ಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ

H.Mallikarjun
H.Mallikarjun - Kalyanasiri
3 Min Read

Launch of a three-day capacity building program in Koppal

ಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್.
ಕೊಪ್ಪಳ ಆಗಸ್ಟ್ 12 (ಕರ್ನಾಟಕ ವಾರ್ತೆ): ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದಾಗಿದೆ ಎಂದು ತ್ವರಿತಗತಿ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಮಧು ಎನ್.ಆರ್. ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಹಾಗೂ ಎನ್‌ಪೋಲ್ಡ್ ಟ್ರಸ್ಟ್, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ನಗರದ ಹೊಟೇಲ್ ಫಾರ್ಚೂನ್‌ನಲ್ಲಿ ಆಗಸ್ಟ್ 12 ರಿಂದ 14ರವರೆಗೆ ಹಮ್ಮಿಕೊಂಡಿದ್ದ ಬೆಂಬಲ ವ್ಯಕ್ತಿಗಳಿಗಾಗಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ನಿಯಮಾವಳಿಗಳು-2020ರನ್ವಯ, ಲೈಂಗಿಕ ಅಪರಾಧಕ್ಕೆ ಒಳಗಾದ ಮಕ್ಕಳಿಗೆ ತನಿಖೆ ಹಾಗೂ ವಿಚಾರಣೆಯ ಸಂದರ್ಭದಲ್ಲಿ ಅಗತ್ಯ ನೆರವು ಒದಗಿಸುವವರು ಬೆಂಬಲ ವ್ಯಕ್ತಿಗಳಾಗಿರುತ್ತಾರೆ. ಮಕ್ಕಳ ದೈಹಿಕ, ಮಾನಸಿಕ ಹಾಗೂ ಆರೋಗ್ಯ ಸ್ಥಿತಿಗತಿ, ಶಿಕ್ಷಣದ ಪುನರಾರಂಭ, ಮುಂದುವರಿದ ಶಿಕ್ಷಣ ಅಥವಾ ಅಗತ್ಯವಿದ್ದಲ್ಲಿ ಶಾಲೆ ಬದಲಾವಣೆ ಕುರಿತು ಪ್ರತಿ ತಿಂಗಳು ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಸಲ್ಲಿಸಬೇಕು. ಇದರಿಂದ ಮಗುವಿಗೆ ಅಗತ್ಯ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಬಾಧಿತ ಮಗು ಅಥವಾ ಮಗುವಿನ ಪರವಾಗಿ ಮಧ್ಯಂತರ ಪರಿಹಾರಕ್ಕಾಗಿ ತ್ವರಿತಗತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಈ ಕುರಿತು ಮಕ್ಕಳಿಗೆ ಸೂಕ್ತ ಮಾಹಿತಿ ನೀಡಬೇಕು. ಇದರಿಂದ ಯಾವುದೇ ಆಮಿಷ ಅಥವಾ ಆಸೆಗೆ ಒಳಗಾಗಿ ಮಕ್ಕಳು ತಮ್ಮ ಹೇಳಿಕೆಗಳನ್ನು ಬದಲಾಯಿಸುವುದನ್ನು ತಡೆಯಲು ಹಾಗೂ ಆರೋಪಿತರು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ಅವರು ಮಾತನಾಡಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ನಿಯಮಾವಳಿಗಳು-2020 ದೇಶದಾದ್ಯಂತ ಜಾರಿಯಲ್ಲಿರುವ ಏಕರೂಪದ ನಿಯಮಾವಳಿಗಳಾಗಿವೆ. ಈ ನಿಯಮಾವಳಿಗಳ ಜೀವಾಳವೇ ಬೆಂಬಲ ವ್ಯಕ್ತಿಗಳು. ವಿಚಾರಣೆ ಪ್ರಕ್ರಿಯೆಯಲ್ಲಿ ಬಾಧಿತ ಮಗುವಿಗೆ ಮಾನಸಿಕ ಸ್ಥೈರ್ಯ, ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿ ಮಗುವಿನ ಮನೋಬಲವನ್ನು ಹೆಚ್ಚಿಸುವಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ನ್ಯಾಯಾಲಯದ ಆದೇಶದ ಅನುಸಾರ ಬಾಧಿತರಿಗೆ ಪರಿಹಾರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ತುರ್ತಾಗಿ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಅವರು ಮಾತನಾಡಿ, ನಿಯಮಾವಳಿಗಳನ್ವಯ ಬೆಂಬಲ ವ್ಯಕ್ತಿಗಳು ಬಾಧಿತ ಮಗು, ವಿವಿಧ ಇಲಾಖೆಗಳು ಹಾಗೂ ಸಮುದಾಯದ ನಡುವೆ ಸಮನ್ವಯಕಾರರಾಗಿ ಕಾರ್ಯನಿರ್ವಹಿಸುವುದು ಅತ್ಯವಶ್ಯಕವಾಗಿದೆ. ಮಗುವಿನ ಘನತೆಯನ್ನು ಕುಟುಂಬ ಮತ್ತು ಸಮುದಾಯದಲ್ಲಿ ಪುನರ್‌ಸ್ಥಾಪಿಸುವುದರೊಂದಿಗೆ, ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸಲು ಪೂರಕವಾದ ವಾತಾವರಣ ನಿರ್ಮಿಸುವುದು ಬೆಂಬಲ ವ್ಯಕ್ತಿಗಳ ಪ್ರಮುಖ ಜವಾಬ್ದಾರಿಯಾಗಿದೆ. ಆದ್ದರಿಂದ ಎಲ್ಲರೂ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಮಕ್ಕಳ ರಕ್ಷಣೆಯಲ್ಲಿ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ದಿವ್ಯಾ ಜೋಗಿ, ಎನ್‌ಪೋಲ್ಡ್ ಟ್ರಸ್ಟ್ನ ಖುಷಿ ಕುಶಾಲಪ್ಪ ಹಾಗೂ ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಹರೀಶ ಜೋಗಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಬೆಂಬಲ ವ್ಯಕ್ತಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಬಸಮ್ಮ ನಿರೂಪಿಸಿದರು. ಪ್ರತಿಭಾ ಪ್ರಾರ್ಥಿಸಿದರು. ಅಮರಮ್ಮ ಸ್ವಾಗತಿಸಿದರು. ರವಿಕುಮಾರ ಪವಾರ ವಂದಿಸಿದರು.
Total Views: 0
Share This Article