

ಅಂಚೆ ಇಲಾಖೆಯಿಂದ ಮನೆ ಬಾಗಿಲಿಗೆ ಡಿಜಿಟಲ್ ಜೀವನ್ ಪ್ರಮಾಣಪತ್ರ
Digital Life Certificate at your doorstep from the Postal Department
ಸಾಂದರ್ಭಿಕ ಚಿತ್ರ
ಪಿಂಚಣಿದಾರರಿಗೆ ನ.1ರಿಂದ ಮನೆ ಬಾಗಿಲಲ್ಲೇ ಸೇವೆ; ಕೇವಲ ₹70 ಸೇವಾ ಶುಲ್ಕ
ಕೊಪ್ಪಳ, ಅ.30: ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಪಿಂಚಣಿದಾರರು, ಸೈನಿಕ ಪಿಂಚಣಿದಾರರು ಮತ್ತು ಇಪಿಎಫ್ಒ ಪಿಂಚಣಿದಾರರಿಗೆ ಅಂಚೆ ಇಲಾಖೆ ಮಹತ್ವದ ಸೌಲಭ್ಯ ಒದಗಿಸಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮೂಲಕ ಡಿಜಿಟಲ್ ಜೀವನ್ ಪ್ರಮಾಣಪತ್ರವನ್ನು ಮನೆ ಬಾಗಿಲಲ್ಲೇ ಸಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಪಿಂಚಣಿದಾರರು ಪ್ರತಿವರ್ಷ ತಮ್ಮ ವಾರ್ಷಿಕ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ಕಚೇರಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲುವ ತೊಂದರೆಯನ್ನು ತಪ್ಪಿಸಲು ಈ ಮನೆ ಬಾಗಿಲ ಸೇವೆ ಸಹಕಾರಿಯಾಗಲಿದೆ.
ಅಂಚೆ ಸಿಬ್ಬಂದಿ ಪಿಂಚಣಿದಾರರ ಮನೆಗೆ ಭೇಟಿ ನೀಡಿ, ಬಯೋಮೆಟ್ರಿಕ್ ದೃಢೀಕರಣ ಅಥವಾ ಫೇಸ್ ಆರ್ಡಿ ಆ್ಯಪ್ ಮೂಲಕ ‘ಜೀವನ್ ಪ್ರಮಾಣ’ ವ್ಯವಸ್ಥೆಯಲ್ಲಿ ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಸಲು ನೆರವಾಗಲಿದ್ದಾರೆ. ಇದಕ್ಕಾಗಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ ಹಾಗೂ ಪಿಂಚಣಿ ಖಾತೆ ವಿವರಗಳು ಅಗತ್ಯವಿರುತ್ತವೆ.
ಈ ಸೇವೆಗೆ ಸಾಮಾನ್ಯ ಪಿಂಚಣಿದಾರರಿಗೆ ₹70 ನಾಮಮಾತ್ರದ ಸೇವಾ ಶುಲ್ಕ ವಿಧಿಸಲಾಗುತ್ತದೆ. ಆದರೆ ಇಪಿಎಫ್ಒ ಮತ್ತು ದೂರಸಂಪರ್ಕ ಇಲಾಖೆಯ ಪಿಂಚಣಿದಾರರಿಗೆ ಡಿಜಿಟಲ್ ಜೀವನ್ ಪ್ರಮಾಣಪತ್ರ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ.
ಕರ್ನಾಟಕದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 9,700ಕ್ಕೂ ಹೆಚ್ಚು ಅಂಚೆ ಕಚೇರಿಗಳು ಹಾಗೂ 11,000ಕ್ಕೂ ಹೆಚ್ಚು ಅಂಚೆ ಸಿಬ್ಬಂದಿ ಮತ್ತು ಗ್ರಾಮೀಣ ಡಾಕ್ ಸೇವಕರ ಮೂಲಕ ಈ ಸೇವೆ ಸೇರಿದಂತೆ ವಿವಿಧ ಮನೆ ಬಾಗಿಲ ಸೇವೆಗಳನ್ನು ಒದಗಿಸಲಾಗುತ್ತಿದೆ.
2026ರ ನವೆಂಬರ್ 1ರಿಂದ ಎಲ್ಲ ಅಂಚೆ ಕಚೇರಿಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಪಿಂಚಣಿದಾರರು ಮತ್ತು ಅವರ ಕುಟುಂಬದ ಸದಸ್ಯರು ಈ ಸೌಲಭ್ಯವನ್ನು ಬಳಸಿಕೊಂಡು ಸಮಯ ಮತ್ತು ಪ್ರಯಾಣದ ತೊಂದರೆಯನ್ನು ತಪ್ಪಿಸಿಕೊಳ್ಳಬಹುದು.
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಪಿಂಚಣಿದಾರರು, ಸೈನಿಕ ಪಿಂಚಣಿದಾರರು, ಇಪಿಎಫ್ಒ ಪಿಂಚಣಿದಾರರು ಸೇರಿದಂತೆ ಅರ್ಹ ಎಲ್ಲ ಪಿಂಚಣಿದಾರರು ತಮ್ಮ ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಸಲು ಅಂಚೆ ಇಲಾಖೆ ಒದಗಿಸುವ ಮನೆ ಬಾಗಿಲ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೊಪ್ಪಳ ವಿಭಾಗದ ಅಂಚೆ ಅಧೀಕ್ಷಕ ನಾಗರಾಜ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



