
ಹೆಚ್ಚಿನ ಜನರಿರುವ ಪ್ರದೇಶಗಳಲ್ಲಿ ಗ್ಯಾರಂಟಿ ಯೋಜನೆಗಳ ಜಾಗೃತಿ ಮೂಡಿಸಿ – ರೆಡ್ಡಿ ಶ್ರೀನಿವಾಸ
Launch of the promotional vehicle for the five guarantee schemes

ಕೊಪ್ಪಳ ಫೆಬ್ರುವರಿ 20 (ಕರ್ನಾಟಕ ವಾರ್ತೆ): ಹೆಚ್ಚಿನ ಜನರಿರುವ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರ ಹಮ್ಮಿಕೊಳ್ಳುವ ಮೂಲಕ ಮತ್ತಷ್ಟು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಹೇಳಿದರು.
ಅವರು ಶುಕ್ರವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆ ಕುರಿತಂತೆ ಎಲ್‌ಇಡಿ ವಾಹನದ ಮೂಲಕ ಕಿರುಚಿತ್ರಗಳ ಪ್ರದರ್ಶನ, ಸಂಗೀತ, ಬೀದಿ ನಾಟಕದಿಂದ ಜನಸಾಮಾನ್ಯರಿಗೆ ಮಾಹಿತಿ ಹಾಗೂ ಪ್ರಚಾರ ನೀಡಲು ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಪ್ರಚಾರ ವಾಹನ ಹಾಗೂ ಕಲಾ ಜಾಥಾ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ, ಮಾತನಾಡಿದರು.

ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಎಲ್ಲಾ ಅರ್ಹ ಫಲಾನುಭವಿಗಳಿಗೆ ನೇರವಾಗಿ ಈ ಯೋಜನೆಗಳ ಲಾಭವನ್ನು ತಲುಪಿಸುವಂತಹ ಕೆಲಸ ನಮ್ಮ ಸರ್ಕಾರದಿಂದ ಆಗುತ್ತಿದೆ. ಈ ಎಲ್ಲಾ ಐದು ಯೋಜನೆಗಳ ಬಗ್ಗೆ ಪ್ರತಿಯೊಂದು ಗ್ರಾಮ ಮತ್ತು ಪಟ್ಟಣಗಳಲ್ಲಿ ಪ್ರಚಾರ ಆಗಬೇಕೆಂದು ಸರ್ಕಾರವು ಪ್ರಚಾರ ವಾಹನಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ. ಈ ಕಾರ್ಯಕ್ರಮದ ಮೂಲಕ ಪಂಚ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಸಿಗುತ್ತಿರುವ ಲಾಭಗಳ ಕುರಿತು ಜನರಿಗೆ ಅರ್ಥವಾಗುವ ರೀತಿಯಲ್ಲಿ ಕಲಾವಿದರು ಮಾಹಿತಿ ನೀಡಿ, ಐದು ಗ್ಯಾರಂಟಿ ಯೋಜನೆಗಳ ಪ್ರಚಾರ ಕಾರ್ಯಕ್ರಮವು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಸಬೇಕೆಂದರು.
ಕೊಪ್ಪಳ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮಪರ್ಕವಾಗಿ ಅನುಷ್ಠಾನ ಮಾಡಲಾಗುತ್ತಿದ್ದು, ಗೃಹಲಕ್ಷ್ಮೀ ಯೋಜನೆಯಡಿ ಸುಮಾರು 3 ಲಕ್ಷ 19 ಸಾವಿರಕ್ಕೂ ಅಧಿಕ ಫಲಾನುಭವಿಗಳು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ 1581 ಕೋಟಿ ರೂ.ಗಳನ್ನು ಗೃಹಲಕ್ಷ್ಮೀ ಫಲಾನುಭವಿಗಳಿಗೆ ನೀಡಲಾಗಿದೆ. ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುಮಾರು 11 ಕೋಟಿ ಮಹಿಳಾ ಫಲಾನುಭವಿಗಳು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಯು ಪಡಿತರ ಚೀಟಿದಾರರಿಗೆ ತುಂಬಾ ಅನುಕೂಲವಾಗಿದೆ. ಯುವನಿಧಿಯಡಿ 13 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆ ಸಿಗುತ್ತಿದೆ. ಗೃಹಜ್ಯೋತಿಯಡಿ ಜಿಲ್ಲೆಯ ಶೇ. 98.5 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ ಅವರು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣ ಮಾಡುವ ಮತ್ತು ಸ್ವಾವಲಂಬನೆಯತ್ತ ತೆಗೆದುಕೊಂಡು ಹೋಗುವ ಕೆಲಸವಾಗುತ್ತಿದೆ. ಈ ಯೋಜನೆಗಳಿಗಾಗಿ ಸರ್ಕಾರವು 52 ಸಾವಿರ ಕೋಟಿ ರೂ.ಗಳನ್ನು ಪ್ರತಿವರ್ಷ ಮೀಸಲಿಟ್ಟು, ಬಡವರಿಗೆ, ಮಹಿಳೆಯರಿಗೆ ಆರ್ಥಿಕ ಧನ ಸಹಾಯವನ್ನು ಮಾಡಲಾಗುತ್ತಿದೆ. ಯಾವುದೇ ಒಂದು ಮಾನವನ ಸಬಲೀಕರಣವಾಗಬೇಕಾದರೆ, ಕನಿಷ್ಠ ಮೂಲಭೂತ ಬದುಕುವ ಹಕ್ಕನ್ನು ಕೊಡಬೇಕೆಂದು ಸಂವಿಧಾನ ಹೇಳುತ್ತದೆ. ಅಂತಹ ಹಕ್ಕನ್ನು ಗ್ಯಾರಂಟಿ ಯೋಜನೆಗಳ ಮೂಲಕ ನಮ್ಮ ಸರ್ಕಾರ ನೀಡುತ್ತಿದೆ. ಈ ಎಲ್ಲಾ ಯೋಜನೆಗಳ ಮೂಲಕ ಯುವ ಜನರಿಗೆ ಮಹಿಳೆಯರಿಗೆ ಮತ್ತು ಎಲ್ಲರಿಗೂ ಶಕ್ತಿ ಕೊಡುವ ಕೆಲಸ ಆಗುತ್ತಿದೆ. ಇಂತಹ ಯೋಜನೆಗಳನ್ನು ಮತ್ತಷ್ಟು ಜನರಿಗೆ ತಲುಪಿಸುವ ಮತ್ತು ಅವುಗಳ ಬಗ್ಗೆ ಮಾಹಿತಿ ಒದಗಿಸುವ ಕೆಲಸ ಈ ಪ್ರಚಾರ ಕಾರ್ಯಕ್ರಮದ ಮೂಲಕ ಆಗಲಿ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಮಾನ್ವಿ ಪಾಶಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸುರೇಶ್ ಜಿ., ಕಾರಟಗಿ ತಾ.ಪಂ ಕೆ.ಡಿ.ಪಿ ಸದಸ್ಯರಾದ ದಾವಲಸಾಬ್, ದೇಸಾಯಿ ಕ್ಯಾಂಪ್ ಗ್ರಾ.ಪಂ ಸದಸ್ಯರಾದ ಮಹೇಬೂಬ್, ಕಲಾವಿದ ಭಾಷು ಹಿರೇಮನಿ, ರಮೇಶ ಸಿಂಧನೂರು, ವಾರ್ತಾ ಇಲಾಖೆಯ ಸಿಬ್ಬಂದಿಗಳಾದ ಎನ್.ತಿಪ್ಪಯ್ಯ ನಾಯ್ಡು, ಆರೀಫ್ ಅಹ್ಮದ್, ಶಿಬಿರಾರ್ಥಿಗಳಾದ ಪ್ರಕಾಶ ಹಾಗೂ ಕಿರಣ ಸೇರಿದಂತೆ ಇತರೆ ಸಿಬ್ಬಂದಿಗಳು ಮತ್ತು ಚಿಕ್ಕಮ್ಯಾಗೇರಿಯ ರಂಗಚೇತನ ಸಾಂಸ್ಕೃತಿ ಕಲಾ ಸಂಸ್ಥೆಯ ಕಲಾವಿದರಾದ ಕಾಳೇಶ್, ಶರಣಪ್ಪ ಮೇಟಿ, ವೀರಯ್ಯ, ಸುಲೋಚನಾ, ಗೌರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




