nvitation to Gavisri to inaugurate Mysuru Dasara: A matter of pride for Koppal.
ಮೈಸೂರು ದಸರಾ ಚಾಲನೆಗೆ ಗವಿಶ್ರೀಗಳಿಗೆ ಆಹ್ವಾನ: ಕೊಪ್ಪಳಕ್ಕೆ ಹೆಮ್ಮೆ
ಗವಿಮಠದ ಸಮಾಜಮುಖಿ ಸೇವೆಗೆ ಸಂದ ಗೌರವ; ಸರ್ಕಾರದ ನಿರ್ಧಾರಕ್ಕೆ ಜ್ಯೋತಿ ಎಂ. ಗೊಂಡಬಾಳ ಅಭಿನಂದನೆ
ಕೊಪ್ಪಳ: ನಾಡಿನ ಐತಿಹಾಸಿಕ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ಚಾಲನೆ ನೀಡಲು ಕೊಪ್ಪಳದ ಗವಿಸಿದ್ಧೇಶ್ವರ ಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳನ್ನು ಆಹ್ವಾನಿಸಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕರ್ನಾಟಕ ಸರ್ಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವ ಶಿವರಾಜ ಎಸ್. ತಂಗಡಗಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರನ್ನು ಅಭಿನಂದಿಸಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೊಪ್ಪಳದ ಗವಿಮಠದ ಜಾತ್ರೆಗೆ ಆಹ್ವಾನಿಸಿ, ಮಠದ ವೈಭವ, ತ್ರಿವಿಧ ದಾಸೋಹ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಗಳನ್ನು ಪರಿಚಯಿಸಲಾಗಿತ್ತು. ಗವಿಮಠದ ಸಮಾಜಮುಖಿ ಹಾಗೂ ಪ್ರಗತಿಪರ ಕಾರ್ಯಗಳೇ ಇಂದು ಶ್ರೀಗಳನ್ನು ಅಂತರರಾಷ್ಟ್ರೀಯ ಖ್ಯಾತಿಯ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಆಹ್ವಾನಿಸುವಂತಹ ಗೌರವಕ್ಕೆ ಕಾರಣವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ತಮಗೆ ದೊರೆತಿರುವ ಈ ಗೌರವವನ್ನು ಮತ್ತಷ್ಟು ಸಮಾಜಮುಖಿ ಹಾಗೂ ಜನಪರ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಮೈಸೂರು ಅರಮನೆಯಲ್ಲಿರುವ ರತ್ನಖಚಿತ ಅಂಬಾರಿ ಹಾಗೂ ಅದರ ಐತಿಹಾಸಿಕ ಹಿನ್ನೆಲೆಯೊಂದಿಗೆ ಕೊಪ್ಪಳದ ಕಂಪಿಲರಾಯನ ಪುತ್ರ ರಾಜಾ ಗಂಡುಗಲಿ ಕುಮಾರರಾಮನ ನೆನಪೂ ಈ ಸಂದರ್ಭದಲ್ಲಿ ಮೂಡುತ್ತದೆ. ಅಂತಹ ಐತಿಹಾಸಿಕ ಪರಂಪರೆಯೊಂದಿಗೆ ನಂಟು ಹೊಂದಿರುವ ಮೈಸೂರು ದಸರಾಕ್ಕೆ ನಮ್ಮೂರಿನ ಶ್ರೀಗಳು ಚಾಲನೆ ನೀಡುತ್ತಿರುವುದು ಕೊಪ್ಪಳದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಜ್ಯೋತಿ ಎಂ. ಗೊಂಡಬಾಳ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಬಲ್ಡೋಟಾ ಕಂಪನಿ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ, ಸ್ಥಳೀಯ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮನವರಿಕೆ ಮಾಡುವ ಅವಕಾಶವೂ ಶ್ರೀಗಳಿಗೆ ದೊರೆತಿದೆ. ಇಂತಹ ಸಂದರ್ಭಗಳಲ್ಲಿ ಶ್ರೀಗಳು ನಾಡಿನ ಹಿತ ಹಾಗೂ ಜನರ ಆಶಯಗಳನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡುವ ಗೌರವ ದೊರೆತಿರುವುದು ಕೊಪ್ಪಳ ಮಾತ್ರವಲ್ಲದೆ ಇಡೀ ಉತ್ತರ ಕರ್ನಾಟಕ ಹಾಗೂ ಸಿದ್ಧ ಪರಂಪರೆಗೆ ಸಂದಿರುವ ದೊಡ್ಡ ಗೌರವವಾಗಿದೆ ಎಂದು ಜ್ಯೋತಿ ಎಂ. ಗೊಂಡಬಾಳ ಅಭಿಪ್ರಾಯಪಟ್ಟಿದ್ದಾರೆ.




