ಸಮಸ್ತ ಆ್ಯಪ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಮನವಿ
ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾ ಮಟ್ಟದ ಹೋರಾಟದ ಎಚ್ಚರಿಕೆ.

ಕೊಪ್ಪಳ, ಜುಲೈ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಾದ ಕುಕುನೂರು, ಯಲಬುರ್ಗಾ, ಮುದೋಳ, ಬೇವೂರು, ಗುನ್ನಾಳ, ವಜ್ರಬಂಡಿ, ಹುಲಗಿ, ಗಂಗಾವತಿ ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು ಸಂಬಂಧಿಸಿದ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸಮಸ್ತ (SAMASTHA) ಆ್ಯಪ್ ಬಳಕೆಯಿಂದ ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಗಂಭೀರ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕೆಂದು ಆಗ್ರಹಿಸಿದರು. ಆಶಾ ಕಾರ್ಯಕರ್ತೆಯರಿಗೆ ಇಲಾಖೆಯಿಂದ ಗುಣಮಟ್ಟದ ಮೊಬೈಲ್ ಅಥವಾ ಟ್ಯಾಬ್ಲೆಟ್‌ಗಳನ್ನು ನೀಡದೇ ಡಿಜಿಟಲ್ ಕೆಲಸವನ್ನು ಕಡ್ಡಾಯಗೊಳಿಸಿರುವುದು, ಮೊಬೈಲ್ ಬಳಕೆಗೆ ನೀಡಲಾಗುತ್ತಿದ್ದ ಭತ್ಯೆಯನ್ನು ಸ್ಥಗಿತಗೊಳಿಸಿರುವುದು, ವೈಯಕ್ತಿಕ ಮೊಬೈಲ್‌ಗಳಲ್ಲಿ ಇಲಾಖೆಯ ಆ್ಯಪ್ ಬಳಸುವ ಅನಿವಾರ್ಯತೆ ಉಂಟಾಗಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಮನವಿಯಲ್ಲಿ ವಿವರಿಸಲಾಗಿದೆ.
ಸಮಸ್ತ ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಿದ ಬಳಿಕ ದಾಖಲೆಗಳು ಕಣ್ಮರೆಯಾಗುವುದು, ಮಾಹಿತಿ ಸಂಗ್ರಹವಾಗದಿರುವುದು, ಡುಪ್ಲಿಕೇಟ್ ಎಂಟ್ರಿಗಳು ಉಂಟಾಗುವುದು, ತಾಂತ್ರಿಕ ದೋಷಗಳಿಂದ ಕೆಲಸ ನಿರ್ವಹಿಸಲು ತೊಂದರೆಯಾಗುವುದು ಸೇರಿದಂತೆ ಅನೇಕ ಸಮಸ್ಯೆಗಳಿಂದ ಆಶಾ ಕಾರ್ಯಕರ್ತೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರ ಮೇಲೆ ಡಿಜಿಟಲ್ ದಾಖಲಾತಿಗಳ ಹೆಸರಿನಲ್ಲಿ ಹೆಚ್ಚುವರಿ ಒತ್ತಡ ಹೇರಲಾಗುತ್ತಿದ್ದು, ಇದರಿಂದ ಜನರ ಆರೋಗ್ಯ ಸೇವೆಗೆ ಸಮಯ ನೀಡಲು ಅಡಚಣೆ ಉಂಟಾಗುತ್ತಿದೆ ಎಂದು ಸಂಘದ ಮುಖಂಡರು ಆರೋಪಿಸಿದರು. ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಹಿಡಿದು, ಅಗತ್ಯ ಸೌಲಭ್ಯಗಳನ್ನು ಒದಗಿಸುವವರೆಗೆ ಸಮಸ್ತ ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಬಾರದು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ, ತಾಲೂಕು ಅಧ್ಯಕ್ಷರಾದ ಶಂಕ್ರಮ್ಮ ಹಳ್ಳಿಕೇರಿ, ವಿಜಯಲಕ್ಷ್ಮಿ ಆಚಾರ್, ಸುನಿತಾ ಹುಲಗಿ, ಗಾಯತ್ರಿ ಹಾಗೂ ಮುಖಂಡರಾದ ಅನ್ನಪೂರ್ಣ, ಶಿವಮ್ಮ, ದೇವಕ್ಕ, ಶಬನಾ, ಶಾರದಾ, ತಿಪ್ಪಮ್ಮ, ಲಾಲ್ ಬಿ ಸೇರಿದಂತೆ ಹಲವಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಸಮಸ್ತ ಆ್ಯಪ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ತಕ್ಷಣ ಬಗೆಹರಿಸದಿದ್ದಲ್ಲಿ ಆಶಾ ಕಾರ್ಯಕರ್ತೆಯರನ್ನು ಸಂಘಟಿಸಿ ಜಿಲ್ಲಾಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
