D.El.Ed. exams from August 10: Prohibitory orders imposed.
ಆಗಸ್ಟ್ 10 ರಿಂದ ಡಿ.ಇಎಲ್.ಇಡಿ ಪರೀಕ್ಷೆ : ನಿಷೇಧಾಜ್ಞೆ ಜಾರಿ

ಕೊಪ್ಪಳ ಆಗಸ್ಟ್ 07, (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಆಗಸ್ಟ್ 10 ರಿಂದ ಆಗಸ್ಟ್ 21 ರವರೆಗೆ ಡಿ.ಇಎಲ್.ಇಡಿ ಪರೀಕ್ಷೆಗಳು ನಡೆಯಲಿದ್ದು, ಈ ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಆದೇಶ ಹೊರಡಿಸಿದ್ದಾರೆ.
ಕೊಪ್ಪಳದ ಭಾಗ್ಯನಗರದ ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಪರೀಕ್ಷಾ ಕೇಂದ್ರದಲ್ಲಿ ನಿಗದಿತ ದಿನಾಂಕಗಳಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ.
ನಿಷೇಧಾಜ್ಞೆ ಆದೇಶದನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್, ಪೇಜರ್, ಜರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಹಾಗೂ ನಿಯೋಜಿತ ಶಿಕ್ಷಕರನ್ನು, ಜಾಗೃತ ದಳದವರನ್ನು ಹೊರತುಪಡಿಸಿ ಇನ್ನುಳಿದವರಿಗೆ ಪರವಾನಿಗೆ ಇಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಮಾಡುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
