Mass public awareness rally in Koppal on August 9 demanding 7% reservation for the Valmiki Nayaka community.

ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ 7 ಮೀಸಲಾತಿಗಾಗಿ ಆಗ್ರಹಿಸಿ ಆಗಸ್ಟ್-9 ರಂದು
ಕೊಪ್ಪಳದಲ್ಲಿ ಬೃಹತ್ ಜನಜಾಗೃತಿ ಸಮಾವೇಶ

ಗಂಗಾವತಿ: ನಮ್ಮ ವಾಲ್ಮೀಕಿ ನಾಯಕ ಸಮಾಜವು ಸುದೀರ್ಘ ಕಾಲದಿಂದ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನ್ಯಾಯಯುತವಾದ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದಿದ್ದು, ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕಾದರೆ, ನಮ್ಮ ಸಮಾಜದ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 7% ಮೀಸಲಾತಿ ಸಿಗುವುದು ಅತ್ಯಂತ ಅಗತ್ಯವಾಗಿದೆ ಎಂದು ಬಿಜೆಪಿ ಯ ರಾಜ್ಯ ಎಸ್.ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ವೀರಭದ್ರಪ್ಪ ನಾಯಕ ಹೇಳಿದರು.
ಅವರು ಆಗಸ್ಟ್-8 ಶನಿವಾರ ಪಕ್ಷದ ಗಂಗಾವತಿ ವಿಧಾನಸಭಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ನಮ್ಮ ಸಮಾಜವು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಶೇ 7 ಮೀಸಲಾತಿಯನ್ನು ನೀಡಲೇಬೇಕೆಂದು ಸರ್ಕಾರಕ್ಕೆ ಆಗ್ರಹಿಸಿ ಆಗಸ್ಟ್-9 ಭಾನುವಾರ ಕೊಪ್ಪಳ ನಗರದಲ್ಲಿ ನಮ್ಮ ವಾಲ್ಮೀಕಿ ನಾಯಕ ಸಮಾಜದ ಶೇ. 7% ಮೀಸಲಾತಿಯನ್ನು ಸಂಪೂರ್ಣವಾಗಿ ಅಂಗೀಕರಿಸಿ, ಅನುಷ್ಠಾನಗೊಳಿಸಬೇಕು ಎಂಬ ದೃಢ ಸಂಕಲ್ಪದೊಂದಿಗೆ ‘ಬೃಹತ್ ಜನಜಾಗೃತಿ ಸಮಾವೇಶ’ ನಡೆಯಲಿದೆ. ಈ ಸಮಾವೇಶದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಅದೇರೀತಿ ಈ ಪತ್ರಿಕಾಗೋಷ್ಠಿಯಲ್ಲಿ ಎಸ್.ಟಿ ಮೋರ್ಚಾ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರಾದ ಅರ್ಜುನ ನಾಯಕ ಮಾತನಾಡಿ, ಈ ಐತಿಹಾಸಿಕ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಲು ಕೊಪ್ಪಳದಲ್ಲಿ ನಾಳೆ ನಡೆಯುವ ಬೃಹತ್ ಸಮಾವೇಶದಲ್ಲಿ ಜಿಲ್ಲೆಯ ಎಲ್ಲಾ ಕಡೆಗಳಿಂದ ಸಮಾಜದವರು ಪಾಲ್ಗೊಂಡು ನಮ್ಮ ಸಮಾಜದ ಒತ್ತಾಯವನ್ನು ಸರ್ಕಾರದ ಗಮನಕ್ಕೆ ತರಬೇಕೆಂದು ಹೇಳಿದರು.
ಮುಂದುವರೆದು ಎಸ್.ಟಿ ಮೋರ್ಚಾ ಗಂಗಾವತಿ ನಗರ ಮಂಡಲ ಅಧ್ಯಕ್ಷರಾದ ಹನುಮಂತಪ್ಪ ನಾಯಕ ಮಾತನಾಡಿ,ಈ ಪತ್ರಿಕಾಗೋಷ್ಠಿಯ ಮೂಲಕ ನಾವು ಗಂಗಾವತಿ ನಗರ ಹಾಗೂ ತಾಲೂಕಿನ ಎಲ್ಲಾ ವಾಲ್ಮೀಕಿ ನಾಯಕ ಸಮಾಜದ ಮುಖಂಡರಲ್ಲಿ, ಯುವಕರಲ್ಲ, ತಾಯಂದಿರಲ್ಲಿ ಮತ್ತು ಪ್ರಬುದ್ಧ ನಾಗರಿಕರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ ಈ ಬೃಹತ್ ಜನಜಾಗೃತಿ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ನಮ್ಮ ಹಕ್ಕಿನ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.
ಗಂಗಾವತಿ ಗ್ರಾಮೀಣ ಮಂಡಲ ಉಪಾಧ್ಯಕ್ಷರಾದ ಶಿವಾನಂದಗೌಡ ಪೊಲೀಸ್ ಪಾಟೀಲ್ ಮಾತನಾಡಿ, ನಮ್ಮ ವಾಲ್ಮೀಕಿ ನಾಯಕ ಸಮುದಾಯಕ್ಕೆ ಸರಿಯಾದ ಮೀಸಲಾತಿ ಸಿಗದೇ ಇದ್ದುದರಿಂದ ಸರ್ಕಾರದ ಯೋಜನೆಗಳನ್ನು ಪಡೆಯಲು ನಮ್ಮ ಸಮಾಜ ಹಿಂದೆ ಉಳಿಯುತ್ತಿದ್ದುದಲ್ಲದೇ ನಮ್ಮ ಸಮಾಜದ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ತಾರತಮ್ಯ ನಡೆಯುತ್ತಿದೆ, ಈ ತಾರತಮ್ಯವನ್ನು ಹೋಗಲಾಡಿಸಲು ನಮ್ಮ ಸಮಾಜಕ್ಕೆ ಶೇ 7 ರಷ್ಟು ಮೀಸಲಾಗಿ ಅವಶ್ಯಕವಾಗಿದ್ದು ಈ ಸಮಾವೇಶಕ್ಕೆ ಗಂಗಾವತಿ ಗ್ರಾಮೀಣ ಭಾಗದ ಎಲ್ಲಾ ವಾಲ್ಮೀಕಿ ನಾಯಕ ಸಮಾಜದವರು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಎಸ್.ಟಿ ಮೋರ್ಚಾ ಗಂಗಾವತಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಮಾರುತಿ ನಾಯಕ, ಬಿಜೆಪಿ ಯುವಮೋರ್ಚಾ ಗಂಗಾವತಿ ನಗರ ಘಟಕ ಅಧ್ಯಕ್ಷರಾದ ರಮೇಶ ಹೊಸಮಲಿ ಹಾಗೂ ಪಕ್ಷದ ಮುಖಂಡರಾದ ಮಲ್ಲೇಶಪ್ಪ ನಾಯಕ, ಹನುಮಂತಪ್ಪ ಚೌಡ್ಕಿ, ರಮೇಶ ಚೌಡ್ಕಿ, ಗಂಗಾವತಿ ನಗರ ಘಟಕ ಉಪಾಧ್ಯಕ್ಷರಾದ ಪಂಪಣ್ಣ ನಾಯಕ ಹಾಗೂ ಕಾರ್ಯಕರ್ತರಾದ ಮಂಜುನಾಥ ಮಳ್ಳಿಕೇರಿ, ಯಮನೂರಪ್ಪ ನಾಯಕ ಕೊರಮ್ಮಕ್ಯಾಂಪ್, ಹರೀಶ ನಾಯಕ, ಕೃಷ್ಣ ನಾಯಕ, ವಿರುಪಾಕ್ಷಿ ನಾಯಕ, ಲಕ್ಷ್ಮಣ ನಾಯಕ, ಚಿರಂಜೀವಿ ನಾಯಕ, ಬಸಪ್ಪ ನಾಯಕ, ದೇವರಾಜ ನಾಯಕ, ಅಂಬಣ್ಣ ನಾಯಕ, ಹನುಮಂತ ನಾಯಕ, ನಾಗರಾಜ ನಾಯಕ, ಆಂಜನೇಯ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
