 ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು.
ಗಂಗಾ ಕಲ್ಯಾಣ, ಸಾರಥಿ ಯೋಜನೆ ಹಾಗೂ ಕೇಂದ್ರ/ರಾಜ್ಯ ಸರ್ಕಾರದ ಪಿಎಂಇಜಿಪಿ, ಮುದ್ರಾ ಯೋಜನೆಗಳಡಿ ಸ್ವಂತ ಉದ್ಯಮ ಸ್ಥಾಪಿಸಲು ಸಿಎನ್‌ಸಿ, ಲೇಸರ್ ಯಂತ್ರೋಪಕರಣಗಳ ಬಳಕೆಗೆ ಬ್ಯಾಂಕ್‌ಗಳ ಮೂಲಕ ಆರ್ಥಿಕ ನೆರವು ಕಲ್ಪಿಸಲಾಗುವುದು. ನಿಗಮದ ಪ್ರಮುಖ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದ್ದು, ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಸಾರ್ವಜನಿಕರು ಅರ್ಜಿ ಸಲ್ಲಿಸಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕೊಪ್ಪಳ ಸಹಾಯಕ ಆಯುಕ್ತರಾದ ಮಹೇಬೂಬ್ ಜೀಲಾನ್ ಖುರೇಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅನನ್ಯವಾಗಿದೆ. ಸಮಾಜದ ಶಾಂತಿ, ಸೌಹಾರ್ದತೆ ಮತ್ತು ಪ್ರತಿಯೊಬ್ಬರ ಏಳಿಗೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು.
ಕುಷ್ಟಗಿಯ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ನಟರಾಜ ಸೋನಾರ್ ಅವರು ವಿಶೇಷ ಉಪನ್ಯಾಸ ನೀಡಿ, ವಿಶ್ವಕರ್ಮರು ಜಗತ್ತಿನ ಸೃಷ್ಟಿಕರ್ತರಾಗಿದ್ದು, ಪುರಾಣ-ಇತಿಹಾಸಗಳಲ್ಲಿ ದೇವಾಲಯಗಳು, ಆಯುಧಗಳು, ವಿಮಾನಗಳು ಹಾಗೂ ಮಹಾನಗರಗಳನ್ನು ನಿರ್ಮಿಸಿದ ಶಿಲ್ಪಿಯಾಗಿದ್ದಾರೆ. ಅಜಂತಾ, ಎಲ್ಲೋರಾ, ಹಂಪಿ, ಬೇಲೂರು, ಹಳೆಬೀಡು ಮೊದಲಾದ ಐತಿಹಾಸಿಕ ತಾಣಗಳ ನಿರ್ಮಾಣದ ಹಿಂದೆ ವಿಶ್ವಕರ್ಮರ ಶ್ರಮವಿದೆ. ವಿಶ್ವಕರ್ಮ ಸಮುದಾಯವು ಪ್ರಾಚೀನ ಕಾಲದಿಂದಲೂ ಗುಣಮಟ್ಟ ಮತ್ತು ಕೌಶಲ್ಯಕ್ಕೆ ಹೆಸರಾಗಿದೆ. ಇಂದು ಸಮಾಜವು ಆಧುನಿಕತೆಗೆ ತೆರೆದುಕೊಂಡಿದ್ದರೂ ವಿಶ್ವಕರ್ಮರು ರೂಪಿಸಿದ ಕಲೆ ಮತ್ತು ವಿನ್ಯಾಸಗಳು ಇಂದಿಗೂ ಮಾದರಿಯಾಗಿವೆ ಎಂದು ವಿವರವಾಗಿ ಮಾತನಾಡಿದರು.
ಕಾರ್ಯಕ್ರಮ ಸಾನಿದ್ಯ ವಹಿಸಿದ್ದ ಶ್ರೀ ಸುಬ್ರಹ್ಮಣ್ಯ ಆಚಾರ್ಯರು ಮತ್ತು ಅಭಿನವ ಶ್ರೀಕಂಠ ಸ್ವಾಮಿಗಳು ಆಶಿರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗೇಶಕುಮಾರ ಕಂಸಾಳೆ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಕರಿಯಪ್ಪ, ತಾಲ್ಲೂಕಾಧಿಕಾರಿ ಪ್ರಭು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಸೇರಿದಂತೆ ಹಲವು ಮುಖಂಡರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.
ಶ್ರೀಶೈಲ ಪತ್ತಾರ ಹಾಗೂ ತಂಡದವರು ವಂದೇ ಮಾತರಂ ಗೀತೆ, ನಾಡಗೀತೆ ಹಾಗೂ ವಿವಿಧ ಸಂಗೀತ ಗಾಯನಗಳನ್ನು ಪ್ರಸ್ತುತ ಪಡಿಸಿದರು. ಹನುಮಂತಪ್ಪ ಕುರಿ ಅವರು ಕಾರ್ಯಕ್ರಮ ನಿರೂಪಿಸಿದರು.
*ಮೆರವಣಿಗೆ:* ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶ್ರೀ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆಯೂ ಶ್ರೀ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು ಗಡಿಯಾರ ಕಂಬ, ಜವಾಹರ ರಸ್ತೆಯ ಮೂಲಕ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ಜರುಗಿತು.
****
Total Views: 1
ಜಾಹೀರಾತು
Share This Article