
Annabhagya Yojana: Distribution of rations for the month of June-2026

ಅನ್ನಭಾಗ್ಯ ಯೋಜನೆ: ಜೂನ್-2026ರ ಮಾಹೆಯ ಪಡಿತರ ವಿತರಣೆ

ಕೊಪ್ಪಳ ಜೂನ್ 08 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಜೂನ್-2026ರ ಮಾಹೆಯ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೊಪ್ಪಳ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ವಿಶ್ವನಾಥಗೌಡ ಎಂ.ಎನ್. ಅವರು ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಜೂನ್-2026ರ ಮಾಹೆಯಲ್ಲಿ ಮೇ-2026 ಮತ್ತು ಜೂನ್-2026ರ ಮಾಹೆಗಳ ಅನ್ನಭಾಗ್ಯ ಅಕ್ಕಿ ದಾಸ್ತಾನನ್ನು ಒಟ್ಟಿಗೆ ಜೂನ್-2026ರ ಮಾಹೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡುದಾರರಿಗೆ ವಿತರಿಸಲು ರಾಜ್ಯ ಸರ್ಕಾರವು ನಿರ್ದೇಶನ ನೀಡಿರುತ್ತದೆ. ಅದರಂತೆ ಕೊಪ್ಪಳ ಜಿಲ್ಲೆಯ ಪಡಿತರ ವಿತರಣೆಯ ಪ್ರಮಾಣ ಈ ರೀತಿಯಲ್ಲಿರುತ್ತದೆ.
ಅಂತ್ಯೋದಯ ಅನ್ನಯೋಜನೆ (ಎ.ಎ.ವೈ) ಪಡಿತರ ಚೀಟಿಯಲ್ಲಿ 1 ರಿಂದ 3 ಸದಸ್ಯರಿರುವ ಪಡಿತರ ಚೀಟಿಗೆ ಈ ಮಾಹೆ ಹಂಚಿಕೆ ಇರುವುದಿಲ್ಲ. ಈ ಕಾರ್ಡುದಾರರಿಗೆ ಹಿಂದಿನ ತಿಂಗಳಲ್ಲೇ ಅಂದರೆ, ಮೇ-2026ರ ಮಾಹೆಯಲ್ಲಿಯೇ ಮೇ ಮತ್ತು ಜೂನ್ ಮಾಹೆಯ ಒಟ್ಟು ಅಕ್ಕಿ 70 ಕೆ.ಜಿ ಪಡಿತರ ಈಗಾಗಲೇ ನೀಡಲಾಗಿರುತ್ತದೆ.
ಅಂತ್ಯೋದಯ ಅನ್ನಯೋಜನೆ (ಎ.ಎ.ವೈ) ಪಡಿತರ ಚೀಟಿಗಳ 4 ಸದಸ್ಯರನ್ನು ಹೊಂದಿರುವ ಕಾರ್ಡುದಾರರಿಗೆ 10 ಕೆಜಿ, 5 ಸದಸ್ಯರಿರುವ ಕಾರ್ಡುದಾರರಿಗೆ 30 ಕೆಜಿ, 6 ಸದಸ್ಯರಿರುವ ಕಾರ್ಡುದಾರರಿಗೆ 50 ಕೆಜಿ, 7 ಸದಸ್ಯರಿರುವ ಕಾರ್ಡುದಾರರಿಗೆ 70 ಕೆಜಿ, 8 ಸದಸ್ಯರಿರುವ ಕಾರ್ಡುದಾರರಿಗೆ 90 ಕೆಜಿ, 9 ಸದಸ್ಯರಿರುವ ಕಾರ್ಡುದಾರರಿಗೆ 110 ಕೆಜಿ, 10 ಸದಸ್ಯರಿರುವ ಕಾರ್ಡುದಾರರಿಗೆ 130 ಕೆಜಿ, 10 ಕ್ಕಿಂತ ಹೆಚ್ಚು ಸದಸ್ಯರಿರುವ ಅಂತ್ಯೋದಯ ಪಡಿತರಕಾರ್ಡುದಾರರಿಗೆ ಈ ಅನುಪಾತದಲ್ಲಿಯೇ ಮೇ ಮತ್ತು ಜೂನ್ ಮಾಹೆಯ ಪಡಿತರವನ್ನು ಜೂನ್ ಮಾಹೆಯಲ್ಲಿ ವಿತರಿಸಲಾಗುತ್ತದೆ.
ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 10 ಕೆಜಿ ಯಂತೆ ಮೇ ಮಾಹೆಯಾ 10 ಕೆಜಿ ಮತ್ತು ಜೂನ್ ಮಾಹೆಯ 10 ಕೆಜಿ ಸೇರಿ ಒಟ್ಟು 20 ಕೆಜಿ ಪಡಿತರ ವಿತರಣೆ ಮಾಡಲಾಗುವುದು ಎಂದು ಕೊಪ್ಪಳ ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
